ಒಬ್ಬ ವ್ಯಕ್ತಿಯ ಜೀವನದಲ್ಲಿ ಹುಟ್ಟಿನಿಂದ ಹಿಡಿದು ಸಾವಿನ ತನಕ ನಡೆಯುವ ಪ್ರತಿಯೊಂದು ಘಟನೆಗಳಿಗೆ ಗ್ರಹಗಳ ಪ್ರೇರಣೆಯೇ ಕಾರಣ. ಹುಟ್ಟಿದ ಸಮಯವು ಆತ್ಮದ ಹಿಂದಿನ ಜನ್ಮದ ಪ್ರಾರಬ್ಧ ಕರ್ಮದ ಫಲಕ್ಕೆ ಅನುಗುಣವಾಗಿ ನಿಗದಿಯಾಗಿರುತ್ತದೆ. ಅದೇ ರೀತಿ ಒಬ್ಬ ಮನುಷ್ಯನ ಸಾವು ಕೂಡಾ ಮೊದಲೇ ನಿರ್ಣಯವಾಗಿರುತ್ತದೆ. ಯಾವುದೇ ವ್ಯಕ್ತಿಯ ಸಾವು ಆಕಸ್ಮಿಕವಾಗಿರುವುದಿಲ್ಲ. ಜ್ಯೋತಿಷ್ಯದಲ್ಲಿ ಆಯುಷ್ಯವನ್ನು ಮೂರು ವಿಧವಾಗಿ ವಿಂಗಡಣೆ ಮಾಡಿರುತ್ತಾರೆ. ಅಷ್ಠಮಾಧಿಪತಿಯ ಉಚ್ಛ, ನೀಚ, ಮಿತ್ರ, ಶತ್ರು ಸ್ಥಾನಗಳನ್ನು ವಿಶ್ಲೇಷಿಸಿ ಅದಕ್ಕೆ ಅನುಸಾರವಾಗಿ, ಅಲ್ಫಾಯು, ಮಧ್ಯಾಯು ಮತ್ತು ಪೂರ್ಣಾಯು ಎಂದು ನಿರ್ಧರಿಸುತ್ತಾರೆ. ಆದ ಕಾರಣ ಯಾವುದೇ ವ್ಯಕ್ತಿಯ ಸಾವನ್ನು ಅಕಾಲಿಕ ಮರಣ ಎಂದು ಹೇಳಲಾಗುವುದಿಲ್ಲ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಅಷ್ಠಮ ಸ್ಥಾನವನ್ನು ಆಯುಷ್ಯ ಸ್ಥಾನ ಎಂದು ಪರಿಗಣಿಸಲಾಗುವುದು. ಅದೇ ರೀತಿ ಅಷ್ಠಮ ಸ್ಥಾನದಿಂದ ಅಷ್ಠಮ, ಮೂರನೇ ಮನೆಯನ್ನೂ ಆಯುಷ್ಯ ಸ್ಥಾನ ಎಂದು ಪರಿಗಣಿಸಲಾಗುವುದು(ಭವತ್ ಭವಂ). 12ನೇ ಮನೆಯನ್ನು ಮೋಕ್ಷ ಸ್ಥಾನವೆಂದೂ, ವ್ಯಯ ಸ್ಥಾನ ಎಂದೂ ಹೇಳುತ್ತೇವೆ. 8ನೇ ಮನೆ (ಆಯುಷ್ಯ ಸ್ಥಾನ), ವ್ಯಯಸ್ಥಾನ 7ನೇ ಮನೆ ಆಗಿರುತ್ತದೆ. ಅದೇ ರೀತಿ 3ನೇ ಮನೆಯ ವ್ಯಯಸ್ಥಾನ 2ನೇ ಮನೆ ಆಗಿರುತ್ತದೆ.
