Advertisement

ಮಗ್ಗುಲು ಬದಲಾಯಿಸುತ್ತಿರುವ ಮೌಲ್ಯಗಳು

12:55 AM Oct 11, 2021 | Team Udayavani |

ಮೌಲ್ಯವೆಂದರೆ ಮೂಲತಃ “ಬೆಲೆ’ (Price) ಎಂಬರ್ಥದಲ್ಲಿ ದ್ದರೂ ಸಂಸ್ಕೃತದ “ಮೌಲ’ ಎಂಬ ಪದದ Ancient, old, long standing as a custom. ಪುರಾತನ, ಹಳೆಯದಾದ, ಬಹುಕಾಲದಿಂದ ಉಳಿದುಕೊಂಡು ಬಂದ ಸಂಪ್ರದಾಯ, ಪದ್ಧತಿ (V.S.. ಆಪ್ಟೆ ಕೋಶ ಪು.ಸಂ. 450) ಎಂಬರ್ಥದಲ್ಲಿ ಹೆಚ್ಚಾಗಿ ಬಳಕೆಯಾಗಿದೆ. ಅನಾದಿ ಕಾಲದಿಂದ ಉಳಿಸಿಕೊಂಡು-ಬೆಳೆಸಿಕೊಂಡು ಬಂದ ಕೆಲವಾರು ಅರ್ಥಪೂರ್ಣ ಆಚರಣೆಗಳನ್ನು, ವರ್ತನೆಗಳನ್ನು “ಮೌಲ್ಯ’ಎನ್ನಬಹುದೆನಿಸುತ್ತದೆ. “ಸಂಸ್ಕೃತಿ’ ಎಂಬುದು ಇದರ ವೈಭವೀಕೃತ ಅರ್ಥವೆಂದರೆ ತಪ್ಪಾಗಲಾರದು.

Advertisement

ಮರೆಯಾದ ಕೂಡುಕುಟುಂಬ ಪದ್ಧತಿ: ಸುಮಾರು ಅರ್ಧ ಶತಕದಷ್ಟು ಹಿಂದೆ ಹೋದರೆ ಹೆಚ್ಚಾಗಿ ಅವಿಭಕ್ತ ಕುಟುಂಬ (Joint family system) ಸಾಮಾನ್ಯವಾಗಿತ್ತು. ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಮಕ್ಕಳು-ಮೊಮ್ಮಕ್ಕಳು, ಸೊಸೆಯಂದಿರು ಎಲ್ಲ ಒಂದೇ ಮನೆಯಲ್ಲಿ ಬಾಳುತ್ತಿದ್ದ ಕಾಲವದು. ಅಣ್ಣ-ತಮ್ಮಂದಿರು ಪರಸ್ಪರ ಹೊಂದಿಕೊಂಡು ಜೀವನ ಸಾಗಿಸುತ್ತಿದ್ದರು. ಕುಟುಂಬಕ್ಕೆ ಒಂದು ಅಲಿಖೀತ “ಸಂವಿಧಾನ’ವಿತ್ತು. ಹಿರಿ-ಹಿರಿತನಗಳ ಸಂಬಂಧದಲ್ಲಿ ಕೆಲವಾರು ಮೌಲ್ಯಗಳು ಬೆಳೆದುಕೊಂಡು ಬಂದವು. ಮನೆಯಲ್ಲಿ ಪ್ರಾಯದಲ್ಲಿ ಹಿರಿಯಾತನಿಗೆ ಅಪಾರ ಗೌರವ. ಆತ ಕುಟುಂಬದ ಅನಭಿಷಿಕ್ತ ದೊರೆ. ಆತನದೇ ಕೊನೆಯ ಮಾತು. ಕುಟುಂಬದ ಪ್ರಧಾನ ನ್ಯಾಯಾಧೀಶನೂ ಅವನೇ. ಇತರ ಕಿರಿಯ ಸದಸ್ಯರು ಆತನೆದುದುರು ಗೌರವದಿಂದ ವರ್ತಿಸುವುದು, ಹಿತಮಿತವಾಗಿ ಮಾತನಾಡುವುದು, ಧ್ವನಿ ಯೇರಿಸದಿರುವುದು, ಅಪೇಕ್ಷೆ-ಆಜ್ಞೆಗಳನ್ನು ಪ್ರಶ್ನಿಸದೆ, ಈಡೇರಿಸುವುದು, ಅನುಸರಿಸುವುದು, ಮಹಿಳಾ ಸದಸ್ಯರನ್ನು ದ್ವಿತೀಯ ದರ್ಜೆಯ ನಾಗರಿಕರಂತೇ ಕಾಣುತ್ತಿದ್ದರೆನ್ನಿಸಿದರೂ ವಾಸ್ತವತೆ ಸಂಪೂರ್ಣವಾಗಿ ಹಾಗಿರಲಿಲ್ಲ. ಯಜಮಾನ, ಯಜಮಾನಿಯ ರಹಸ್ಯ ಸಮ್ಮತಿ, ಅನುಮತಿಯೊಂದಿಗೆ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದ.

