ದಿಸ್ಪುರ್: ”ಜನಸಂಖ್ಯೆ ಬೆಳವಣಿಗೆಯ ಮುಸ್ಲಿಂ ಸೂತ್ರವನ್ನು ಅನುಸರಿಸಲು ಹಿಂದೂಗಳು ತಮ್ಮ ಹೆಣ್ಣುಮಕ್ಕಳಿಗೆ 18-20 ವರ್ಷ ವಯಸ್ಸಿನಲ್ಲೇ ವಿವಾಹ ಮಾಡಬೇಕು” ಎಂದು ಅಸ್ಸಾಂ ಸಂಸದ, ಎಐಯುಡಿಎಫ್ ಪಕ್ಷದ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಶುಕ್ರವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅತ್ಯಂತ ಆಘಾತಕಾರಿ ಹೇಳಿಕೆಗಳಲ್ಲಿ”ಹಿಂದೂಗಳಿಗೆ ಸಮಸ್ಯೆ ಇದೆ. ಹಿಂದೂಗಳು ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವುದಿಲ್ಲ, ಅವರು 2-3 ವ್ಯವಹಾರಗಳನ್ನು ಇಟ್ಟುಕೊಳ್ಳುತ್ತಾರೆ, ಆದರೆ ಅವರು ಮದುವೆಯಾಗುವುದಿಲ್ಲ.ಅವರ ಜನಸಂಖ್ಯೆಯು ಮುಸ್ಲಿಮರ ವೇಗದಲ್ಲಿ ಬೆಳೆಯುತ್ತಿಲ್ಲ” ಎಂದು ಅಜ್ಮಲ್ ಹೇಳಿದ್ದಾರೆ.
”ಅವರು 40 ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ, ಅದೂ ಒತ್ತಡದಲ್ಲಿ, ಅವರು ಹೇಗೆ ಸಂತಾನೋತ್ಪತ್ತಿ ಮಾಡುತ್ತಾರೆ? ಹೇಳಿ ” ಎಂದು ಪ್ರಶ್ನಿಸಿದ್ದಾರೆ.
“ನಮ್ಮ ಸಮುದಾಯದಲ್ಲಿ, ಹುಡುಗಿಯರು 18 ವರ್ಷ ತುಂಬಿದ ತಕ್ಷಣ ಮದುವೆಯಾಗುತ್ತಾರೆ. ಭಾರತ ಸರಕಾರ ಇದಕ್ಕೆ ಅನುಮತಿ ನೀಡಿದೆ. ಹುಡುಗರು 22 ವರ್ಷವಾದ ತಕ್ಷಣ ಮದುವೆಯಾಗುತ್ತಾರೆ. ಆದ್ದರಿಂದ ನಮ್ಮ ಜನಸಂಖ್ಯೆಯು ಹೆಚ್ಚುತ್ತಿದೆ” ಎಂದು ಅಜ್ಮಲ್ ವಿಡಿಯೋದಲ್ಲಿ ಹೇಳಿದ್ದಾರೆ.
ಅಜ್ಮಲ್ ಅವರ ವಿವಾದಾತ್ಮಕ ಹೇಳಿಕೆಗಳಿಗೆ ರಾಜ್ಯದ ಆಡಳಿತಾರೂಢ ಬಿಜೆಪಿ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದು, ಅಸ್ಸಾಂನ ಬಿಜೆಪಿ ಶಾಸಕಿ ಡಿ ಕಲಿತಾ ಅವರು ಅಜ್ಮಲ್ ಅವರ ಹೇಳಿಕೆಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.”ಇಂತಹ ಮಾತುಗಳನ್ನು ಹೇಳುವ ಮೂಲಕ ನೀವು ನಿಮ್ಮ ತಾಯಿ ಮತ್ತು ಸಹೋದರಿಯ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದೀರಿ, ನಾನು ಇದನ್ನು ಖಂಡಿಸುತ್ತೇನೆ ಮತ್ತು ಹಾಗೆ ಮಾಡಬೇಡಿ ಇಲ್ಲದಿದ್ದರೆ ಬಾಂಗ್ಲಾದೇಶಕ್ಕೆ ಹೋಗಿ ಮಾಡಿ ಎಂದು ಎಚ್ಚರಿಸುತ್ತೇನೆ. ಹಿಂದೂಗಳು ಇದನ್ನು ಒಪ್ಪುವುದಿಲ್ಲ. ರಾಜಕೀಯಕ್ಕಾಗಿ ಮಾತನಾಡಬೇಡಿ. ತಾಯಿ ಮತ್ತು ಸಹೋದರಿಯರ ಘನತೆಯನ್ನು ತುಳಿಯಬೇಡಿ” ಎಂದು ಕಿಡಿ ಕಾರಿದ್ದಾರೆ.
“ನೀವು ಮುಸ್ಲಿಂ ಮತ್ತು ನಾವು ಹಿಂದೂಗಳು. ನಾವು ನಿಮ್ಮಿಂದ ಕಲಿಯಬೇಕೇ? ಇದು ಭಗವಾನ್ ರಾಮ ಮತ್ತು ಸೀತಾ ದೇವಿಯ ದೇಶ. ಇಲ್ಲಿ ಬಾಂಗ್ಲಾದೇಶೀಯರಿಗೆ ಸ್ಥಾನವಿಲ್ಲ. ನಾವು ಮುಸ್ಲಿಮರಿಂದ ಕಲಿಯಬೇಕಾಗಿಲ್ಲ,” ಎಂದು ಬಿಜೆಪಿ ಶಾಸಕಿ ಡಿ ಕಲಿತಾ ಕಿಡಿ ಕಾರಿದ್ದಾರೆ.