ಬೆಂಗಳೂರು: ಹಾಡಹಗಲೇ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಚಲಿಸುತ್ತಿದ್ದ ಬಸ್‌ನಲ್ಲೇ ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರ ಗಳಿಂದ ವ್ಯಕ್ತಿ ಯೊಬ್ಬನನ್ನು ಮೂವರು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ಘಟನೆ ಕೋನಪ್ಪನ ಅಗ್ರಹಾರದಲ್ಲಿ ಬುಧವಾರ ನಡೆದಿದೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪೆದಂಟೂರಿನ ಸುರೇಶ್ ಮೃತ ವ್ಯಕ್ತಿ. 60 ವರ್ಷದ ವೃದ್ಧ ಹಾಗೂ 30ರ ಆಸುಪಾಸಿನ ಇಬ್ಬರು ಯುವಕರು ಮಾರಕಾಸ್ತ್ರಗಳಿಂದ ಪ್ರಯಾಣಿಕರ ಎದುರೇ ಮನಸೋ ಇಚ್ಚೆ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ
ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಅಕ್ರಮ ಸಂಬಂಧ ಹಾಗೂ ಹಣಕಾಸಿನ ವಿಚಾರವಾಗಿಯೇ ನಡೆದಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳದಲ್ಲಿದ್ದ ಕೆಲ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಸಂಗ್ರಹಿಸಲಾಗುತ್ತಿದೆ.
ಘಟನೆ ವಿವರ: ಬೆಳಗ್ಗೆ 9 ಗಂಟೆ ಸುಮಾರಿಗೆ ಆನೇಕಲ್-ಕೆ.ಆರ್.ಮಾರುಕಟ್ಟೆ ಮಾರ್ಗದ ಬಸ್ ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಬರುತ್ತಿತ್ತು. ಇದೇ ವೇಳೆ ಎಲೆಕ್ಟ್ರಾನಿಕ್ ಸಿಟಿ ಬಸ್ ನಿಲ್ದಾಣದಲ್ಲಿ ಸುರೇಶ್ ಬಸ್ ಹತ್ತಿದ್ದಾನೆ. ಈತನ ಹಿಂದೆಯೇ 60 ವರ್ಷದ ವೃದ್ಧ ಹಾಗೂ ಇತರೆ ಇಬ್ಬರು ಯುವಕರು ಬಸ್ ಏರಿದ್ದಾರೆ.
ಕೋನಪ್ಪನ ಬಸ್ ನಿಲ್ದಾಣ ಬರುತ್ತಿದ್ದಂತೆ ಆರೋಪಿಗಳು ನಿದ್ರೆಗೆ ಜಾರಿದ್ದ ಸುರೇಶ್‌ಗೆ ಹಿಂದಿನಿಂದ ಚಾಕುವಿನಿಂದ ಇರಿದಿದ್ದಾರೆ. ಇದನ್ನು ಗಮನಿಸಿ ಪ್ರಯಾಣಿಕರು ಇದೇ ವೇಳೆ ಕೆಲವರು ಜೋರಾಗಿ ಕೂಗಿಕೊಂಡಿದ್ದು, ಬಸ್‌ನ ಬಾಗಿಲು
ತೆರೆಯುತ್ತಿದ್ದಂತೆ ಎಲ್ಲರೂ ಇಳಿದ್ದಾರೆ. ಅಷ್ಟರಲ್ಲಿ ಸುರೇಶ್‌ನನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗಳು ಪ್ರಯಾಣಿಕರ ಜತೆ ಇಳಿದು ಪರಾರಿಯಾಗಿದ್ದಾರೆ.
ಅನೈತಿಕ ಸಂಬಂಧ ಹಾಗೂ ಹಣದ ವ್ಯವಹಾರ ಹಿನ್ನೆಲೆ: ಸುರೇಶ್‌ನನ್ನು ಆತನ ಸಂಬಂಧಿಕರೇ ಹತ್ಯೆಗೈದಿರುವ ಸಾಧ್ಯತೆಯಿದೆ. ಅನೈತಿಕ ಸಂಬಂಧ ಹಾಗೂ ಹಣಕಾಸಿನ ವಿಚಾರವಾಗಿ ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.