Advertisement

Assembly Session: ಎರಡನೇ ದಿನವೂ ಸದನದಲ್ಲಿ ಧ್ವನಿಸಿದ ವಾಲ್ಮೀಕಿ ಕದನ

12:15 AM Jul 17, 2024 | Team Udayavani |

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ ಸಂಬಂಧ ವಿಧಾನಮಂಡಲದ ಉಭಯ ಸದನಗಳಲ್ಲೂ ಮಂಗಳವಾರವೂ ವಿಪಕ್ಷ ಹಾಗೂ ಆಡಳಿತ ಪಕ್ಷದ ಮಧ್ಯೆ ಜಟಾಪಟಿ ಮುಂದುವರಿದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ತನ್ನ ಆಗ್ರಹವನ್ನು ಬಲಗೊಳಿಸಿದೆ.

Advertisement

ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾಲದಲ್ಲಿ ನಡೆದ ಹಗರಣಗಳನ್ನು ಪ್ರಸ್ತಾವಿಸಿ ಕಾಂಗ್ರೆಸ್‌ ತಿರುಗೇಟು ನೀಡಿದೆ. ಆದರೆ ಸಿದ್ದರಾಮಯ್ಯ ಮಾತ್ರ ಎರಡೂ ಸದನದ ಕಲಾಪದಲ್ಲಿ ಭಾಗಿಯಾಗಿ ವಿಪಕ್ಷಗಳ ಎಲ್ಲ ಆರೋಪಗಳಿಗೆ ಶ್ರೋತೃವಾಗಿದ್ದರು.

ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್‌.ಅಶೋಕ್‌ ಈ ವಿಚಾರ ಪ್ರಸ್ತಾವಿಸಿ ಹಗರಣದ ಮಾಹಿತಿ ತೆರೆದಿಟ್ಟರೆ, ಪರಿಷತ್ತಿನಲ್ಲಿ ಸಿ.ಟಿ.ರವಿ ಸರಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಸುರೇಶ್‌ ಕುಮಾರ್‌, ಆರಗ ಜ್ಞಾನೇಂದ್ರ, ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು, ಶಾರದಾ ಪೂರ್ಯಾ ನಾಯ್ಕ, ಕಾಂಗ್ರೆಸ್‌ ಶಾಸಕರಾದ ನರೇಂದ್ರಸ್ವಾಮಿ, ರಿಜ್ವಾನ್‌ ಅರ್ಷದ್‌, ನಾರಾಯಣಸ್ವಾಮಿ, ಷಡಕ್ಷರಿ ಮಾತನಾಡಿದರು.

ಇದೇ ವೇಳೆ ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದ ಬಳಿಕ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಲು ವಿಪಕ್ಷಗಳು ಪಟ್ಟು ಹಿಡಿದವು. ಸದನಲ್ಲಿ ಗದ್ದಲ ಉಂಟಾಗಿದ್ದರಿಂದ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಲಾ ಯಿತು. ಮಧ್ಯಾಹ್ನ ಕಲಾಪ ಸೇರಿದಾಗ ಸಭಾಪತಿ ಚರ್ಚೆಗೆ ಅವಕಾಶ ಕೊಟ್ಟರು. ಮಾತು ಆರಂಭಿಸಿದ ಸಿ.ಟಿ. ರವಿ ಸರಕಾರದ ವಿರುದ್ಧ ಹರಿಹಾಯ್ದರು. ಆಡಳಿತ-ವಿಪಕ್ಷಗಳ ಜಟಾಪಟಿ ಹಿನ್ನೆಲೆಯಲ್ಲಿ ಸದನವನ್ನು ಸಭಾಪತಿ ಗುರುವಾರಕ್ಕೆ ಮುಂದೂಡಿದರು.

ಮೈಕ್‌ ಆಫ್ ಮಾಡಿದ ಸ್ಪೀಕರ್‌
ಸದನದಲ್ಲಿ ಈ ವಿಚಾರದ ಬಗ್ಗೆ ಅಶೋಕ್‌ ಮಾತನಾಡುತ್ತ, ಎಚ್‌.ಡಿ. ರೇವಣ್ಣ ಪ್ರಕರಣವನ್ನು ಪದೇಪದೆ ಉಲ್ಲೇಖೀಸಿದರು. ಇದಕ್ಕೆ ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌, ನಾರಾಯಣಸ್ವಾಮಿ ವಿರೋಧ ವ್ಯಕ್ತಪಡಿಸಿದಾಗ, ಮೂರು ಪಕ್ಷಗಳ ಮಧ್ಯೆ ಭಾರೀ ವಾಗ್ವಾದ ಸೃಷ್ಟಿಯಾಯ್ತು. ಉಪಸಭಾಪತಿಯಿಂದ ಸದನ ನಿಯಂತ್ರಣ ಸಾಧ್ಯವಾಗದೇ ಇದ್ದಾಗ ಸ್ಪೀಕರ್‌ ಖಾದರ್‌ ಎಲ್ಲರ ಮೈಕ್‌ ಬಂದು ಮಾಡಿದರು. ಇದರಿಂದ ಒಂದು ಕ್ಷಣ ಸದನ ಅವಕ್ಕಾಯಿತು. ಮೈಕ್‌ ಬಂದ್‌ ಮಾಡಿದ್ದಕ್ಕೆ ಯತ್ನಾಳ್‌, ಆರಗ, ಅಶ್ವತ್ಥ ನಾರಾಯಣ, ಹರೀಶ್‌ ಪೂಂಜಾ ಬೇಸರ ವ್ಯಕ್ತಪಡಿಸಿದರು.

Advertisement

ಕಿಡಿ ಹೊತ್ತಿಸಿದ ಸುನಿಲ್‌
ಭೋಜನ ಬಳಿಕ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡುತ್ತಿರುವಾಗ ಗೃಹಸಚಿವ ಡಾ| ಜಿ. ಪರಮೇಶ್ವರ್‌ ಚರ್ಚೆಯ ಸ್ವರೂಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸಿಟ್ಟಿಗೆದ್ದ ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌, ಎಲ್ಲದಕ್ಕೂ ಆಕ್ಷೇಪ ಎತ್ತುತ್ತಿದ್ದೀರಿ. ವಾಲ್ಮೀಕಿ ನಿಗಮದ ಹಣ ಬಳ್ಳಾರಿ ಚುನಾವಣೆಗೆ ಹೋಗಿಲ್ಲ ಎಂದರೆ ಎಲ್ಲಿಗೆ ಹೋಯ್ತು? ಅಮೇಠಿ ಚುನಾವಣೆಗೆ ಹೋಯಿತೇ? ಕಾಂಗ್ರೆಸ್‌ ಹೈಕಮಾಂಡ್‌ಗೆ ಹೋಯಿತೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next