Advertisement

ಚುನಾವಣ ಆಯೋಗದಿಂದ ವರ್ಗಾವಣೆ ನೀತಿ ಪ್ರಕಟ; ವಿಧಾನಸಭೆ ಚುನಾವಣೆ ಪ್ರಕ್ರಿಯೆ ಚುರುಕು

10:47 PM Dec 09, 2022 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವಂತೆ ಚುನಾವಣ ಪ್ರಕ್ರಿಯೆಗಳನ್ನು ಚುರುಕುಗೊಳಿಸಿರುವ ಕೇಂದ್ರ ಚುನಾವಣಾ ಆಯೋಗವು ಅಧಿಕಾರಿಗಳ ವರ್ಗಾವಣೆ ನೀತಿಯನ್ನು ಹೊರಡಿಸಿದೆ. ಸ್ವಂತ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಮೂರು ವರ್ಷಗಳಿಂದ ಒಂದೇ ಕಡೆ ಠಿಕಾಣಿ ಹೂಡಿರುವ ಅಧಿಕಾರಿಗಳನ್ನು ವರ್ಗಾಯಿಸುವಂತೆ ಸೂಚಿಸಿದೆ.

Advertisement

ಕರ್ನಾಟಕ ವಿಧಾನಸಭೆಯ ಅವಧಿ 2023ರ ಮೇ 24ರಂದು ಮುಕ್ತಾಯಗೊಳ್ಳಲಿದ್ದು, ಅದರೊಳಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣ ಆಯೋಗ ನೀತಿಯನ್ನು ಹೊರಡಿಸಿದ್ದು, ಈ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆಯಲಾಗಿದೆ.

ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದ ನೀತಿಯನ್ನು ಅನುಷ್ಠಾನಗೊಳಿಸಿರುವ ಬಗ್ಗೆ 2023ರ ಜ. 31ರೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿರುವ ಆಯೋಗ, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ತಾಕೀತು ಮಾಡಿದೆ. ಒಂದು ವೇಳೆ ಯಾವುದೇ ಅಧಿಕಾರಿಗಳು ತವರು ಜಿಲ್ಲೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವುದು ಆಯೋಗದ ಗಮನಕ್ಕೆ ಬಂದರೆ ಅಂಥವರ ಮೇಲೆ ತತ್‌ಕ್ಷಣವೇ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

ನೇರವಾಗಿ ಚುನಾವಣ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ವಲಯ, ಜಿಲ್ಲಾ ಮತ್ತು ಸ್ಥಳೀಯ ಹಂತದ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳಿಗೆ ಈ ವರ್ಗಾವಣೆ ನೀತಿ ಅನ್ವಯವಾಗಲಿದೆ.

ಚುನಾವಣ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಥವಾ ಮತದಾರರ ಪಟ್ಟಿಯ ಪರಿಷ್ಕರಣೆ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳ ವರ್ಗಾವಣೆಗೆ ಆದೇಶಗಳನ್ನು ಹೊರಡಿಸಿದ್ದರೆ, ಅಂತಹ ಆದೇಶಗಳನ್ನು ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಮುಖ್ಯ ಚುನಾವಣಾಧಿಕಾರಿಯ ಸಮ್ಮತಿ ಬಳಿಕ ಕಾರ್ಯಗತಗೊಳಿಸಬೇಕು.

Advertisement

ವರ್ಗಾವಣೆಗೊಳಿಸುವ ವಿಶೇಷ ಸನ್ನಿವೇಶ ಎದುರಾದಾಗ ಕೇಂದ್ರ ಚುನಾವಣ ಆಯೋಗದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ವರ್ಗಾವಣೆ ನೀತಿಯಲ್ಲಿ ಏನಿದೆ?
– ಸ್ವಂತ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, 3 ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿದ್ದರೆ, ಇಲ್ಲವೇ ನಾಲ್ಕು ವರ್ಷ ಪೂರೈಸಿದ್ದರೆ ಅಂತಹ ಅಧಿಕಾರಿಗಳನ್ನು 2023ರ ಮೇ 31ಕ್ಕೆ ಕೊನೆಗೊಳ್ಳುವಂತೆ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು.

