ಬೆಂಗಳೂರು: ಐಪಿಎಸ್ ಅಧಿಕಾರಿಯೊಬ್ಬರ ಪುತ್ರನ ಮೇಲೆ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂಪಿಗೆಹಳ್ಳಿ ನಿವಾಸಿಗಳಾದ ಧನುಷ್ (33) ಮತ್ತು ತುಷಾರ್ (28) ಬಂಧಿತರು.
ಐಪಿಎಸ್ ಅಧಿಕಾರಿ(ದಾವಣಗೆರೆ ವಲಯ ಐಜಿಪಿ) ರಮೇಶ್ ಬಾನೋತ್ ಪುತ್ರ ಶ್ರೀಸಾಯಿ ಪ್ರೀತಂ ಬಾನೋತ್, 16ರಂದು ಎಂ.ಜಿ.ರಸ್ತೆಯಿಂದ ಹೆಬ್ಟಾಳ ಮಾರ್ಗವಾಗಿ ತಮ್ಮ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಬ್ಯಾಟರಾಯನಪುರ ಸಿಗ್ನಲ್ ಬಳಿ ಕಾರಿನ ಚಾಲಕನೊಬ್ಬ ಎಕ್ಸಲೇಟರ್ ರೈಸ್ ಮಾಡುತ್ತಾ ಜೋರಾದ ಶಬ್ಧವುಂಟು ಮಾಡುತ್ತಿದ್ದ. ಅದನ್ನು ಕಂಡ ಶ್ರೀಸಾಯಿ ಪ್ರೀತಂ ಬಾನೋತ್, ವಿನಾಕಾರಣ ಏಕೆ ಎಕ್ಸಲೇಟರ್ ಒತ್ತುತ್ತಿದ್ದಿರಾ? ಎಂದು ಸನ್ನೆ ಮಾಡಿ ಪ್ರಶ್ನಿಸಿದ್ದಾರೆ. ಬಳಿಕ ಸಿಗ್ನಲ್ ಬಿಟ್ಟಿದರಿಂದ ಮುಂದೆ ಸಾಗಿದ್ದರು. ಆದರೆ ಪ್ರೀತಂ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು ಸ್ವಲ್ಪ ದೂರದಲ್ಲೇ ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಅವಾಚ್ಯ ನಿಂದಿಸಿ, ಸಾಯಿ ಪ್ರೀತಂ ಮುಖ ಹಾಗೂ ತೊಳಿಗೆ ಹಲ್ಲೆ ಮಾಡಿದ್ದಾರೆ. ಬಳಿಕ ಕಾರಿನ ಗಾಜು ಒಡೆದು ಪರಾರಿಯಾಗಿದ್ದರು. ಘಟನೆ ಸಂಬಂಧ ಸಾಯಿ ಪ್ರೀತಂ ಬಾನೋತ್ ನೀಡಿರುವ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋ ಪಿಗಳನ್ನು ಬಂಧಿಸಲಾಗಿದೆ.