Advertisement

ಶಿಕ್ಷಕರ ವಯೋಮಿತಿಯಲ್ಲಿ ವಿನಾಯಿತಿ: ಪರಿಶೀಲಿಸಿ ವಿಸ್ತರಣೆ: ಸಚಿವ ಬಿ.ಸಿ.ನಾಗೇಶ್‌

09:13 PM Sep 13, 2022 | Team Udayavani |

ವಿಧಾನಪರಿಷತ್‌: ಸರ್ಕಾರಿ ಶಾಲೆಯ 6ರಿಂದ 8ನೇ ತರಗತಿಗೆ ಪದವೀಧರ ಶಿಕ್ಷಕರ ನೇಮಕಾತಿ ವಯೋಮಿತಿಯಲ್ಲಿ 2 ವರ್ಷ ವಿನಾಯಿತಿ ನೀಡಿದ ನಿಯಮವನ್ನು ಅನುದಾನಿತ ಖಾಸಗಿ ಶಾಲೆಗಳ ಶಿಕ್ಷಕರಿಗೂ ಅನ್ವಯ ಮಾಡುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

Advertisement

ಬಿಜೆಪಿಯ ಬಸವರಾಜ ಹೊರಟ್ಟಿ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಕೊರೊನಾ ಸೇರಿ ಇನ್ನಿತರ ಕಾರಣಗಳಿಂದಾಗಿ ಶಿಕ್ಷಕರ ನೇಮಕಾತಿ ತಡವಾಗಿದೆ. ಹೀಗಾಗಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕಾಗಿ 6ರಿಂದ 8ನೇ ತರಗತಿ ಬೋಧನೆಗೆ ನೇಮಕವಾಗುವ ಶಿಕ್ಷಕರ ವಯೋಮಿತಿಯಲ್ಲಿ 2 ವರ್ಷ ವಿನಾಯಿತಿ ನೀಡಲಾಗಿದೆ.

ಅದರಿಂದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕವಾಗುವ ಎಲ್ಲ ವರ್ಗದವರಿಗೂ ಇದು ಅನ್ವಯವಾಗಲಿದೆ. ಇದೇ ನಿಯಮವನ್ನು ಅನುದಾನಿತ ಖಾಸಗಿ ಶಾಲೆಗಳಿಗೂ ಅನ್ವಯ ಮಾಡುವಂತೆ ಶಾಸಕರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಅದಕ್ಕೂ ಮುನ್ನ ಮಾತನಾಡಿದ ಬಸವರಾಜ ಹೊರಟ್ಟಿ, ಅನುದಾನಿತ ಖಾಸಗಿ ಶಾಲೆಗಳ ಶಿಕ್ಷಕರಿಗೆ ಸರ್ಕಾರ ದಿಂದಲೇ ವೇತನ ಪಾವತಿಯಾಗುತ್ತದೆ. ಆದರೆ, ಸರ್ಕಾರಿ ಶಾಲೆ ಶಿಕ್ಷಕರಿಗೆ ಇರುವ ನಿಯಮ ಅನುದಾನಿತ ಖಾಸಗಿ ಶಾಲೆ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎನ್ನುವುದು ಸರಿಯಲ್ಲ. ಸರ್ಕಾರಿ ಮತ್ತು ಅನುದಾನಿತ ಖಾಸಗಿ ಶಾಲೆಗಳಿಗೆ ಒಂದೇ ರೀತಿಯ ನಿಯಮವಿರಬೇಕು. ಹೀಗಾಗಿ ಅನುದಾನಿತ ಖಾಸಗಿ ಶಾಲೆಗಳಿಗೆ ನೇಮಕವಾಗುವ ಶಿಕ್ಷಕರ ವಯೋಮತಿಯನ್ನೂ ಸಡಿಲಗೊಳಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next