ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಪ್ರತಿಯೊಂದು ಆಸ್ತಿಯ ನಿಖರ ಮಾಹಿತಿ ಶೀಘ್ರದಲ್ಲಿಯೇ ಪಾಲಿಕೆಯ ಕೈಸೇರಲಿದ್ದು, ತೆರಿಗೆ ಸೋರಿಕೆ ತಡೆಗಟ್ಟುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಪಾಲಿಕೆ ಸಿದ್ಧತೆ ನಡೆಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳ ಪತ್ತೆಗೆ ಇಸ್ರೋ ಸಂಸ್ಥೆಯೊಂದಿಗೆ ನಡೆಸುತ್ತಿರುವ “ಜಿಯೋಸ್ಪಟಿಯಲ್ ಎನೆಬಲ್ಡ್ ಪ್ರಾಪರ್ಟಿ ಟ್ಯಾಕ್ಸ್ ಇನ್‌ಫಾರ್ಮೇಷನ್ ಸಿಸ್ಟಂ (ಜಿಇಪಿಟಿಐಎಸ್)’ ಯೋಜನೆ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಬಿಬಿಎಂಪಿಯ 712 ಚದರ ಕಿಲೋ ಮೀಟರ್ ವ್ಯಾಪ್ತಿ ಯಲ್ಲಿ ಎಲ್ಲ ಆಸ್ತಿಗಳ ಸಂಪೂರ್ಣ ಮಾಹಿತಿ ಪಾಲಿಕೆಗೆ ಲಭ್ಯವಾಗಲಿದ್ದು, ತೆರಿಗೆ ವಂಚಕರು ಸುಲಭವಾಗಿ ಸಿಕ್ಕಿಬೀಳಲಿದ್ದಾರೆ.
ಬಿಬಿಎಂಪಿ ವತಿಯಿಂದ ಈ ಹಿಂದೆ ಜಿಯೋಗ್ರಾಫಿಕಲ್ ಇನ್‌ಫಾರ್ಮೇಷನ್ ಸಿಸ್ಟಂ (ಜಿಐಎಸ್) ಮೂಲಕ 18.5 ಲಕ್ಷ ಆಸ್ತಿಗಳನ್ನು ಗುರುತಿಸಲಾಗಿತ್ತು. ಆದರೆ, ಪ್ರತಿವರ್ಷ ಪಾಲಿಕೆಗೆ ಕೇವಲ 16 ಲಕ್ಷ ಆಸ್ತಿಗಳಿಂದ ಮಾತ್ರ ಆಸ್ತಿ ತೆರಿಗೆ ಪಾವತಿಯಾಗುತ್ತಿದೆ. ಜತೆಗೆ ಆಸ್ತಿಯ ವಿವರ ಹಾಗೂ ಬಳಕೆಯ ಕುರಿತು ಪಾಲಿಕೆಗೆ ತಪ್ಪು ಮಾಹಿತಿ ನೀಡಿ ತೆರಿಗೆ ವಂಚಿಸುವ ಪ್ರಕರಣಗಳು ಮುಂದುವರಿದಿವೆ. ಜಿಇಪಿಟಿಐಎಸ್ ಯೋಜನೆಯಿಂದ ನಿರಂತರವಾಗಿ ಸ್ಯಾಟಲೈಟ್ ಚಿತ್ರಗಳು ಲಭ್ಯವಾಗಲಿದ್ದು, ಕೆರೆಗಳು, ನಿವೇಶನಗಳ, ಕಾಲುವೆಗಳು, ರಸ್ತೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳ ಮಾಹಿತಿ ಲಭ್ಯವಾಗಲಿದೆ.
ಆ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿನ ಪ್ರತಿಯೊಂದು ಆಸ್ತಿಯ ಮಾಹಿತಿಯನ್ನು ಪಡೆಯಲು ಇಸ್ರೋ ಸಂಸ್ಥೆಯ ನ್ಯಾಷನಲ್ ರಿಮೋಟ್ ಸೆನ್ಸರಿಂಗ್ ಸೆಂಟರ್ ದಕ್ಷಿಣ ಕೇಂದ್ರದೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಬಿಬಿಎಂಪಿಯ 198 ವಾರ್ಡ್‌ಗಳ 712 ಚದರ ಕಿ.ಮೀ. ವ್ಯಾಪ್ತಿಯಲ್ಲಿನ ಆಸ್ತಿಗಳ ಸಂಪೂರ್ಣ ಮಾಹಿತಿ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಪತ್ತೆ ಮಾಡುವ ಹಾಗೂ ಆಸ್ತಿ ತೆರಿಗೆ ಪಾವತಿಯ ವಿವರಗಳ ಜೋಡಣೆ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿ ಸಂಪೂರ್ಣ ಆಸ್ತಿಗಳ ವಿವರ ಪಾಲಿಕೆಗೆ ದೊರೆಲಿದೆ.