ಆದ ಕಾರಣ 7ನೇ ಮತ್ತು 2ನೇ ಮನೆಯನ್ನು ಮಾರಕ ಸ್ಥಾನ ಎಂದು ಪರಿಗಣಿಸಲಾಗುವುದು. ಮಾರಕ ಸ್ಥಾನದ ಅಧಿಪತಿಗಳ ದಶಾ ಮತ್ತು ಭುಕ್ತಿಯ ಸಮಯದಲ್ಲಿ, ವ್ಯಕ್ತಿಗೆ ಸಾವನ್ನು ಕೊಡುವಷ್ಟು ಗ್ರಹಗಳು ಶಕ್ತರಾಗಿರುತ್ತಾರೆ. ಅದೇ ರೀತಿ ಭಾದಕಾಧಿಪತಿಗಳು ಅಂದರೆ ದೇಹ ಭಾದೆಯನ್ನು ಕೊಡುವ ಗ್ರಹಗಳು. ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಗಳನ್ನು ಮೂರು ರೀತಿಯಲ್ಲಿ ವಿಂಗಡಣೆ ಮಾಡಿರುತ್ತಾರೆ.
ಚರ, ಸ್ಥಿರ, ಉಭಯ ರಾಶಿಗಳು ಎಂದು. ಮೇಷ, ಕರ್ಕಾಟಕ, ತುಲಾ, ಮಕರ ಚರ ರಾಶಿಗಳು. ವೃಷಭ, ಸಿಂಹ, ವೃಶ್ಚಿಕ, ಕುಂಭ ಸ್ಥಿರ ರಾಶಿಗಳು. ಮಿಥುನ, ಕನ್ಯಾ, ಧನು, ಮೀನ ಉಭಯ ರಾಶಿಗಳು. ಚರ ರಾಶಿಗೆ, 11ನೇ ಮನೆ ಅಧಿಪತಿ ಭಾದಕಾಧಿಪತಿ, ಸ್ಥಿರ ರಾಶಿಗೆ, 9ನೇ ಮನೆ, ಅಧಿಪತಿ ಭಾದಕಾಧಿಪತಿ. ಉಭಯ ರಾಶಿಗೆ, 7ನೇ ಮನೆ ಅಧಿಪತಿ ಭಾದಕಾಧಿಪತಿಯಾಗಿರುತ್ತಾನೆ.
ಉದಾಹರಣೆಗೆ:
ಮೇಷ ಲಗ್ನಕ್ಕೆ, 11ರ ಅಧಿಪತಿ, ಶನಿ ಭಾದಕಾಧಿಪತಿಯಾಗಿರುತ್ತಾನೆ. ಅದೇ ರೀತಿ 2ನೇ ಮತ್ತು 7ನೇ ಅಧಿಪತಿಗಳಾದ, ಶುಕ್ರನು ಮಾರಕಾಧಿಪತಿಯಾಗಿರುತ್ತಾನೆ. ಆಗ ಶನಿದಶಾ, ಶುಕ್ತ ಭುಕ್ತಿ ಯಾ ಶುಕ್ರ ದಶಾ, ಶನಿ ಭುಕ್ತೆ ಮತ್ತು ರೋಗ ಸ್ಥಾನಾಧಿಪತಿಯಾದ 6ನೇ ಮನೆ ಮತ್ತು ವ್ಯಯ ಸ್ಥಾನಾಧಿಪತಿಯಾದ 12ನೇ ಮನೆಯ ಅಧಿಪತಿಗಳ ದಶಾ ಭುಕ್ತಿ, ಅಂತರ್ ಭುಕ್ತಿ, ಪ್ರಾಣ ಭುಕ್ತಿ ಮತ್ತು ಸೂಕ್ಷ್ಮ ಭುಕ್ತಿಗಳ ಸಮಯದಲ್ಲಿ ಜಾತಕನ ಆಯುಷ್ಯಕ್ಕೆ ಕಂಟಕ ಬರುವ ಸಾಧ್ಯತೆ ಇದೆ. ಆದರೆ ನಂತರ ಬರುವ ದಶಾ ಭುಕ್ತಿಗಳು, ಯೋಗಕಾರಕರಾಗಿದ್ದರೆ, ಈ ಕಂಟಕದಿಂದ ಪಾರಾಗಬಹುದು. ನುರಿತ ಜ್ಯೋತಿಷಿಗಳ ಮಾರ್ಗದರ್ಶನದಿಂದ ಪರಿಹಾರಗಳನ್ನು ಕಂಡುಕೊಳ್ಳಬಹುದು.
ರವೀಂದ್ರ.ಎ. ಜ್ಯೋತಷ್ಯ ವಿಶಾರದ
ಬಿಎಸ್ಸಿ, ಎಲ್ ಎಲ್ ಬಿ
ಜ್ಯೋತಿಷ್ಯ ವಿಶ್ಲೇಷಕರು, ಉಡುಪಿ