ಡಿಸ್ಪುರ್: ಅಸ್ಸಾಂ ರಾಜ್ಯ ಇಂದು ಭೋಗಾಲಿ ಬಿಹು ಹಬ್ಬದ ಸಂತಸದಲ್ಲಿದೆ. ಕರ್ನಾಟಕದ ಸಂಕ್ರಾಂತಿ ಹಬ್ಬದಂತೆ ಅಸ್ಸಾಮಿಗರು ಸಮೃದ್ಧಿಯ ಹಬ್ಬವಾಗಿ ಭೋಗಾಲಿ ಬಿಹುವನ್ನು ಆಚರಿಸುತ್ತಾರೆ. ಶನಿವಾರ ಸಂಜೆಯಿಂದ ಮೂರು ದಿನಗಳ ಕಾಲ ನಡೆಯುವ ಹಬ್ಬಕ್ಕೆ ಜನ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸಮುದಾಯಗಳು ತಾವು ಕೊಯ್ದ ಸುಗ್ಗಿಯನ್ನು ಆಚರಿಸಲು ಒಟ್ಟಿಗೆ ಅಡುಗೆ ಮಾಡಿ ತಿನ್ನುವುದರಿಂದ (ಉರುಕ) ಇದು ಪ್ರಾರಂಭವಾಗುತ್ತದೆ.
ಹಬ್ಬದ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನಾಗರಿಕರು ಮತ್ತು ಅಧಿಕಾರಿಗಳಿಂದ ಹಬ್ಬದ ಉಡುಗೊರೆಗಳನ್ನು ಸ್ವೀಕರಿಸಿದರು. ಸಿಎಂ ಶರ್ಮಾ ಅವರಿಗೆ 14 ಕೆಜಿ ತೂಕದ ಮೀನು ಉಡುಗೊರೆಯಾಗಿ ಬಂದಿದೆ. ಈ ಬಗ್ಗೆ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
“ಉರುಕದ ಸಂದರ್ಭದಲ್ಲಿ ಜಪಿ ಮತ್ತು ಝೋರೈ ಎಂಬ ಎರಡು ರಾಹು ಮೀನುಗಳನ್ನು ನನಗೆ ಉಡುಗೊರೆಯಾಗಿ ನೀಡಿದ ಬಿಜೆಪಿ ಅಸ್ಸಾಂ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತಬಿಬುರ್ ರೆಹಮಾನ್ ಮತ್ತು ಮುಸ್ತಫಾ ಅಲಿ ಅವರಿಗೆ ಧನ್ಯವಾದಗಳು. ಫಟಾಸಿಲ್ ಅಂಬಾರಿ ನಿವಾಸಿ ಪ್ರೀತಮ್ ಶರ್ಮಾ ಅವರಿಂದ 12 ಕೆಜಿ ಸಿಟೋಲ್ ಮೀನನ್ನು ಸ್ವೀಕರಿಸಲು ಸಂತೋಷವಾಗಿದೆ. ಮುಕುಲ್ ಅಲಿಯಿಂದ 4.5 ಕೆಜಿ ಸಿಟೋಲ್ ಮೀನು ಮತ್ತು ಸಲ್ಮಾನ್ ಹಿಂದ್ ಮತ್ತು ಕುಟುಂಬ ಮತ್ತು ಅಬು ಹನೀಫ್ ಚೌಧರಿಯಿಂದ 14 ಕೆಜಿ ಬೋರಾಲಿ ಮೀನು ಸ್ವೀಕರಿಸಿದ್ದೇನೆ. ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಭೋಗಾಲಿ ಬಿಹು ಹಬ್ಬದ ಶುಭಾಶಯ ಕೋರುತ್ತೇನೆ” ಎಂದು ಶರ್ಮಾ ಹೇಳಿದ್ದಾರೆ.
ಅಸ್ಸಾಂ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುರುಜ್ಯೋತಿ ದಾಸ್ ಅವರಿಂದ ಸಿಎಂ ಶರ್ಮಾ ಅವರು 13.5 ಕೆಜಿ ಭೋಕುವಾ ಮೀನು, 10.5 ಕೆಜಿ ಸಿಟೋಲ್ ಮೀನು ಮತ್ತು ಚುಂಗಾ ಪಿತಾಸ್ ಪಡೆದರು. ಅವರು ಸ್ಥಳೀಯ ಮುಖಂಡರಿಂದ ಸಿಹಿತಿಂಡಿಗಳು, ಪೀಠಗಳು, ಕೆನೆ, ಮೊಸರು, ಬೆಲ್ಲ ಮತ್ತು ಸ್ಥಳೀಯವಾಗಿ ತಯಾರಿಸಿದ ಸಾಸಿವೆ ಎಣ್ಣೆ ಸೇರಿದಂತೆ ಹಬ್ಬದ ಉಡುಗೊರೆಗಳನ್ನು ಪಡೆದರು.