Advertisement

Assembly: ಶೇ.24.1 ಹಣ ಪರಿಶಿಷ್ಟರಿಗೆ ಕಾನೂನು ತಂದವ ನಾನು

01:32 AM Jul 19, 2024 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಆಧರಿಸಿ ಒಟ್ಟಾರೆ ಬಜೆಟ್‌ನ ಶೇ. 24.1ರಷ್ಟು ಹಣವನ್ನು ಆ ವರ್ಗಕ್ಕೇ ಖರ್ಚು ಮಾಡಬೇಕೆಂಬ ಕಾನೂನು ತಂದಿದ್ದೇ ನಾವು. ಮುಂಬಡ್ತಿಯಲ್ಲಿ ಮೀಸಲಾತಿ, 1 ಕೋಟಿ ರೂ. ಮೊತ್ತದವರೆಗಿನ ಕಾಮಗಾರಿಯ ಗುತ್ತಿಗೆಯಲ್ಲಿ ಮೀಸಲಾತಿ, ಕೆಐಎಡಿಬಿ ಭೂಮಿ ಖರೀದಿಸಲು ಶೇ.75 ರಷ್ಟು ನೆರವು ಕೊಡುವ ಕಾನೂನು ತಂದಿದ್ದೇ ನಾವು..

Advertisement

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ವಿಪಕ್ಷಗಳ ಆರೋಪಗಳಿಗೆ ಗುರುವಾರ ವಿಧಾನಸಭೆಯಲ್ಲಿ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರಕಾರ ಏನೇನು ಮಾಡಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ರಾಜ್ಯದ ಜನಸಂಖ್ಯೆಯಲ್ಲಿ ಶೇ.17.15 ರಷ್ಟು ಪರಿಶಿಷ್ಟ ಜಾತಿಯವರಿದ್ದು, ಶೇ. 6.95ರಷ್ಟು ಪರಿಶಿಷ್ಟ ಪಂಗಡದವರಿದ್ದಾರೆ. ಸಮ ಸಮಾಜ ನಿರ್ಮಾಣ ಆಗಬೇಕಿದ್ದರೆ ಸಾಮಾಜಿಕವಾಗಿ, ಆರ್ಥಿಕವಾಗಿ ಈ ವರ್ಗಗಳಿಗೆ ಶಕ್ತಿ ಬರಬೇಕು. ಅಸಮಾನತೆ ತೊಲಗಿಸಬೇಕು ಎಂದು ನಮ್ಮ ಸಂವಿಧಾನದಲ್ಲಿದೆ. ಸಂವಿಧಾನ ಜಾರಿಯಾಗಿ 77 ವರ್ಷವಾದರೂ ಸಮಾನತೆ ಬಂದಿಲ್ಲ. ಅದಕ್ಕಾಗಿಯೇ ನಿಗಮಗಳನ್ನು ರಚಿಸಿ, ಆ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ.

ನನ್ನ ಬದ್ಧತೆ ಬದಲಾಗದು
ಬಿಜೆಪಿಯವರು ಏನು ಮಾಡದೇ ಇದ್ದರೂ ಪರಿಶಿಷ್ಟರಿಗೆ ಅನ್ಯಾಯ ಆಗಿದೆ ಎನ್ನುತ್ತಾರೆ. ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದರೆ ಸಾಲದು. ಅವರಿಗೆ ಸಾಮಾಜಿಕ, ಆರ್ಥಿಕ ನ್ಯಾಯ ಸಿಗಬೇಕು. ಅದು ನಮ್ಮ ಬದ್ಧತೆ. ಆ ಬದ್ಧತೆ ಈಗಲೂ ಇದೆ, ಮುಂದೆಯೂ ಇರುತ್ತದೆ. ಸಾಯುವವರೆಗೂ ಇರುತ್ತದೆ. ಅದರಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಈ ವಿಚಾರದಲ್ಲಿ ಬಿಜೆಪಿಯವರಿಂದ ಪಾಠ ಕಲಿಯಬೇಕಿಲ್ಲ. ಯಾರಿಂದಲೂ ಪಾಠ ಹೇಳಿಸಿಕೊ ಳ್ಳುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡರು.

ಕೇಂದ್ರ ಸರಕಾರ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಏಕೆ ಮಾಡಿಲ್ಲ?
2013ರ ಡಿಸೆಂಬರ್‌ನಲ್ಲಿ ನಾನು ಮುಖ್ಯ ಮಂತ್ರಿಯಾಗಿದ್ದಾಗ ಬೆಳಗಾವಿ ಅಧಿವೇಶನದ ವೇಳೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆಯನ್ನು ಜಾರಿಗೆ ತಂದೆ. ಈ ಕಾಯ್ದೆಯಂತೆ 2024- 25ರ 1.60 ಲಕ್ಷ ಕೋಟಿ ರೂ.ಗಳ ಬಜೆಟ್‌ನಲ್ಲಿ ಶೇ. 24.1ರಷ್ಟನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಟ್ಟಿದ್ದೇವೆ. ಈ ಕಾನೂನು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಬಿಟ್ಟರೆ ಬೇರೆಲ್ಲೂ ಇಲ್ಲ. ಮುಂಭಡ್ತಿಯಲ್ಲಿ ಮೀಸಲಾತಿ ತಂದಿದ್ದೇವೆ. ಇದನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿಹಿಡಿ ದಿದೆ. 1 ಕೋಟಿ ರೂ.ವರೆಗಿನ ಕಾಮಗಾರಿಯ ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದೇವೆ ಎಂದರು.

Advertisement

ಮುಂದಿನ ಸಂಪುಟದಲ್ಲಿ ಕನ್ನಡಿಗರಿಗೆ ಮೀಸಲು ವಿಧೇಯಕ: ಸಿಎಂ ಸ್ಪಷ್ಟನೆ
ಖಾಸಗಿ ವಲಯದ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ವಿಧೇಯಕವನ್ನು ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ಸದನದ ಮುಂದೆ ತರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಷಯ ಪ್ರಸ್ತಾವಿಸಿದ ವಿಪಕ್ಷ ನಾಯಕ ಆರ್‌. ಅಶೋಕ್‌, ಖಾಸಗಿ ಉದ್ಯಮ ಗಳಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಉದ್ಯೋಗದ ಭರವಸೆ ಕೊಟ್ಟು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದ ನೀವು ಅದನ್ನು ಅಳಿಸಿ ಹಾಕಿದ್ದೇಕೆ? ಇದೇನು ತಘಲಕ್‌ ದರ್ಬಾರೇ ಎಂದು ಪ್ರಶ್ನಿಸಿದರು.

ಯಾವ ಮೊಹಮ್ಮದ್‌ ಬಿನ್‌ ತುಘಲಕ್‌ನ ಆಡಳಿತವೂ ಇಲ್ಲಿಲ್ಲ. ಇಲ್ಲಿರುವುದು ಸಿದ್ದರಾಮಯ್ಯ ಸರಕಾರವೇ. ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕದ ಬಗ್ಗೆ ಅರೆಬರೆ ಚರ್ಚೆಯಾಗಿತ್ತು. ಸ್ವಲ್ಪ ಗೊಂದಲಗಳಿತ್ತು. ಹೀಗಾಗಿ ಮುಂದಿನ ಸಂಪುಟ ಸಭೆಯ ಮುಂದೆ ತರೋಣ ಎಂದಿದ್ದೆ. ಗೊಂದಲ ನಿವಾರಣೆ ಮಾಡಿ ಅಧಿವೇಶನದ ಮುಂದೆಯೂ ತರುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next