ಬೆಂಗಳೂರು: ರಾಜ್ಯದ ನೆರೆ ಪೀಡಿತ ಜಿಲ್ಲೆಗಳಲ್ಲಿ ಕರ್ನಾಟಕ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲು ಉದ್ದೇಶಿಸಿರುವ ನೆರೆಯ ಭೀಕರತೆಯ ಛಾಯಾಚಿತ್ರ ಪ್ರದರ್ಶನಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ನಗರದ ಕುಮಾರಕೃಪ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿ¤ನಲ್ಲಿ ಕರ್ನಾಟಕ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಹಮ್ಮಿಕೊಂಡಿರುವ ಕರ್ನಾಟಕದ ನೆರೆಹಾವಳಿ ಕುರಿತ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಹಾವಳಿ ಹಾಗೂ ಭೀಕರ ಮಳೆಯಿಂದಾಗಿ ಉಂಟಾಗಿದ್ದ ದುರಂತದ ಸಂದರ್ಭದಲ್ಲಿ ಛಾಯಾಚಿತ್ರಗ್ರಾಹಕರು ಸೇರೆ ಹಿಡಿದಿರುವ ಛಾಯಾಚಿತ್ರಗಳನ್ನು ಜಿಲ್ಲಾಮಟ್ಟದಲ್ಲಿ ಪ್ರದರ್ಶಿಸಿಲು ಹಣಕಾಸಿನ ನೆರವು ಕೋರಿಕೊಂಡಿದ್ದಾರೆ. ಅಸೋಸಿಯೇಷನ್ ವತಿಯಿಂದ ಜಿಲ್ಲೆಗಳಲ್ಲಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲು ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಯಾವುದೇ ಒಂದು ಘಟನೆ ಅಥವಾ ಸನ್ನಿವೇಶವನ್ನು ಸಾವಿರ ಪದಗಳಲ್ಲಿ ಬಣ್ಣಿಸಲಾಗದಷ್ಟು ಭಾವನೆಯನ್ನು ಒಂದೇ ಒಂದು ಛಾಯಾಚಿತ್ರ ನೀಡುತ್ತದೆ. ಕರ್ನಾಟಕದಲ್ಲಿ ಪ್ರವಾಹ ಹಾಗೂ ಮಳೆಯ ಭೀಕರತೆ ಹೇಗಿತ್ತು ಎಂಬುದನ್ನು ಈ ಎಲ್ಲ ಛಾಯಾಚಿತ್ರಗಳು ಸ್ಪಷ್ಟವಾಗಿ ವಿವರಣೆ ನೀಡುತ್ತವೆ ಎಂದು ಹೇಳಿದರು. ನೂತನವಾಗಿ ಜಾರಿಗೆ ಬಂದಿರುವ ಕರ್ನಾಟಕ ರಾಜ್ಯ ಜರ್ನಲಿಸ್ಟ್ ಅಸೋಸಿಯೇಷನ್‌ಗೆ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು. ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ, ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಅಸೋಸಿಯೇಷನ್ ಅಧ್ಯಕ್ಷ ಈಶ್ವರ್ ಮೊದಲಾದವರು ಇದ್ದರು.
ಮನಕಲಕುವ ಛಾಯಾಚಿತ್ರಗಳು: ಪ್ರವಾಹ ಮತ್ತು ಭೀಕರ ಮಳೆಯಿಂದಾಗಿ ರಾಜ್ಯದ ಬೆಳಗಾವಿ, ಚಿಕ್ಕೊಡಿ, ಕೊಪ್ಪಳ, ರಾಯಚೂರು, ಬಿಜಾಪುರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಾಗಲಕೋಟೆ ಮೊದಲಾದ ಜಿಲ್ಲೆಗಳಲ್ಲಿ ಸಂಭವಿಸಿದ್ದ ದುರಂತಗಳ ಬಗ್ಗೆ ವಿವಿಧ ಪತ್ರಿಕೆಯ ಛಾಯಾಚಿತ್ರಗ್ರಾಹಕರು ಹಾಗೂ ಹವ್ಯಾಸಿ ಛಾಯಾಚಿತ್ರಕಾರರು ಸೆರೆ ಹಿಡಿದಿರುವ ಚಿತ್ರಗಳ ಪ್ರದರ್ಶನ ಗುರುವಾರ ಸಂಜೆಯವರೆಗೂ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ನಡೆಯಲಿದೆ.
ತುರ್ತು ಕಾರ್ಯಚರಣೆಗೆ ಬಂದಿರುವ ಸೇನಾ ಹೆಲಿಕಾಪ್ಟರ್, ಪ್ರವಾಹದ ಭೀಕರತೆಗೆ ಸಿಲುಕಿದ ಮನೆ, ಕೊಚ್ಚಿಹೋದ ಜನ ಜೀವನ, ನೀರು ತುಂಬಿದ ಶಾಲೆ, ದೇವಸ್ಥಾನ, ಮನೆ-ಮಠ, ಪ್ರವಾಹದ ನಂತರದ ಬದುಕು ಮತ್ತು ಮುಖ್ಯಮಂತ್ರಿಗಳ ವೈಮಾನಿಕ ಸಮೀಕ್ಷೆ ಹೀಗೆ ಎಲ್ಲ ಚಿತ್ರಗಳ ಪ್ರದರ್ಶನ ಇಲ್ಲಿವೆ.