ನವದೆಹಲಿ:ಪಂಜಾಬ್ ಮತ್ತು ಗೋವಾ ರಾಜ್ಯದಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಕನಸು ಭಗ್ನವಾದಂತಾಗಿದೆ. ಪಂಜಾಬ್ ನಲ್ಲಿ ಅಧಿಕಾರದ ಗದ್ದುಗೆ ಏರುವ ಹುಮ್ಮಸ್ಸಿನಲ್ಲಿದ್ದ ಆಪ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಗೋವಾದಲ್ಲಿಯೂ ಆಪ್ ಪಕ್ಷದ ಮ್ಯಾಜಿಕ್ ಯಾವುದೇ ಕೆಲಸ ಮಾಡಿಲ್ಲ. ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಆಮ್ ಆದ್ಮಿ ಪಕ್ಷ, ಪಂಜಾಬ್ ನಲ್ಲಿ ಅಧಿಕಾರ ಹಿಡಿಯುವ ಮೂಲಕ ದೆಹಲಿಯಿಂದ ಹೊರಗೂ ತನ್ನ ವರ್ಚಸ್ಸು ಬೆಳೆಸಿಕೊಳ್ಳುವ ಲೆಕ್ಕಚಾರ ಹಾಕಿತ್ತು.
ಆದರೆ ಪಂಜಾಬ್ ನಲ್ಲಿ ಆಪ್ ಪಕ್ಷದ ಲೆಕ್ಕಚಾರ ತಲೆಕೆಳಗಾಗಿದೆ. ಪಂಜಾಬ್ ನಲ್ಲಿ ಅಮರೀಂದರ್ ಸಿಂಗ್ ಅವರ “ಕೈ’ ಹಿಡಿಯುವ ಮೂಲಕ ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ಏರಿದೆ.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಪ್ ಅಥವಾ ಕಾಂಗ್ರೆಸ್ ಅಧಿಕಾರ ಹಿಡಿಯುವ ಸಾಧ್ಯತೆ ಇರುವುದಾಗಿ ಮತಗಟ್ಟೆ ಸಮೀಕ್ಷೆ ತಿಳಿಸಿತ್ತು.
ಪಂಜಾಬ್ ನಲ್ಲಿ ಆಪ್ ನ ಭಗವಂತ್ ಮಾನ್ ಪ್ರಮುಖ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದರು. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ 100 ಸ್ಥಾನ ಗಳಿಸುವುದಾಗಿ ಆಪ್ ಹೇಳಿತ್ತು. ಗೋವಾ ಮತ್ತು ಪಂಜಾಬ್ ನಲ್ಲಿನ ಫಲಿತಾಂಶದಿಂದ ನಿರಾಸೆಯಾಗಿದೆ ಎಂದು ಆಪ್ ನ ಸೋಮನಾಥ ಭಾರ್ತಿ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ರಾಜಕೀಯಕ್ಕೆ ಹೊಸಬರು, ಚುನಾವಣೆಯಲ್ಲಿ ನಂಬರ್ ಗೇಮ್ ಮುಖ್ಯ ಎಂಬುದರ ಬಗ್ಗೆ ಲೆಕ್ಕಚಾರ ಹಾಕಿಲ್ಲ. ನಾವು ಕಠಿಣ ಕೆಲಸದಲ್ಲಿ ಭರವಸೆ ಇಟ್ಟಿದ್ದೇವೆ ಎಂದು ಹೇಳಿದರು.