Advertisement

2016ರಲ್ಲಿ ಬಂದಿದ್ದು ಅಷ್ಟಿಷ್ಟು, 2017ಕ್ಕೆ ಎಷ್ಟೆಷ್ಟು?

03:08 PM Mar 14, 2017 | Team Udayavani |

ಧಾರವಾಡ: ಪೂರ್ಣಗೊಳ್ಳದ ಬಿಆರ್‌ಟಿಎಸ್‌ ಯೋಜನೆ.. ಕುಂದಗೋಳ ತಾಲೂಕಿಗೆ ಇನ್ನೂ ಟ್ಯಾಂಕರ್‌ ನೀರೇ ಗತಿಯಾಗಿರುವುದು.. ನಗರಮುಖೀ ಯೋಜನೆಗಳ ಆಮೆಗತಿಯ ವೇಗ.. ವಾರಕ್ಕೊಮ್ಮೆ ತಲುಪುತ್ತಿರುವ ಕುಡಿಯುವ ನೀರು..ಇಬ್ಬರು ಸಚಿವರಿದ್ದರೂ ಜಿಲ್ಲೆಗೆ ಸಿಗುತ್ತಿಲ್ಲ ಅಭಿವೃದ್ಧಿಯ ವೇಗ.. ಹೌದು.

Advertisement

ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ 2016ರ ಬಜೆಟ್‌ನಲ್ಲಿ ಜಿಲ್ಲೆಗೆಸಿಕ್ಕಿದ್ದು ಅಷ್ಟಿಷ್ಟು ಮಾತ್ರ. ಆದರೆ ಈ 2017ರಲ್ಲಿ ಮಾತ್ರ ಸಿಗಬೇಕಿರುವುದು ಸಾಕಷ್ಟಿದ್ದು, ಆ ಎಲ್ಲ ಯೋಜನೆಗಳಿಗೂ ಅನುದಾನ ಈ ವರ್ಷದ ಬಜೆಟ್‌ನಲ್ಲಿ ಸಿಕ್ಕುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ ಜಿಲ್ಲೆಯ ಜನ.

ಉ.ಶಿ.ಗೆ ಬೇಕು ಹಣ: ಶಿಕ್ಷಣ ಕಾಶಿಯಾಗಿರುವ ಧಾರವಾಡದ ಕವಿವಿ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉನ್ನತ ಶಿಕ್ಷಣ ಅಕಾಡೆಮಿ ಹೈಟೆಕ್‌ ಕಟ್ಟಡಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ. ಸದ್ಯಕ್ಕೆ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ.

ಈ ವರ್ಷದ ಬಜೆಟ್‌ನಲ್ಲಿ ಕನಿಷ್ಠ 50 ಕೋಟಿ ರೂ. ಮೀಸಲಿಡುವುದಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳುತ್ತಲೇ ಇದ್ದು, 2017ರ ಬಜೆಟ್‌ನಲ್ಲಿ ಈ ಅನುದಾನ ಲಭ್ಯವಾಗಬಹುದು ಎನ್ನುವ ನಿರೀಕ್ಷೆ ಶಿಕ್ಷಣ ತಜ್ಞರದ್ದಾಗಿದೆ. 

ತೀರಿಲ್ಲ ದಾಹ: ಅವಳಿ ನಗರಕ್ಕೆ ಈಗ ವಾರಕ್ಕೊಂದು ಸಲ ನೀರು ಪೂರೈಸುವ ಸ್ಥಿತಿ ಇದೆ. ಮಲಪ್ರಭಾ ಅಣೆಕಟ್ಟೆಯಿಂದ ನೀರು ಪೂರೈಸುತ್ತಿದ್ದು, ಈ ಸಂಬಂಧ ಇನ್ನಷ್ಟು ಸುಧಾರಿತ ವ್ಯವಸ್ಥೆ ಅಳವಡಿಕೆ ಮತ್ತು ಜಿಲ್ಲೆಯ ಎಲ್ಲ ಹಳ್ಳಿಗಳಿಗೂ ಮಲಪ್ರಭಾ ನದಿ ನೀರನ್ನೇ ಪೂರೈಸಬೇಕು ಎನ್ನುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು ಎರಡು ವರ್ಷವಾಯಿತು.

