Advertisement

ವಿಧಾನಸಭೆ ಚುನಾವಣೆ; ಈಗಿಂದಲೇ ಮಿಷನ್‌ 150 ಕಾರ್ಯ ಆರಂಭಿಸಿ : ಪ್ರಧಾನಿ ಮೋದಿ

01:02 AM Sep 03, 2022 | Team Udayavani |

ಮಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯದೆಲ್ಲೆಡೆ ಶಕ್ತಿ ಪ್ರದರ್ಶನ ನೀಡುವ ಮೂಲಕ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಈಗಿಂದಲೇ ಕಾರ್ಯೋನ್ಮುಖರಾಗಿ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ.

Advertisement

ಸಮಾವೇಶದ ಬಳಿಕ ಹೆಲಿಪ್ಯಾಡ್‌ ಬಳಿ ಪಕ್ಷದ ಕೋರ್‌ಕಮಿಟಿ ಸದಸ್ಯರ ಜತೆಗೆ ಸುಮಾರು 45 ನಿಮಿಷ ಚರ್ಚೆ ನಡೆಸಿದ ಅವರು, ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳು, ಪಕ್ಷದಿಂದ ನಡೆಯುತ್ತಿರುವ ಸಂಘಟನಾತ್ಮಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಮಂಗಳೂರಿನ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ ಹಾಗೂ ಬಿಜೆಪಿ ಕಾರ್ಯಕರ್ತರ ಉತ್ಸಾಹದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಿರಂತರ ಭೇಟಿ
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ನಿರಂತರವಾಗಿ ಭೇಟಿ ನೀಡುತ್ತೇನೆ ಎಂದು ಮೋದಿ ಭರವಸೆ ನೀಡಿದರು.

ಕೇಂದ್ರ, ರಾಜ್ಯ ಸರಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ಮೋದಿ ವಿವರ ಪಡೆ ದರು. ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಜಿಲ್ಲಾ ಮತ್ತು ವಿಭಾಗವಾರು ಸಮಾವೇಶ ಆಯೋಜಿಸಬೇಕು. ಸರಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸಲು ಸೂಕ್ತ ಕಾರ್ಯ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಅಭಿವೃದ್ಧಿಯ ಮಂತ್ರದೊಂದಿಗೆ ಚುನಾವಣೆ
ಗುಜರಾತ್‌ ಚುನಾವಣೆ ಬಳಿಕ‌ ನಮ್ಮ ಗುರಿ ಕರ್ನಾಟಕ. ಅಭಿವೃದ್ಧಿಯ ಮಂತ್ರದೊಂದಿಗೆ ನಾವು ಚುನಾವಣೆಗೆ ಹೋಗಬೇಕಿದೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ರೀತಿಯಲ್ಲೂ ಸಜ್ಜಾಗಬೇಕು ಎಂದು ಹೇಳಿದ್ದಾರೆ.

Advertisement

ಮೋದಿ ಅವರು ಮೊದಲ ಬಾರಿಗೆ ರಾಜ್ಯ ಕೋರ್‌ ಕಮಿಟಿ ಸಭೆಯಲ್ಲಿ ಸುದೀರ್ಘ‌ಕಾಲ ರಾಜ್ಯ ನಾಯಕರ ಜತೆ ಸಮಾಲೋಚನೆ ನಡೆಸಿದರು. ಮುಂದಿನ ವಿಧಾನಸಭೆ ಚುನಾವಣೆ ಗೆಲ್ಲಲು ಸಂಘಟನಾತ್ಮಕವಾಗಿ ರೂಪಿಸಿರುವ ಕಾರ್ಯಕ್ರಮಗಳ ನೀಲನಕ್ಷೆಯನ್ನು ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲು ವಿವರಿಸಿದರೆ, ವಿದ್ಯಾನಿಧಿ ಸೇರಿ ಜನಪರ ಕಾರ್ಯಕ್ರಮಗಳ ಬಗ್ಗೆ ಆಡಳಿತಾತ್ಮಕವಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಪಕ್ಷ ಸಂಘಟನೆ ಹಾಗೂ ಸರಕಾರದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಪ್ರಧಾನಿಯವರು, ಮತ್ತಷ್ಟು ಪರಿಣಾಮಕಾರಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ತಿಳಿಸಿದರು ಎಂದು ಹೇಳಲಾಗಿದೆ.
ಹಿರಿಯ ನಾಯಕರಾದ ಯಡಿಯೂರಪ್ಪ ಸೇರಿ ಎಲ್ಲರ ಸಲಹೆ ಸೂಚನೆ ಪಡೆದು ಕಾರ್ಯಕ್ರಮ ರೂಪಿಸಿ, ನಮ್ಮೆಲ್ಲರ ಗುರಿ ಜನಹಿತಕ್ಕಾಗಿ ಆಡಳಿತವಾಗಬೇಕು ಎಂದು ಹೇಳಿದರು.

ಸದಸ್ಯರಾದ ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್‌. ಯಡಿ ಯೂರಪ್ಪ, ಪ್ರಹ್ಲಾದ್‌ ಜೋಷಿ, ಜಗದೀಶ್‌ ಶೆಟ್ಟರ್‌, ಗೋವಿಂದ ಕಾರ ಜೋಳ, ಡಿ.ವಿ. ಸದಾನಂದ ಗೌಡ, ಅರುಣ್‌ ಸಿಂಗ್‌, ಸಿ.ಟಿ.ರವಿ. ಕೆ.ಎಸ್‌.ಈಶ್ವರಪ್ಪ, ಶ್ರೀರಾಮುಲು, ಆರ್‌.ಅಶೋಕ್‌ ,ಡಾ| ಅಶ್ವಥ್‌ ನಾರಾಯಣ್‌, ರಾಜೇಶ್‌ ಜಿ.ವಿ, ಡಿ.ಕೆ.ಅರುಣಾ, ನಿರ್ಮಲ್‌ ಕುಮಾರ್‌ ಸುರಾನಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next