ಮುಂಬೈ: ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ (Gautam Gambhir) ಅವರು ಆಯ್ಕೆಯಾಗಿ ಕೆಲವು ದಿನಗಳು ಕಳೆದಿದೆ. ಆದರೆ ಗಂಭೀರ್ ಅವರಿಗೆ ಸಹಾಯಕರಾಗಿ ಯಾರಿರುತ್ತಾರೆ ಎನ್ನುವುದು ಇನ್ನು ಕುತೂಹಲವಾಗಿಯೇ ಉಳಿದಿದೆ. ಇದಕ್ಕೆ ಉತ್ತರ ಸಿಗುವ ಸಮಯ ಬಂದಿದೆ.
ಭಾರತೀಯ ತಂಡದ ಬೌಲಿಂಗ್ ಕೋಚ್ (Bowling Coach) ಹುದ್ದೆಗೆ ಹಲವು ಹೆಸರುಗಳು ಕೇಳಿಬಂದಿದ್ದವು. ಆರಂಭದಲ್ಲಿ ಕನ್ನಡಿಗ ವಿನಯ್ ಕುಮಾರ್ ಹೆಸರನ್ನು ಗಂಭೀರ್ ಸೂಚಿಸಿದ್ದರು, ಆದರೆ ಬಿಸಿಸಿಐ ಒಪ್ಪಿಲ್ಲ ಎಂದು ವರದಿಯಾಗಿತ್ತು. ಬಳಿಕ ಜಹೀರ್ ಖಾನ್ ಮತ್ತು ಲಕ್ಷ್ಮೀಪತಿ ಬಾಲಾಜಿ ಹೆಸರುಗಳು ಹರಿದಾಡಿದ್ದವು. ಇದರ ನಡುವೆ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮೋರ್ನೆ ಮೊರ್ಕೆಲ್ ಅವರನ್ನು ಬೌಲಿಂಗ್ ಕೋಚ್ ಹುದ್ದೆಗೆ ನೇಮಿಸಲು ಗಂಭೀರ್ ಉತ್ಸುಕರಾಗಿದ್ದಾರೆ ಎನ್ನಲಾಗಿತ್ತು.
ಕೆಲವೇ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡವು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ತಂಡವನ್ನೂ ಪ್ರಕಟಿಸಲಾಗಿದೆ. ಆದರೆ ಇದುವರೆಗೆ ಸಹಾಯಕ ಕೋಚ್ ಗಳನ್ನು ಅಧಿಕೃತವಾಗಿ ಬಿಸಿಸಿಐ ಇದುವರೆಗೆ ಪ್ರಕಟಿಸಿಲ್ಲ. ಆದರೆ ಈ ಪಟ್ಟಿ ಅಂತಿಮವಾಗಿದೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ.
ಶ್ರೀಲಂಕಾ ಪ್ರವಾಸಕ್ಕೆ ಗೌತಮ್ ಗಂಭೀರ್ ಜೊತೆಗೆ ಅಭಿಷೇಕ್ ನಾಯರ್, ರಿಯಾನ್ ಟೆನ್ ಡೆಸ್ಕೋಟ್ ಮತ್ತು ಟಿ ದಿಲೀಪ್ ಅವರು ತೆರಳಲಿದ್ದಾರೆ ಎಂದು ವರದಿ ಹೇಳಿದೆ. ಈ ಹಿಂದೆ ರಾಹುಲ್ ದ್ರಾವಿಡ್ ಅವರೊಂದಿಗೆ ಫೀಲ್ಡಿಂಗ್ ಕೋಚ್ ಆಗಿದ್ದ ದಿಲೀಪ್ ಅವರನ್ನು ಮುಂದುವರಿಸಲಾಗಿದೆ. ದಿಲೀಪ್ ಅವರು ಫೀಲ್ಡಿಂಗ್ ಕೋಚ್ ಆಗಿ ಆಟಗಾರರಲ್ಲಿ ಆತ್ಮೀಯತೆ ಹೊಂದಿದ್ದಾರೆ.
ನಾಯರ್ ಮತ್ತು ಟೆನ್ ಡೆಸ್ಕೋಟ್ ಅವರನ್ನು ಸಹಾಯಕ ಕೋಚ್ ಗಳಾಗಿ ನೇಮಿಸಲಾಗಿದೆ. ಹೊಸ ಬೌಲಿಂಗ್ ಕೋಚ್ ಬಗ್ಗೆ ಕೆಲವು ಸ್ಪಷ್ಟತೆ ಸಿಕ್ಕಿಲ್ಲ, ಆದರೆ ವೇಗಿ ಮೊರ್ಕೆಲ್ ಪ್ರಬಲ ಅಭ್ಯರ್ಥಿಯಾಗಿದ್ದು, ಮಾಜಿ ದಕ್ಷಿಣ ಆಫ್ರಿಕಾದ ವೇಗಿ ಗಂಭೀರ್ ಅವರ ಕೋಚಿಂಗ್ ತಂಡದಲ್ಲಿ ಈ ಪಾತ್ರವನ್ನು ವಹಿಸುವ ಹೆಚ್ಚಿನ ಅವಕಾಶವಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಭಿಷೇಕ್ ನಾಯರ್, ರಿಯಾನ್ ಟೆನ್ ಡೆಸ್ಕೋಟ್ ಇಬ್ಬರೂ ಗಂಭೀರ್ ಮೆಂಟರ್ ಆಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚಿಂಗ್ ಸಿಬ್ಬಂದಿಗಳಾಗಿದ್ದರು. ಮೊರ್ಕೆಲ್ ಅವರೊಂದಿಗೆ ಗಂಭೀರ್ ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕೆಲಸ ಮಾಡಿದ್ದರು.