Advertisement

ಸಂಘ, ಸಂಸ್ಥೆಗಳಿಗೆ ಆರಂಭದ ಶೂರತ್ವ ಬೇಡ

09:12 PM Jun 30, 2019 | Team Udayavani |

ಚಿಕ್ಕಬಳ್ಳಾಪುರ: ಪ್ರಾರಂಭದಲ್ಲಿ ಶೂರತ್ವ ಮೆರೆದು ಹುಟ್ಟಿಕೊಳ್ಳುವ ಕೆಲವು ಸಂಘ ಸಂಸ್ಥೆಗಳು ಬಳಿಕ ಕೆಲವೇ ದಿನಗಳಲ್ಲಿ ಶೂನ್ಯತ್ವ ತಲುಪಿ ಚಟುವಟಿಕೆಗಳಿಲ್ಲದೇ ಮುಚ್ಚಿಕೊಳ್ಳುತ್ತಿದೆ. ಇದರಿಂದಾಗಿ ಸಂಘ ಸಂಸ್ಥೆಗಳನ್ನು ಸಮಾಜದಲ್ಲಿ ಬೇಸರ ಹಾಗೂ ಅನುಮಾನದಿಂದ ನೋಡುವಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ಜಯೇಂದರ್‌ ತಿಳಿಸಿದರು.

Advertisement

ಜಿಲ್ಲೆಯ ಗೌರಿಬಿದನೂರು ನಗರದ ಡಾ.ಎಚ್‌.ಎನ್‌.ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀಗೌರಿ ಸೇವಾ ಟ್ರಸ್ಟ್‌ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಜನಪರ ಕಾರ್ಯಗಳನ್ನು, ಸಾಂಸ್ಕೃಕ ಚಟುವಟಿಕೆಗಳನ್ನು ನಡೆಸಲು ಸಂಸ್ಥೆಗಳು ಬೇಕಾಗಿದೆ. ಆದರೆ ಆರ್ಥಿಕ ಸೌಲಭ್ಯವನ್ನು ಹೆಚ್ಚಾಗಿಸಿಕೊಳ್ಳುವ ಉದ್ದೇಶವನ್ನು ಹೊಂದಿದಲ್ಲಿ ಸಂಸ್ಥೆಗಳು ನೆಲಕಚ್ಚುವುದು ಸಾಮಾನ್ಯದ ಸಂಗತಿ ಎಂದು ಮಾರ್ಮಿಕವಾಗಿ ಸಂಘ, ಸಂಸ್ಥೆಗಳ ಕಾರ್ಯವೈಖರಿಯನ್ನು ವಿಶ್ಲೇಷಿಸಿದರು.

ಹೆಮ್ಮರವಾಗಿ ಬೆಳೆಯಲಿ: ಗೌರಿಬಿದನೂರು ನಗರದಲ್ಲಿ ಕಳೆದ 2-3 ದಶಕಗಳ ಹಿಂದೆ ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು, ಟಿ.ಎನ್‌.ಸೀತಾರಾಮ್‌, ಪಿ.ಟಿ.ಕೃಷ್ಣಮೂರ್ತಿ ಮತ್ತಿತರಿಂದ ನಾಟಕೋತ್ಸವ, ಕ್ತೀಡೋತ್ಸವ ಹಾಗೂ ಹಲವಾರು ಸಾಂಸ್ಕೃತಿ ಕಾರ್ಯಗಳು ಜರುಗುತ್ತಿದ್ದವು.

ವಿಪರ್ಯಾಸವೆಂದರೆ ಇತ್ತೀಚಿನ ದಿನಗಳಲ್ಲಿ ಕಲಾಪ್ರಕಾರಗಳನ್ನು ನಡೆಸುವ ಸಂಘಗಳು ವಾಣಿಜ್ಯೀಕರಣಕ್ಕಾಗಿ ಗಮನ ಹರಿಸುತ್ತಿದೆ. ಸಾಂಸ್ಕೃತಿಕ ಚಟುವಟಿಕೆಗಳು ಪರಂಪರೆಯನ್ನು ಕಳೆದುಕೊಳ್ಳುತ್ತಿರುವುದರಿಂದ ಸಂಘಗಳು ಕಣ್ಮರೆಯಾಗುತ್ತಿವೆ. ಆದ್ದರಿಂದ ಆರಂಭಿದಲ್ಲಿದ್ದ ಶೂರತ್ವವನ್ನು ಹೆಮ್ಮರವಾಗಿ ಬೆಳೆಸಿಕೊಳ್ಳಲು ಶ್ರಮಿಸಬೇಕೆಂದರು.