-ಅಧಿಕಾರಿಗಳನ್ನು ಅವರ ಸ್ವಂತ ಜಿಲ್ಲೆಗೆ ನಿಯೋಜಿಸಬಾರದು. ಜಿಲ್ಲಾ ಹಂತದ ಅಧಿಕಾರಿಗಳಾದ ಜಿಲ್ಲಾ ಚುನಾವಣಾಧಿಕಾರಿ (ಡಿಇಒ) ಉಪ ಡಿಇಒ, ರಿಟರ್ನಿಂಗ್‌ ಆಫೀಸರ್‌ (ಆರ್‌ಒ) ಅಸಿಸ್ಟೆಂಟ್‌ ರಿಟರ್ನಿಂಗ್‌ ಆಫಿಸರ್‌ (ಎಆರ್‌ಒ), ಚುನಾವಣ ಕೆಲಸಕ್ಕೆ ನಿಯೋಜನೆಗೊಂಡ ನೋಡಲ್‌ ಅಧಿಕಾರಿಗಳು, ಇವರಲ್ಲದೇ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌, ಉಪ ವಿಭಾಗ ಮ್ಯಾಜಿಸ್ಟ್ರೇಟ್‌, ಉಪವಿಭಾಗಾಧಿಕಾರಿ, ತಹಶೀಲ್ದಾರ್‌, ಬಿಡಿಒ ಸೇರಿ ತತ್ಸಮಾನ ದರ್ಜೆಯ ಚುನಾವಣ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಈ ನೀತಿ ಅನ್ವಯವಾಗಲಿದೆ.

– ಪೊಲೀಸ್‌ ಇಲಾಖೆಯ ವಲಯ ಐಜಿ, ಡಿಐಜಿ, ರಾಜ್ಯ ಸಶಸ್ತ್ರ ಪೊಲೀಸ್‌ ಕಮಾಂಡೆಂಟ್‌, ಎಸ್‌ಎಸ್‌ಪಿ, ಎಸ್ಪಿ, ಎಎಸ್ಪಿ, ಡಿವೈಎಸ್ಪಿ, ಸಿಪಿಐ, ಪಿಎಸ್‌ಐ, ಎಸ್‌ಐ ಅಧಿಕಾರಿಗಳಿಗೂ ವರ್ಗಾವಣೆ ನೀತಿ ಅನ್ವಯವಾಗುತ್ತದೆ.

– ನೇರವಾಗಿ ಚುನಾವಣ ಕೆಲಸಕ್ಕೆ ಸಂಬಂಧ ಪಡದ ಡಾಕ್ಟರ್‌, ಎಂಜಿನಿಯರ್‌, ಪ್ರಿನ್ಸಿಪಾಲ್‌, ಶಿಕ್ಷಕರಿಗೆ ಈ ನೀತಿ ಅನ್ವಯವಾಗುವುದಿಲ್ಲ. ಆದರೆ ಈ ಅಧಿಕಾರಿಗಳ ವಿರುದ್ಧ ದೂರು, ಆರೋಪಗಳು ಕೇಳಿ ಬಂದಲ್ಲಿ ತನಿಖೆ ನಡೆಸಿ ವರ್ಗಾವಣೆಗೊಳಿಸುವುದರ ಜತೆಗೆ ಇಲಾಖಾ ವಿಚಾರಣೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಶಿಫಾರಸು ಮಾಡಬೇಕು.

– ಯಾವುದೇ ಅಧಿಕಾರಿಗಳ ಮೇಲೆ ಕ್ರಿಮಿನಲ್‌ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದರೆ ಅಂಥವರನ್ನು ಚುನಾವಣ ಕರ್ತವ್ಯಕ್ಕೆ ನಿಯೋಜಿಸದಂತೆ ತಾಕೀತು ಮಾಡಲಾಗಿದೆ. ನಿವೃತ್ತಿಗೆ 6 ತಿಂಗಳು ಬಾಕಿ ಇದ್ದರೆ ಅಂತಹವರನ್ನು ಮೂರು ವರ್ಷದ ಸೇವೆಯ ಷರತ್ತಿನಿಂದ ವಿನಾಯಿತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next