Advertisement

ಆಸ್ತಿಗಾಗಿ ಜಮೀನಿನಲ್ಲಿಯೇ ಹಲ್ಲೆ; ಇಬ್ಬರು ಉದ್ಯಮಿಗಳ ಹತ್ಯೆ

12:44 AM Jul 17, 2019 | Team Udayavani |

ಬೆಂಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜನರ ಗುಂಪು ದೊಣ್ಣೆಗಳಿಂದ ಇಬ್ಬರು ರಿಯಲ್‌ ಎಸ್ಟೇಟ್‌ ಉದ್ಯಮಿಗಳನ್ನು ಹೊಡೆದು ಕೊಲೆಮಾಡಿರುವ ಘಟನೆ ದೇವರಚಿಕ್ಕನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

Advertisement

ಆನಂದ್‌ ರೆಡ್ಡಿ (66), ಪ್ರಕಾಶ್‌ ರೆಡ್ಡಿ (46) ಮೃತರು. ಕೊಲೆ ಆರೋಪಿಗಳಾದ ರಾಮಯ್ಯ ರೆಡ್ಡಿ, ಅವರ ಮಕ್ಕಳಾದ ಸತೀಶ್‌ ರೆಡ್ಡಿ, ನಾಗರಾಜ್‌ ರೆಡ್ಡಿ, ಶ್ರೀನಿವಾಸ್‌ ರೆಡ್ಡಿ, ರೇಣುಕಾ ಅವರನ್ನು ಬಂಧಿಸಿರುವ ಬೇಗೂರು ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇಂದಿರಾನಗರದ ಆನಂದ್‌ ರೆಡ್ಡಿ ಹಾಗೂ ಬಾಣಸವಾಡಿಯ ಪ್ರಕಾಶ್‌ ರೆಡ್ಡಿ ಪರಸ್ಪರ ಸ್ನೇಹಿತರು. ಕಳೆದ 25 ವರ್ಷಗಳ ಹಿಂದೆ ದೇವರ ಚಿಕ್ಕನಹಳ್ಳಿಯ ರಾಮಯ್ಯ ರೆಡ್ಡಿ ಅವರ ಕುಟುಂಬದಿಂದ ಎರಡು ಎಕರೆ ಜಮೀನು ಖರೀದಿ ಮಾಡಿದ್ದರು.

ಜಮೀನು ಬಿಟ್ಟುಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರ್ಷಗಳಿಂದ ರಾಮರೆಡ್ಡಿ ಹಾಗೂ ಆನಂದ್‌ ರೆಡ್ಡಿ, ಪ್ರಕಾಶ್‌ ರೆಡ್ಡಿ ಪರಸ್ಪರ ಕೋರ್ಟ್‌ನಲ್ಲಿ ಸಿವಿಲ್‌ ಮೊಕದ್ದಮೆಗಳನ್ನು ದಾಖಲಿಸಿದ್ದರು. ಆದರೆ, ಭೂ ವ್ಯಾಜ್ಯ ಬಗೆಹರಿದಿರಲಿಲ್ಲ. ಇತ್ತ ರಾಮಯ್ಯ ರೆಡ್ಡಿ ಕುಟುಂಬ ಕೂಡ ಜಮೀನು ಬಿಟ್ಟುಕೊಟ್ಟಿರಲಿಲ್ಲ.

ಹೊಡೆದು ಕೊಂದರು: ಇಬ್ಬರ ನಡುವಿನ ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಕೋರ್ಟ್‌, ಎರಡು ಎಕರೆ ಜಮೀನನ್ನು ಆನಂದ್‌ ರೆಡ್ಡಿ ಹಾಗೂ ಪ್ರಕಾಶ್‌ ರೆಡ್ಡಿ ಅವರಿಗೆ ಬಿಟ್ಟುಕೊಡಬೇಕು ಎಂದು ರಾಮಯ್ಯ ರೆಡ್ಡಿ ಕುಟುಂಬಕ್ಕೆ ಆದೇಶಿಸಿತ್ತು.

Advertisement

ಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ಆನಂದ್‌ ರೆಡ್ಡಿ ಹಾಗೂ ಪ್ರಕಾಶ್‌ ರೆಡ್ಡಿ ಎರಡು ಎಕರೆ ಜಮೀನಿನ ಬಳಿ ತೆರಳಿದ್ದರು. ಈ ವೇಳೆ ಅಲ್ಲಿಯೇ ಇದ್ದ ರಾಮಯ್ಯ ರೆಡ್ಡಿ ಹಾಗೂ ಕುಟುಂಬ ಜಗಳ ನಡೆಸಿದ್ದು ಕಲ್ಲುಗಳು, ದೊಣ್ಣೆಗಳನ್ನು ತೆಗೆದುಕೊಂಡು ಇಬ್ಬರನ್ನು ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಎರಡೂ ಮೃತದೇಹಗಳನ್ನು ರಸ್ತೆಗೆ ಎಸೆದಿದ್ದಾರೆ.

ರಸ್ತೆಯಲ್ಲಿ ಶವ: ರಸ್ತೆಯಲ್ಲಿ ರಕ್ತಸಿಕ್ತ ಮೃತದೇಹಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಬೇಗೂರು ಠಾಣೆ ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಇಬ್ಬರೂ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆನಂದ್‌ ರೆಡ್ಡಿ ಹಾಗೂ ಪ್ರಕಾಶ್‌ ರೆಡ್ಡಿ ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸುತ್ತಿದ್ದು ಹಲವು ವರ್ಷಗಳಿಂದ ನಗರದಲ್ಲಿಯೇ ನೆಲೆಸಿದ್ದಾರೆ. ಮರಣೋತ್ತರ ಪರೀಕ್ಷೆ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿ ಹೇಳಿದರು.

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿಗಳಾದ ರಾಮಯ್ಯ ರೆಡ್ಡಿ ಹಾಗೂ ಇತರೆ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿಸಲಾಗಿದೆ. ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ಇಬ್ಬರ ಮೇಲೂ ದಾಳಿ ನಡೆಸಿ ಕೊಲೆಗೈದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
-ಇಶಾ ಪಂಥ್‌, ಡಿಸಿಪಿ, ಆಗ್ನೇಯ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next