ಚಿತ್ರದುರ್ಗ: ರಾಜ್ಯ ಸರ್ಕಾರದ ಸಹಾಯಧನದೊಂದಿಗೆ ಕೇಂದ್ರ ಸರ್ಕಾರ ಕುರಿಗಾಹಿಗಳಿಗೆ ಸಾಲ ಸೌಲಭ್ಯ ನೀಡಲಿದೆ ಎಂದು ಕರ್ನಾಟಕ ಕುರಿ ಮತ್ತು ಮೇಕೆ ಮಹಾಮಂಡಳಿ ಅಧ್ಯಕ್ಷ ಪಂಡಿತ್ ರಾವ್ ಚಿದ್ರಿ ಹೇಳಿದರು.
ನಗರದ ಕ್ರೀಡಾ ಸಂಕೀರ್ಣದಲ್ಲಿ ಕರ್ನಾಟಕ ಕುರಿ ಮತ್ತು ಮೇಕೆ ಸಾಕಣೆದಾರರ ಸಹಕಾರ ಸಂಘಗಳ ಮಹಾ ಮಂಡಳ ಮತ್ತು ಜಿಲ್ಲಾ ಕುರಿ ಮತ್ತು ಉಣ್ಣೆ ಸಹಕಾರ ಸಂಘದ ಆಶ್ರಯದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಒಂದು ದಿನದ ವೈಜ್ಞಾನಿಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಸ್ವಾಮ್ಯದ ಎನ್‌ಸಿಟಿಸಿಗೆ ರಾಜ್ಯ ಸರ್ಕಾರ 187 ಕೋಟಿ ರೂ.ಗಳ ಖಾತ್ರಿ ನೀಡಿದೆ. ಇದರಿಂದ ಕುರಿಗಾಹಿಗಳಿಗೆ ಸಾಲ ಸೌಲಭ್ಯ ದೊರೆಯಲಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಕೃಷಿ ಪೂರಕ ಚಟುವಟಿಕೆ ವ್ಯಾಪ್ತಿಗೆ ಕುರಿಗಾಹಿ ಕೆಲಸ ಬರುವುದರಿಂದ ಸಹಕಾರ ಸಂಘಗಳಲ್ಲಿ ನೀಡುವ ಬಡ್ಡಿ ರಹಿತ ಸಾಲವನ್ನು ಕುರಿಗಾಹಿಗಳಿಗೂ ವಿಸ್ತರಣೆ ಮಾಡಬೇಕು. ಡಿಸಿಸಿ ಬ್ಯಾಂಕ್‌ಗಳಿಗೆ 50 ಸಾವಿರ ರೂ. ಬಡ್ಡಿ ರಹಿತ ಸಾಲ ನೀಡಲು ಮುಖ್ಯಮಂತ್ರಿಗಳು ಆದೇಶಿಸಿದ್ದರೂ ಯಾವೊಬ್ಬ ಕುರಿಗಾಹಿಗೂ ಸಾಲ ನೀಡಲಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ಡಿಸಿಸಿ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ| ಬಿ. ಪ್ರಸನ್ನಕುಮಾರ್ ಮಾತನಾಡಿ, ಬಯಲು ಸೀಮೆ ಚಿತ್ರದುರ್ಗ ಜಿಲ್ಲೆ ಇಡೀ ರಾಜ್ಯದಲ್ಲೇ ಕುರಿ ಸಾಕಾಣಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿಯ ಅಧಿಕ ಉಷ್ಣಾಂಶದ ಹವಾಮಾನ, ಗುಡ್ಡಗಾಡು ಪ್ರದೇಶ ಕುರಿ ಮೇಕೆ ಸಾಕಾಣಿಕೆಗೆ ಹೇಳಿ ಮಾಡಿಸಿದ ಪ್ರದೇಶವಾಗಿದೆ. ಎಷ್ಟೇ ದೊಡ್ಡ ಪ್ರಮಾಣದಲ್ಲಿ ಸಾಕಣೆ ಮಾಡಿದರೂ ಆಧುನಿಕ ವಿಧಾನ ಅಳವಡಿಸಿಕೊಳ್ಳದ ಹೊರತು ಲಾಭದಾಯಕವಾಗದು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಕುರಿ ಮತ್ತು ಮೇಕೆ ಮಹಾಮಂಡಳದ ನಿರ್ದೇಶಕರಾದ ಮಹಾಲಿಂಗಪ್ಪ, ಡಾ| ಎಂ. ಮಾರ್ತಾಂಡಪ್ಪ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ| ಸಿ.ತಿಪ್ಪೇಸ್ವಾಮಿ, ಜಿಪಂ ಸದಸ್ಯ ಶಿವಮೂರ್ತಿ ಮತ್ತಿತರರು ಇದ್ದರು.
ಆಧುನಿಕ ವಿಧಾನದಲ್ಲಿ ಕುರಿ ಸಾಕಾಣಿಕೆ ಮಾಡಿ ಹಳೆ ಪದ್ಧತಿಯಲ್ಲಿ ಸಾಂಪ್ರದಾಯಿಕ ವಿಧಾನಗಳಂತೆ ಕುರಿ ಸಾಕಾಣಿಕೆ
ಮಾಡುವುದರಿಂದ ಯಾವುದೇ ಲಾಭ ಆಗುವುದಿಲ್ಲ. ಹೈಟೆಕ್ ಮಾದರಿಯಲ್ಲಿ ಕುರಿ ಸಾಕಾಣಿಕೆ ಮಾಡಲು ಮುಂದಾಗಬೇಕು. ಒಂದೇ ಪ್ರದೇಶದ ತಳಿಗಳ ಮರು ಉತ್ಪಾದನೆಯಿಂದ ಹಲವು ಸವಾಲು ಎದುರಿಸಬೇಕಾಗುತ್ತದೆ. ಅಧಿಕ ತೂಕ, ಹಾಲು ಉತ್ಪಾದನೆ,
ಎರಡೆರಡು ಮರಿ ಹಾಕುವ ತಳಿಗಳ ಸಂಶೋಧನೆ ಆಗಿದ್ದು, ಅಂತಹ ತಳಿಗಳನ್ನೇ ಸಾಕಬೇಕು. ದಲ್ಲಾಳಿ ವ್ಯವಸ್ಥೆಗೆ ತಿಲಾಂಜಲಿ
ಹಾಡಿ ಮಾರುಕಟ್ಟೆಗಳಲ್ಲೇ ಮಾಂಸ ಮಾರಾಟ ಮಾಡುವ ವ್ಯವಸ್ಥೆ ಬರಲಿದೆ. ಇದರಿಂದ ಕುರಿಗಾಹಿಗಳಿಗೆ ನೇರ ಲಾಭ ಸಿಗಲಿದೆ ಎಂದು ಚಿದ್ರಿ ತಿಳಿಸಿದರು.