ಹುಬ್ಬಳ್ಳಿ: ಇಂಗ್ಲೆಂಡ್‌ನ ಸೇವಾ ಇಂಟರ್‌ನ್ಯಾಶನಲ್ ಒಂದು ಸೇವಾ ಸಂಸ್ಥೆ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸೇವಾ ಸಂಸ್ಥೆಗಳ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದೆ ಎಂದು ಇಂಗ್ಲೆಂಡ್‌ನಿಂದ ಆಗಮಿಸಿದ ಸೇವಾ ಇಂಟರ್‌ನ್ಯಾಶನಲ್ ಸಂಸ್ಥೆಯ ಟ್ರಸ್ಟಿ ನಟವರ್‌ಲಾಲ್ ಫಾಲ್ಡು ತಿಳಿಸಿದರು.
ಇಲ್ಲಿನ ಕೇಶ್ವಾಪುರ ಬನಂಶಕರಿ ಬಡಾವಣೆಯ ಸೇವಾ ಸದನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವಾ ಸಂಸ್ಥೆ ಪ್ರಮುಖವಾಗಿ ಶಿಕ್ಷಣ ಹಾಗೂ ಆರೋಗ್ಯ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಕರ್ನಾಟಕದಲ್ಲೂ ನಮ್ಮ ಸಂಸ್ಥೆ ವಿವಿಧ ಸೇವಾ ಸಂಸ್ಥೆಗೆ ನೆರವು ನೀಡುವ ಮೂಲಕ ಅವರ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಗದಗನಲ್ಲಿ ನಡೆಯುತ್ತಿರುವ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಸೇವಾ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ 2.25 ಕೋಟಿ ನೀಡುವುದಾಗಿ ಸಂಸ್ಥೆ ಭರವಸೆ ನೀಡಿತ್ತು. ಅದರಂತೆ ಈಗಾಗಲೇ ಸುಮಾರು 89 ಲಕ್ಷ ರೂ. ನೀಡಲಾಗಿದೆ. ಈ ಸಂಸ್ಥೆ 40 ವಿಶೇಷ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡುತ್ತಿದೆ.
ಇದೀಗ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದ್ದು, ಇದರಿಂದ ನಾಲ್ಕರಷ್ಟು ಮಕ್ಕಳಿಗೆ ಸೇವೆ ನೀಡಲು ಅವಕಾಶ ದೊರಕಿದೆ. ಚಿತ್ರಕೂಟದ ದೀನ್‌ದಯಾಳ್ ಸಂಶೋಧನಾ ಕೇಂದ್ರದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸೇವೆ ಸಂಸ್ಥೆಯಿಂದ ಶಿಬಿರಗಳನ್ನು ನಡೆಸಲಾಗುತ್ತಿದೆ.
ಉಚಿತ ಶಸ್ತ್ರಚಿಕಿತ್ಸೆಗಳನ್ನು ಕೂಡ ನಡೆಸಲಾಗುತ್ತದೆ. ಈ ಸೇವಾ ಕಾರ್ಯದಲ್ಲಿ ದೇಶದ ವೈದ್ಯರೇ ಶಸ್ತ್ರಚಿಕಿತ್ಸೆ ನಡೆಸುತ್ತಾರೆ ಎಂದು ತಿಳಿಸಿದರು. ನಗರದ ಬಿಡ್ನಾಳದಲ್ಲಿ ಸೇವಾ ಭಾರತಿಯಿಂದ ನಡೆಯುತ್ತಿರುವ ವಿದ್ಯಾವಿಕಾಸ ಕೇಂದ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಅಲ್ಲಿನ ಮಕ್ಕಳಿಗೆ ಉತ್ತಮ ಸೌಲಭ್ಯದೊಂದಿಗೆ ಒಳ್ಳೆಯ ಶಿಕ್ಷಣ ದೊರೆಯುತ್ತಿದೆ ಎಂದರು.
ನಾವು ವಿದೇಶಗಳಲ್ಲಿ ಇದ್ದರೂ ನಮ್ಮ ಸಂಸ್ಕೃತಿ ಮರೆತಿಲ್ಲ. ಇಂದಿನ ಯುವಜನತೆಗೆ ನಮ್ಮ ಸಂಸ್ಕೃತಿ ಪರಿಚಯಿಸುವ ನಿಟ್ಟಿನಲ್ಲಿ ವಾರಕ್ಕೊಮ್ಮೆ ಒಂದೇ ಪ್ರದೇಶದಲ್ಲಿ ನೆಲೆಸಿರುವ ಭಾರತೀಯರು ಸೇರಿಕೊಂಡು ನಮ್ಮ ಪ್ರಾದೇಶಿಕ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಹಂಚಿಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಯುಕೆ ಸೇವಾ ಸಂಸ್ಥೆಯ ಸದಸ್ಯ ವೇಲ್‌ಜೀ ಭಾಯಿ ರಬಾಡಿಯಾ, ರಘು ಅಕಮಂಚಿ, ಚಂದ್ರಶೇಖರ ಗೋಕಾಕ ಇತರರಿದ್ದರು.