Advertisement

ವಿಧಾನಸಭೆ ಚುನಾವಣೆ: 4 ಕ್ಷೇತ್ರಕ್ಕೊಬ್ಬ ಉಸ್ತುವಾರಿ ನೇಮಿಸಿದ ಬಿಜೆಪಿ

06:40 AM Mar 15, 2018 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ವಿಶೇಷ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು, ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಚುನಾವಣೆ ಅಂತಿಮಗೊಳ್ಳುವವರೆಗೆ ಪ್ರತಿ ನಾಲ್ಕು ವಿಧಾನಸಭೆ ಕ್ಷೇತ್ರಕ್ಕೆ ಒಬ್ಬ ಉಸ್ತುವಾರಿಯಂತೆ ಸುಮಾರು 55 ಮಂದಿಯನ್ನು ನೇಮಕ ಮಾಡಿದೆ.

Advertisement

ವಿಶೇಷವೆಂದರೆ, ಈ ಉಸ್ತುವಾರಿಗಳೆಲ್ಲರೂ ಕೇಂದ್ರ ಸಚಿವರು ಮತ್ತು ಹೊರ ರಾಜ್ಯದ ಪ್ರಮುಖರು. ಈಗಾಗಲೇ ಈ ನಾಯಕರ ರಾಜ್ಯ ಪ್ರವಾಸ ಆರಂಭವಾಗಿದ್ದು, ಮತದಾನದವರೆಗೂ ತಮಗೆ ವಹಿಸಿದ ನಾಲ್ಕು ಕ್ಷೇತ್ರಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಉಸ್ತುವಾರಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲೂ ಜಾಣತನ ಮೆರೆದಿರುವ ಪಕ್ಷ, ಸಾರ್ವಜನಿಕ ವಲಯದಲ್ಲಿ ವರ್ಚಸ್ಸು ಹೊಂದಿರುವ ಯುವ ಮುಖಗಳು, ಚುನಾವಣಾ ತಂತ್ರಗಾರಿಕೆ ರೂಪಿಸುವ ಸಾಮರ್ಥ್ಯ ಹೊಂದಿರುವವರು, ತಳ ಮಟ್ಟದ ಕಾರ್ಯಕರ್ತರೊಂದಿಗೆ ಮುಕ್ತವಾಗಿ ಬೆರೆಯುವ ಪ್ರಮುಖರಿಗೆ ಆದ್ಯತೆ ನೀಡಿದೆ. ಈಗಾಗಲೇ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶಾಸಕರು, ಸಂಸದರ ಸಹಕಾರದೊಂದಿಗೆ ಇವರು ಕಾರ್ಯನಿರ್ವಹಿಸಲಿದ್ದಾರೆ.

ಯಾಕಾಗಿ ಹೊರ ರಾಜ್ಯದ ಉಸ್ತುವಾರಿಗಳು:
ರಾಜ್ಯ ಬಿಜೆಪಿಯಲ್ಲಿ ಕೆಲ ಮುಖಂಡರು ಹೊಂದಾಣಿಕೆ ರಾಜಕೀಯ ಮಾಡುತ್ತಿರುವ ಆರೋಪಗಳಿವೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಈ ಬಗ್ಗೆ ಪಕ್ಷದ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ. ಆದರೂ ಹೊಂದಾಣಿಕೆ ರಾಜಕಾರಣ ಮುಂದುವರಿದರೆ ಅದು ಮಿಷನ್‌-150ಗೆ ಅಡ್ಡಿಯಾಗಬಹುದು. ಹೀಗಾಗಿ ಸ್ಥಳೀಯರ ಸಂಪರ್ಕ ಇಲ್ಲದ ಕೇಂದ್ರ ಸಚಿವರು ಮತ್ತು ಹೊರ ರಾಜ್ಯದ ಪ್ರಮುಖರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಈಗಾಗಲೇ ರಾಷ್ಟ್ರೀಯ ಬಿಜೆಪಿ ನೇಮಿಸಿದ ಒಂದು ಖಾಸಗಿ ತಂಡ ಕೆಲಸ ಮಾಡುತ್ತಿದ್ದು, ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರತಿನಿತ್ಯ ರಾಷ್ಟ್ರೀಯ ನಾಯಕರಿಗೆ ವರದಿ ಕಳುಹಿಸುತ್ತಿದೆ. ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಗಳು, ಕ್ಷೇತ್ರ ಉಸ್ತುವಾರಿಗಳು ಸೇರಿದಂತೆ ಸ್ಥಳೀಯ ಪ್ರಮುಖ ನಾಯಕರ ಕುರಿತಾದ ಮಾಹಿತಿ ಇದರಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ನಾಯಕರು ಈ ಮಾಹಿತಿಯನ್ನು ಆಯಾ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳಿಗೆ ಕಳುಹಿಸಿಕೊಡುತ್ತಾರೆ. ಇದನ್ನು ಆಧರಿಸಿ ಅವರು ಕಾರ್ಯಾಚರಣೆ ಮಾಡುತ್ತಿದ್ದಾರೆ.