Advertisement

ಈ ಯೋಜನೆಗೆ ಅಂದಾಜು 1500 ಕೋಟಿರೂ.ಗಳ ಅಗತ್ಯವಿದೆ. ದಿನೇಶ ಗುಂಡೂರಾವ್‌  ಅವರು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಈ ಯೋಜನೆಗೆ ರೆಕ್ಕೆಪುಕ್ಕ ಬಂದಿತ್ತು. ಆದರೆ ನಂತರ ಅದು ಹಾಗೆ ಕುಳಿತಿದೆ. ಈ ವರ್ಷದ ಬಜೆಟ್‌ನಲ್ಲಿ ಈ ಯೋಜನೆಗೆ ಏನಾದರೂ ಹಣಕಾಸು ನೆರವು ಸಿಗುವುದೇ ಎನ್ನುವ ನಿರೀಕ್ಷೆ ಇದೆ. ಇನ್ನು ಕುಂದಗೋಳ ತಾಲೂಕಿನ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ದುಸ್ಥಿತಿ ಇನ್ನು ನಿಂತಿಲ್ಲ.

ಮಲಪ್ರಭಾ ಬಲದಂಡೆ ಕಾಲುವೆಯಿಂದ ಕಿರೇಸೂರು ಕೆರೆ ತುಂಬಿಸಿ ಅಲ್ಲಿಂದ ನೀರು ಪೂರೈಸಲಾಗುತ್ತಿದೆಯಾದರೂ, ಇನ್ನಷ್ಟು ವೈಜ್ಞಾನಿಕವಾಗಿ ಅದನ್ನು ಅನುಷ್ಠಾನ ಗೊಳಿಸಲು ಹಣಕಾಸು ನೆರವು ಅಗತ್ಯವಿದೆ ಎನ್ನುವುದನ್ನು ಜಿಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸರ್ಕಾರಕ್ಕೆ ಹೆಚ್ಚಿನ ಅನುದಾನಕ್ಕೆ ಪತ್ರ ಬರೆಯಲಾಗಿದೆ. ಈ ಬಾರಿಯಾದರೂ ಇದಕ್ಕೆ ವಿಶೇಷ ಹಣಕಾಸು ನೆರವು ಸಿಗುವುದೇ ಎನ್ನುವ ನಿರೀಕ್ಷೆ ಆ ತಾಲೂಕಿನ ಜನರಲ್ಲಿದೆ.

ಸರ್ಜರಿಯಾಗಿಲ್ಲ ಬೈಪಾಸ್‌: ಗಬ್ಬೂರು ಕ್ರಾಸ್‌ ನಿಂದ ನರೇಂದ್ರ ಕ್ರಾಸ್‌ವರೆಗೂ ಇರುವ ಬೈಪಾಸ್‌ ರಸ್ತೆ ಕಳೆದ 20 ವರ್ಷಗಳ ಹಿಂದಿನಿಂದಲೂ ಇದೆ. ಖಾಸಗಿ ಕಂಪನಿ ಒಡೆತನದ ಗುತ್ತಿಗೆಯಲ್ಲಿರುವ ಈ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಬೇಕು ಎಂಬ ಮಾತು ಪ್ರತಿವರ್ಷವೂಕೇಳಿ ಬರುತ್ತಲೇ ಇದೆ.

ಕೇಂದ್ರ ಸಾರಿಗೆ ಇಲಾಖೆ  ಇದಕ್ಕೆ ತಕ್ಕ ಅನುದಾನ ನೀಡಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳುತ್ತಿದ್ದರೂ, ರಾಜ್ಯ ಸರ್ಕಾರ ಈ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಕೆಲವಷ್ಟು ತಾಂತ್ರಿಕ ವಿಚಾರಗಳಿಗೆ ಒಪ್ಪಿಗೆ ಕೊಟ್ಟು ನೆರವು ನೀಡಬೇಕಿದೆ ಆದರೆ ನೀಡುತ್ತಿಲ್ಲ.

ಧಾರವಾಡದ ಜ್ಯುಬಿಲಿ ವೃತ್ತದಿಂದ ನರೇಂದ್ರ ಕ್ರಾಸ್‌ವರೆಗೂ ಚತುಷ್ಪಥ ರಸ್ತೆ ನಿರ್ಮಿಸುವ ಯೋಜನೆಯೂ ರಾಜ್ಯ ಸರ್ಕಾರದ ಹಣಕಾಸು ನೆರವಿಲ್ಲದೆ ವಿಳಂಬವಾಗುತ್ತಿದೆ. ಇನ್ನು ಹುಬ್ಬಳ್ಳಿ-ಧಾರವಾಡ ಪೂರ್ವ ಬೈಪಾಸ್‌ ರಸ್ತೆ ನಿರ್ಮಾಣಕ್ಕೂ ಈವರೆಗೂವಿಶೇಷ ಹಣಕಾಸು ನೆರವು ಸಿಕ್ಕಿಲ್ಲ.  

* ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next