Advertisement

ಅಪರಾಧ ತಡೆಗೆ ಸಹಕರಿಸಿ: ಆನಂದ್‌

10:18 PM Apr 29, 2019 | Lakshmi GovindaRaju |

ಶಿಡ್ಲಘಟ್ಟ: ನಗರ ಸಹಿತ ತಾಲೂಕಿನಲ್ಲಿ ಅನುಮಾನಸ್ಪದವಾಗಿ ಸಂಚರಿಸುವ ವ್ಯಕ್ತಿಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡಿ. ಪ್ರಾರ್ಥನಾ ಕೇಂದ್ರ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮರಾ ಮತ್ತು ಮೆಟೆಲ್‌ ಡಿಟೆಕ್ಟರ್‌ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕೆಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ಆನಂದ್‌ ಹೇಳಿದರು.

Advertisement

ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ ಬಾಂಬ್‌ ದಾಳಿ ಹಿನ್ನೆಲೆಯಲ್ಲಿ ನಗರದ ಕಂದಾಯ ಭವನದ ಆವರಣದಲ್ಲಿ ಪೊಲೀಸ್‌ ಇಲಾಖೆಯಿಂದ ಆಯೋಜಿಸಿದ್ದ ನಾಗರಿಕರ ಸಭೆಯಲ್ಲಿ ಅವರು ಮಾತನಾಡಿದರು.

ಪೊಲೀಸರೊಂದಿಗೆ ಕೈಜೋಡಿಸಿ: ಸಮಾಜದಲ್ಲಿರುವ ನಾಗರಿಕರಿಗೆ ರಕ್ಷಣೆ ಒದಗಿಸುವುದು ಪೊಲೀಸರ ಕರ್ತವ್ಯ. ಈ ಕುರಿತು ನಾಗರಿಕರೂ ಅನುಮಾನಸ್ಪದ ವ್ಯಕ್ತಿಗಳ ಕುರಿತು ಮಾಹಿತಿ ನೀಡಿ ಅಪರಾಧ ಚಟುವಟಿಕೆ ನಿಯಂತ್ರಿಸಲು ಪೊಲೀಸರೊಂದಿಗೆ ಕೈಜೋಡಿಸಬೇಕೆಂದರು.

ಸಿಸಿಟಿವಿ ಅಳವಡಿಸಿ: ಪ್ರಾರ್ಥನೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಮಸೀದಿ, ದೇವಾಲಯ ಮತ್ತು ಚರ್ಚ್‌ಗಳ ಬಳಿ ಸಿಸಿ ಟಿವಿ ಕ್ಯಾಮರಾ ಅಳವಡಿಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಸಹಕಾರ ನೀಡಬೇಕು. ನಗರದ ಪ್ರಮುಖ ಬೀದಿಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆಗೆ ಜಿಲ್ಲಾಧಿಕಾರಿಗಳು ನಗರಸಭೆ ಮೂಲಕ 20 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಶೀಘ್ರ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ಶಿಬಿರ ಆಯೋಜನೆ: ನಗರದಲ್ಲಿ ಸಂಚಾರದ ವ್ಯವಸ್ಥೆ ಸುಗಮಗೊಳಿಸಲು ಬಿಗಿ ಕ್ರಮ ಕೈಗೊಳ್ಳಲಾಗಿದೆ. ಬೈಕ್‌, ಆಟೋ ಚಾಲಕರು ಕಡ್ಡಾಯವಾಗಿ ವಾಹನಗಳ ದಾಖಲೆ ಕ್ರಮ ಬದ್ಧವಾಗಿಟ್ಟುಕೊಳ್ಳಬೇಕು. ಪೊಲೀಸ್‌ ಇಲಾಖೆಯಿಂದ ಸುಮಾರು 50 ಮಂದಿಗೆ ಉಚಿತವಾಗಿ ಚಾಲನಾ ಪರವಾನಗೆ ಒದಗಿಸುತ್ತೇವೆ. ನಾಗರಿಕರಿಗೆ ಕಡಿಮೆ ದರದಲ್ಲಿ ಚಾಲನಾ ಪರವಾನಗೆ ಪಡೆಯಲು ವಿಶೇಷ ಶಿಬಿರ ಆಯೋಜಿಸಲು ಸಹಕರಿಸುತ್ತೇವೆಂದರು.

Advertisement

ತಾಲೂಕಿನ ವಿವಿಧ ದೇವಾಲಯಗಳಲ್ಲಿ ಕಳ್ಳತನದ ಪ್ರಕರಣಗಳು ನಡೆಯುತ್ತಿರುವುದು ವಿಷಾದಕರ. ಕಳ್ಳರು ಸ್ಥಳೀಯರು ಅಥವಾ ಹೊರ ಭಾಗದವರೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಪೊಲೀಸ್‌ ಇಲಾಖೆಯನ್ನು ಜನಸ್ನೇಹಿಯನ್ನಾಗಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಗಾಂಜಾ-ಜೂಜು: ಶಿಡ್ಲಘಟ್ಟ ತಾಲೂಕಿನಲ್ಲಿ ವ್ಯಾಪಕವಾಗಿ ಗಾಂಜಾ ಮಾರಾಟ ಮತ್ತು ಜೂಜು ಹೆಚ್ಚಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆಂದರು.

ದಾಖಲೆ ಇಟ್ಟುಕೊಳ್ಳಿ: ಶಿಡ್ಲಘಟ್ಟ ನಗರ ಮತ್ತು ತಾಲೂಕಿನಲ್ಲಿ ಬೈಕ್‌ಗಳಲ್ಲಿ ಸಂಚರಿಸುವ ನಾಗರಿಕರು ಕಡ್ಡಾಯವಾಗಿ ತಮ್ಮ ವಾಹನಗಳ ದಾಖಲೆಗಳ ಜೆರಾಕ್ಸ್‌ ಪ್ರತಿ ಮತ್ತು ಚಾಲನಾ ಪರವಾನಗೆ ಮತ್ತು ವಾಹನದ ವಿಮೆ ಮಾಡಿಸಿರುವ ದಾಖಲೆ ಇಟ್ಟುಕೊಂಡು ಸಂಚರಿಸಬೇಕು. ಜೊತೆಗೆ ಜೀವಭದ್ರತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕೆಂದು ಸೂಚನೆ ನೀಡಿದರು.

ನಗರ ಪೊಲೀಸ್‌ ಠಾಣೆ ಪಿಎಸ್‌ಐ ಅವಿನಾಶ್‌, ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಪಿಎಸ್‌ಐ ರಂಜನ್‌ಕುಮಾರ್‌, ವಿವಿಧ ಸಂಘ ಸಂಸ್ಥೆಗಳು ಮತ್ತು ವಿವಿಧ ಮಸೀದಿ, ದೇವಾಲಯ, ಚರ್ಚ್‌ಗಳ ಮುಖ್ಯಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next