Advertisement

ಮೂರು ಸುತ್ತಿನಲ್ಲಿ ಕಾರ್ಯಾಚರಣೆ:
ಉಸ್ತುವಾರಿಗಳು ಮೂರು ಸುತ್ತಿನಲ್ಲಿ ಕಾರ್ಯಾಚರಣೆ ನಡೆಸುತ್ತಾರೆ. ಮೊದಲ ಸುತ್ತಿನ ಪ್ರವಾಸದಲ್ಲಿ ಸ್ಥಳೀಯ ಪದಾಧಿಕಾರಿಗಳು, ಪ್ರಮುಖರೊಂದಿಗೆ ಚರ್ಚಿಸಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಒಂದು ವರದಿ ಸಿದ್ಧಪಡಿಸಿ ಅದನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ರಾಜ್ಯ ಚುನಾವಣಾ ಉಸ್ತುವಾರಿಗಳಾದ ಪ್ರಕಾಶ್‌ ಜಾವಡೇಕರ್‌, ಪಿಯೂಷ್‌ ಗೋಯೆಲ್‌ಗೆ ಸಲ್ಲಿಸುತ್ತಾರೆ. ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಸಂದರ್ಭದಲ್ಲಿ ಇದನ್ನು ಪರಿಗಣಿಸಲಾಗುತ್ತದೆ.

ಎರಡನೇ ಸುತ್ತಿನ ಪ್ರವಾಸದಲ್ಲಿ ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚುನಾವಣಾ ಪ್ರಚಾರಕ್ಕೆ ಏನೆಲ್ಲಾ ವಿಷಯಗಳ ಅಗತ್ಯವಿದೆ ಎಂಬುವುದನ್ನು ಪರಿಶೀಲಿಸುವ ಅವರು ನಂತರ ಅವುಗಳನ್ನು ಆಧರಿಸಿ ಒಂದು ಕಾರ್ಯತಂತ್ರ ರೂಪಿಸುತ್ತಾರೆ. ಮೂರನೇ ಸುತ್ತಿನ ಪ್ರವಾಸದಲ್ಲಿ ಅದನ್ನು ಅನುಷ್ಟಾನಗೊಳಿಸುವ ಕೆಲಸ ಮಾಡುತ್ತಾರೆ. ಆದರೆ, ಈ ಸಂದರ್ಭದಲ್ಲಿ ಅವರು ತಮ್ಮನ್ನು ನೇರವಾಗಿ ತೊಡಗಿಸಿಕೊಳ್ಳುವುದಿಲ್ಲ. ಸ್ಥಳೀಯ ಮುಖಂಡರು ಕಾರ್ಯಕರ್ತರ ಮೂಲಕ ಅನುಷ್ಟಾನಗೊಳಿಸುತ್ತಾರೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next