ಕಲೆಗೆ ವಯಸ್ಸು ಜಾತಿ ಇಲ್ಲ: ಬೆಂಗಳೂರಿನ ರಿಸರ್ವ್‌ ಬ್ಯಾಂಕ್‌ನ ವ್ಯವಸ್ಥಾಪಕ ಹಾಗೂ ಯಕ್ಷಗಾನ ಕಲಾವಿದ ಶ್ರೀನಿವಾಸ ಸಸ್ತಾನ ಮಾತನಾಡಿ, ಯಾವುದೇ ಕಲೆಗಳನ್ನು ಕಲಿಯಲು ಜಾತಿ, ಕುಲ, ಮತ, ಪ್ರದೇಶ, ವಯಸ್ಸಿನ ಭೇದವಿಲ್ಲ.

Advertisement

ಕಲಿಯಲು ಛಲ ಮತ್ತು ಗುರಿ ಇರಬೇಕು. ಯಕ್ಷಗಾನ ಎಂಬುದು ದಕ್ಷಿಣಕನ್ನಡ, ಉಡುಪಿ, ಕಾರವಾರ ಜಿಲ್ಲೆಗಳಿಗೆ ಸೀಮಿತ ಎನ್ನುವುದು ತಪ್ಪು. ಸದರಿ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದ್ದು ಕಲಿಯುವವರ ಸಂಖ್ಯೆಯು ಹೆಚ್ಚಾಗಿದೆ. ಕಲೆಗಳನ್ನು ಕಲಿಯಲು ಗಮನಹರಿಸಿದಲ್ಲಿ ಮನೆಗಳಲ್ಲಿ ಮೊಬೈಲ್‌ ವೀಕ್ಷಿಸುವ ದುರಾಭ್ಯಾಸದಿಂದ ತಪ್ಪಿಸಬಹುದಾಗಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಎಲ್‌ಐಸಿ ರವೀಂದ್ರನಾಥ್‌, ನ್ಯಾಷನಲ್‌ ಕಾಲೇಜಿ ಕನ್ನಡ ಉಪನ್ಯಾಸಕಿ ಡಾ.ಶೈಲಜಾ ಸಪ್ತಗಿರಿ, ಅಲಕಾಪುರದ ಜಾ`ನೋದಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚಂದ್ರಮೌಳಿ, ಕರುನಾಡ ಕನ್ನಡಿಗರ ರಕ್ಷಣಾ ವೇದಿಕೆಯ ಅಧ್ಯಕ್ಷ ಜಿ.ಬಾಲಾಜಿ, ಡಾ.ಎಚ್‌.ಎನ್‌.ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ದಸ್ತಗೀರ್‌ಸಾಬ್‌ ಮಾತನಾಡಿದರು.

ಮಯೂರಿ ಕಲಾನಿಕೇತನ ವಿದ್ಯಾರ್ಥಿನಿಯರಿಂದ ಏರ್ಪಡಿಸಿದ್ದ ಭರತನಾಟ್ಯವು ಸಭಿಕರನ್ನು ಆಕರ್ಷಿಸಿತು. ಕಾರ್ಯಕ್ರಮದಲ್ಲಿ ಶಿಲ್ಪ, ವೇದಾವತಿ, ಜಯಂತಿ, ಸೌಮ್ಯ, ಮೂಕಾಂಬಿಕ ಮತ್ತಿತರರು ಉಪಸ್ಥಿತರಿದ್ದರು.

ನವೆಂಬರ್‌ಗೆ ಹಂಸಲೇಖ ಆಗಮನ: ಈ ವರ್ಷದ ನವೆಂಬರ್‌ ತಿಂಗಳಲ್ಲಿ ಕರುನಾಡ ಕನ್ನಡಿಗರ ರಕ್ಷಣಾ ವೇದಿಕೆಯ ಆಶ್ರಯದಲ್ಲಿ 3 ದಿನಗಳ ಕಾಲ 25 ನೇ ಕನ್ನಡ ನಾಡೋತ್ಸವವನ್ನು ಹಮ್ಮಿಕೊಂಡಿದ್ದ ಖ್ಯಾತ ಚಲನ ಚಿತ್ರ ಸಂಗೀತ ನಿರ್ದೇಶಕ ಹಂಸಲೇಖ, ಹರಿಕೃಷ್ಣ ಮತ್ತು ಜನಪದ ಗಾಯಕಿ ಅನನ್ಯಭಟ್‌ರಿಂದ ವಾದ್ಯಗೋಷ್ಠಿ ಏರ್ಪಡಿಸಲಾಗಿದೆ ಎಂದು ಕರುನಾಡ ಕನ್ನಡಿಗರ ರಕ್ಷಣಾ ವೇದಿಕೆಯ ಅಧ್ಯಕ್ಷ ಜಿ.ಬಾಲಾಜಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next