Advertisement

ಆಕಾಂಕ್ಷ ಕೈಯಲ್ಲಿ  ಮುತ್ತಿನ ಹಾರ

03:45 AM Apr 07, 2017 | Team Udayavani |

ಕನ್ನಡ ಚಿತ್ರರಂಗಕ್ಕೆ ಆಕಾಂಕ್ಷ ಎಂಬ ಹೆಸರಿನ ನಾಯಕಿಯರು ಆಗಾಗ ಬರುತ್ತಲೇ ಇರುತ್ತಾರೆ. ಈಗಾಗಲೇ ಒಂದಿಬ್ಬರು ಈ ಹೆಸರಿನ ನಾಯಕಿಯರು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ಆಕಾಂಕ್ಷ ಪೂಜಾರಿ. ಕನ್ನಡ ಚಿತ್ರರಂಗಕ್ಕೆ ಆಕಾಂಕ್ಷ ಎಂಬ ನವನಟಿಯ ಎಂಟ್ರಿಯಾಗಿದೆ. ಯಾವ ಆಕಾಂಕ್ಷ ಎಂದರೆ “ಮುತ್ತಿನ ಹಾರ’ ಸಿನಿಮಾವನ್ನು ತೋರಿಸಬೇಕು. “ಮುತ್ತಿನ ಹಾರ’ ಎಂಬ ಸಿನಿಮಾವೊಂದು ಆರಂಭವಾಗಿರುವ ವಿಷಯ ನಿಮಗೆ ಗೊತ್ತಿರಬಹುದು. ಆ ಚಿತ್ರದಲ್ಲಿ ಆಕಾಂಕ್ಷ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ.  

Advertisement

ಅಂದಹಾಗೆ, ಈ ಆಕಾಂಕ್ಷಗೆ “ಮುತ್ತಿನ ಹಾರ’ ಮೊದಲ ಸಿನಿಮಾ. ಆದರೆ, ಮಾಡೆಲಿಂಗ್‌ ಹೊಸದಲ್ಲ. ಮುಂಬೈನಲ್ಲಿ ಮಾಡೆಲಿಂಗ್‌ ಮಾಡುತ್ತಿದ್ದ ಆಕಾಂಕ್ಷ ಸಿನಿಮಾ ಮಾಡಬೇಕೆಂಬ ಆಕಾಂಕ್ಷೆಯಲ್ಲಿದ್ದರಂತೆ. ಆಗ ಸಿಕ್ಕಿದ್ದು “ಮುತ್ತಿನ ಹಾರ’. ಆಡಿಷನ್‌ನಲ್ಲಿ ಪಾಲ್ಗೊಂಡ ಆಕಾಂಕ್ಷ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಅಂದಹಾಗೆ, ಮುಂಬೈನಲ್ಲಿ ಮಾಡೆಲಿಂಗ್‌ ಮಾಡುತ್ತಿದ್ದ ಆಕಾಂಕ್ಷ ಖಂಡಿತಾ ಮುಂಬೈ ಬೆಡಗಿಯಲ್ಲ. ಕನ್ನಡ ಮೂಲದ ಮುಂಬೈ ಬೆಡಗಿ ಎನ್ನಬಹುದು. ಮೂಲತಃ ಮಂಗಳೂರಿನವರಾದ ಆಕಾಂಕ್ಷ ಹುಟ್ಟಿ ಬೆಳೆದಿದ್ದು, ಓದಿದ್ದು ಎಲ್ಲವೂ ಮುಂಬೈ. ಹಾಗಾಗಿ, ಕನ್ನಡಕ್ಕಿಂತ ಆಕೆಗೆ ಹಿಂದಿಯ ಮೇಲೆ ಹಿಡಿತ ಜಾಸ್ತಿ ಇದೆ. ಆದರೆ, ಕನ್ನಡ ಓದಲು ಬರುತ್ತದೆಯಂತೆ. 

ಆಕಾಂಕ್ಷಗೆ ಕನ್ನಡ ಚಿತ್ರರಂಗದಲ್ಲಿ ಬೆಳೆಯುವ ಆಸೆ ಇದೆ. “ಮುತ್ತಿನ ಹಾರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಸಮಾಜಕ್ಕೆ ಒಳ್ಳೆಯದನ್ನು ಬಯಸುವ ಇಂಜಿನಿಯರ್‌ ಆಗಿ ಕಾಣಿಸಿಕೊಂಡಿದ್ದೇನೆ. ನನಗೆ ಇದೇ ಮೊದಲ ಸಿನಿಮಾ. ನಾನು ಯಾವುದೇ ನಟನಾ ತರಬೇತಿ ಪಡೆದಿಲ್ಲ. ಈ ಸಿನಿಮಾ ಮೂಲಕ ದಿನದಿಂದ ದಿನಕ್ಕೆ ಕಲಿಯುತ್ತಿದ್ದೇನೆ’ ಎನ್ನುವುದು ಆಕಾಂಕ್ಷ ಮಾತು.

Advertisement

Udayavani is now on Telegram. Click here to join our channel and stay updated with the latest news.

Next