ಪ್ರಾಯೋಗಿಕವಾಗಿ ಯಶಸ್ವಿ: ಪಾಲಿಕೆಯ ಯಲಚೇನಹಳ್ಳಿ ವಾರ್ಡ್‌ನಲ್ಲಿ ಮೊದಲಿಗೆ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಟಾನಗೊಳಿಸಲಾಗಿದೆ. ಈ ವೇಳೆ ವಾರ್ಡ್‌ನಲ್ಲಿರುವ ಪ್ರತಿಯೊಂದು ಆಸ್ತಿಯ ಪತ್ತೆಯೊಂದಿಗೆ, ಆಸ್ತಿ ತೆರಿಗೆ ಪಾವತಿಯ ವಿವರಗಳ ಜೋಡಣೆ ಕಾರ್ಯವೂ ಮುಗಿದಿದೆ. ಇದರಿಂದ ಆಸ್ತಿದಾರರ ತೆರಿಗೆ ಪಾವತಿ ವಿವರ ಸುಲಭವಾಗಿ ತಿಳಿಯುತ್ತಿದೆ. ಆ ಹಿನ್ನೆಲೆಯಲ್ಲಿ ಬಿಬಿಎಂಪಿ, 198 ವಾರ್ಡಗಳಲ್ಲಿ ಈ ಯೋಜನೆ ಅನುಷ್ಟಾನಗೊಳಿಸಲು 2017ರ ಡಿಸೆಂಬರ್‌ನಲ್ಲಿ ಇಸ್ರೋ ಜತೆ ಒಪ್ಪಂದ ಮಾಡಿಕೊಂಡಿತ್ತು.
ಜಿಇಪಿಟಿಐಎಸ್ ವಿಶೇಷತೆಯೇನು?: ಒಪ್ಪಂದದಂತೆ ಕಾಲಕಾಲಕ್ಕೆ ಪಾಲಿಕೆಯಲ್ಲಿನ ಆಸ್ತಿಗಳ ಸ್ಥಿತಿಗತಿಯ ಮಾಹಿತಿಯನ್ನು ಇಸ್ರೋ ಪಾಲಿಕೆಗೆ ಒದಗಿಸಲಿದೆ. ಅದರಂತೆ ಪಾಲಿಕೆಯ 712 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು “1ಎಂ ಸ್ಪಟಿಕಲ್ ರೆಸಲ್ಯೂಷನ್’ ತಂತ್ರಜ್ಞಾನದ ಮೂಲಕ
ಪಡೆಯಲಾಗುತ್ತದೆ. ಇದರಿಂದಾಗಿ ನಗರದ ಪ್ರತಿಯೊಂದು ಆಸ್ತಿಯೂ ಸ್ಪಷ್ಟವಾಗಿ ಗೋಚರವಾಗುತ್ತದೆ. ಜತೆಗೆ ನಿರಂತರವಾಗಿ ಇಸ್ರೋ ಪಾಲಿಕೆಗೆ ಹೈ ರೆಸಲ್ಯೂಷನ್ ಸ್ಯಾಟಲೈನ್ ಇಮೇಜ್ ಡಾಟಾ ಬೇಸ್ ನೀಡುವುದರೊಂದಿಗೆ, ಒಂದು ಕಟ್ಟಡ ಇಷ್ಟು ಅಂತಸ್ತುಗಳನ್ನು ಹೊಂದಿದೆ, ಎಷ್ಟು ವಿಸ್ತೀರ್ಣದಲ್ಲಿ
ನಿರ್ಮಾಣವಾಗಿದೆ, ರಸ್ತೆಗಳ ಅಳತೆ, ವಾರ್ಡ್ ಹಾಗೂ ವಲಯ ಸರಹದ್ದು ಹೀಗೆ ಹಲವು ಮಾಹಿತಿ ನೀಡಲಿದೆ.
ಪಾಲಿಕೆಯಲ್ಲಿನ ಆಸ್ತಿಗಳ ನಿಖರ ಮಾಹಿತಿ ತಿಳಿಯುವ ಉದ್ದೇಶದಿಂದ ಇಸ್ರೋ ಸಂಸ್ಥೆಯೊಂದಿಗೆ ಯಲಚೇನಹಳ್ಳಿಯಲ್ಲಿ ನಡೆಸಿದ ಜಿಇಪಿಟಿಐಎಸ್ ಯಶಸ್ವಿಯಾಗಿತ್ತು. ಆ ಹಿನ್ನೆಲೆಯಲ್ಲಿ 198 ವಾರ್ಡ್‌ಗಳಲ್ಲಿ ಈ ಯೋಜನೆ ಜಾರಿಗೆ ಇಸ್ರೋ ಜತೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ಎರಡು
ಮೂರು ತಿಂಗಳಲ್ಲಿ ವರದಿ ಪಾಲಿಕೆಗೆ ದೊರೆಯಲಿದೆ.
ಎನ್.ಮಂಜುನಾಥ ಪ್ರಸಾದ್ ಬಿಬಿಎಂಪಿ ಆಯುಕ್ತ
ವೆಂ.ಸುನೀಲ್‌ಕುಮಾರ್