ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ಹೊಸ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಎನ್‌ಆರ್‌ಸಿ (NRC ) ಅರ್ಜಿ ರಶೀದಿ ಸಂಖ್ಯೆಯನ್ನು ನಮೂದಿಸಬೇಕು ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಶನಿವಾರ (ಸೆ.07) ಹೇಳಿದ್ದಾರೆ.
ಈ ಉದ್ದೇಶಕ್ಕಾಗಿ ವಿವರವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಸಿದ್ಧಪಡಿಸಲಾಗುವುದು ಮತ್ತು ಇದು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ನಾಗರಿಕರ ನೋಂದಣಿಯ (NRC) ಅರ್ಜಿ ರಶೀದಿ ಸಂಖ್ಯೆಯನ್ನು ಸಲ್ಲಿಸುವುದರಿಂದ ಅಕ್ರಮ ವಿದೇಶಿಗರ ಒಳಹರಿವು ನಿಲ್ಲುತ್ತದೆ ಮತ್ತು ಆಧಾರ್ ಕಾರ್ಡ್ ಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರವು ಅತ್ಯಂತ ಕಟ್ಟುನಿಟ್ಟಾಗಿದೆ ಎಂದು ಅವರು ಹೇಳಿದರು.
“ನಮ್ಮ ಜನಸಂಖ್ಯೆಗಿಂತ ಹೆಚ್ಚು ಆಧಾರ್ ಕಾರ್ಡ್ ಅರ್ಜಿಗಳಿವೆ. ಕೆಲವು ಅನುಮಾನಸ್ಪದ ನಾಗರಿಕರಿದ್ದಾರೆ ಎಂದು ಇದು ಸೂಚಿಸುತ್ತದೆ. ಹೀಗಾಗಿ ಹೊಸ ಅರ್ಜಿ ಸಲ್ಲಿಸುವವರು ತಮ್ಮ ಎನ್‌ಆರ್‌ಸಿ ಅರ್ಜಿ ರಶೀದಿ ಸಂಖ್ಯೆಯನ್ನು ನಮೂದಿಸಬೇಕು” ಎಂದು ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ಅಸ್ಸಾಂನಲ್ಲಿ ಆಧಾರ್ ಪಡೆಯುವುದು ಸುಲಭವಲ್ಲ ಮತ್ತು ಇತರ ರಾಜ್ಯಗಳು ಆಧಾರ್ ಕಾರ್ಡ್‌ಗಳನ್ನು ನೀಡುವಲ್ಲಿ ಕಟ್ಟುನಿಟ್ಟಾಗಿ ಇರುತ್ತವೆ ಎಂದು ಆಶಿಸುತ್ತೇವೆ ಎಂದು ಅವರು ಹೇಳಿದರು. ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಬಯೋಮೆಟ್ರಿಕ್ಸ್ ಲಾಕ್ ಆಗಿರುವ 9.55 ಲಕ್ಷ ಜನರಿಗೆ ಎಆರ್‌ಎನ್ ಸಲ್ಲಿಕೆ ಅನ್ವಯಿಸುವುದಿಲ್ಲ. ಅವರು ತಮ್ಮ ಕಾರ್ಡ್‌ಗಳನ್ನು ಪಡೆಯುತ್ತಾರೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.