ಕೌಟುಂಬಿಕ ಮೌಲ್ಯಗಳು: ಬೆಳಗ್ಗೆ ಬೇಗನೆ ಏಳುವುದು, ಆಸ್ತಿಕನಾಗಿ ವರ್ತಿಸುವುದು (ಪೂಜೆ, ಭಜನೆ ಇತ್ಯಾದಿಗಳಲ್ಲಿ ಆಸಕ್ತಿ ತೋರುವುದು). ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡಿರುವುದು. ಸುಳ್ಳು ಹೇಳದಿರುವುದು, ಸಂಧ್ಯಾಕಾಲ ದಲ್ಲಿ ಮಕ್ಕಳೆಲ್ಲ ಪಡಸಾಲೆಯಲ್ಲಿ ಸಾಲಾಗಿ ಕುಳಿತು ತಿಥಿ, ವಾರ, ನಕ್ಷತ್ರ, ಮಗ್ಗಿ ಇತ್ಯಾದಿ ಬಾಯಿಪಾಠ ಒಪ್ಪಿಸುವುದು, ಏನಿದ್ದರೂ ಹಂಚಿ ತಿನ್ನುವುದು, ಅತಿಥಿಗಳನ್ನು ಗೌರವಿಸುವುದು ಎಲ್ಲವೂ ಕುಟುಂಬದ ಹಿರಿ ಸದಸ್ಯನ “ಮೂಗಿನಡಿ’ಯಲ್ಲಿ ಆತನ ಪರಿವೀಕ್ಷಣೆಯೊಂದಿಗೆ ನಡೆಯುತ್ತಿದ್ದವು. ಕುಟುಂಬಕ್ಕೆ ಆತನದೇ ಭದ್ರತೆ (Security). ಕುಟುಂಬದ ಯಾವೊಬ್ಬ ಸದಸ್ಯನಿಗೆ ತೊಂದರೆಯುಂಟಾದರೂ ಇಡೀ ಕುಟುಂಬವೇ ಆತನ ಪರವಾಗಿ ನಿಂತು ಸಮಸ್ಯೆಯನ್ನು ನಿವಾರಿಸುತ್ತಿತ್ತು. ಎಲ್ಲವೂ ಶಾಲಾಕಾಲ ಪ್ರಜ್ಞೆಯೊಂದಿಗೆ ವ್ಯವಸ್ಥಿತವಾಗಿ ನೆರವೇರುತ್ತಿತ್ತು. ಎಲ್ಲವೂ ಪರಸ್ಪರ ಗೌರವ, ಪ್ರೀತಿ, ಒಗ್ಗಟ್ಟಿನೊಂದಿಗೆ ಅನೂಚಾನವಾಗಿ ನಡೆದುಕೊಂಡು ಬರುತ್ತಿತ್ತು. ಕೌಟುಂಬಿಕ ಮೌಲ್ಯಗಳು ಎಲ್ಲರನ್ನು ಏಕಸೂತ್ರದಲ್ಲಿ ಬಂಧಿಸಿತ್ತು. ಹಬ್ಬ-ಹರಿದಿನಗಳಲ್ಲಿ, ವಿಶೇಷ ಸಮಾರಂಭಗಳಲ್ಲಿ ಇದು ವಿಶೇಷವಾಗಿ ಪ್ರಕಟಗೊಳ್ಳುತ್ತಿತ್ತು.

ಮಗ್ಗುಲು ಬದಲಾಯಿತು: ಕಾಲ ಬದಲಾಗಿ ದೊಡ್ಡ ಕುಟುಂಬಗಳು ಮರೆಯಾಗಿ ಸಣ್ಣದಾದವು (nucleus family). ಸಮಕಾಲೀನ ಜೀವನಾವಶ್ಯಕತೆಗಳಿಗಾಗಿ ವಿದ್ಯಾವಂತ ಮಕ್ಕಳು ಅನಿವಾರ್ಯಕ್ಕಾಗಿ ಉದ್ಯೋಗ ನಿಮಿತ್ತ ಮನೆ ತೊರೆದು ನಗರ ಸೇರಬೇಕಾಯಿತು. ಮಗನೀಗ ಆದಾಯ ತರುವ ಅಘೋಷಿತ ಯಜಮಾನನಾದ. ಜತೆಯಲ್ಲಿ ಸೊಸೆಯೂ ನೌಕರಿಣಿ. ಊರಿನ ದೊಡ್ಡ ಹಳೆಮನೆಯಲ್ಲಿ ಅಜ್ಜ-ಅಜ್ಜಿ ಮಾತ್ರ. ಮನಸ್ಸಿನಲ್ಲಿ ಮೊಮ್ಮಕ್ಕಳನ್ನಾಡಿಸುತ್ತಾ ನೀರವತೆಯೊಂದಿಗೆ ಸರಸಸಲ್ಲಾಪ (?) ಮಕ್ಕಳ-ಮೊಮ್ಮಕ್ಕಳ ಪ್ರೀತಿಗಾಗಿ ಹಾತೊರೆಯುವ ಹತಾಶೆಯ ಬಾಳು. ಮಕ್ಕಳ ಒಂದು ಕರೆ, ವೀಡಿಯೋ ಕರೆ ಬಂದರೆ ಆ ದಿನವಿಡೀ ಹುರುಪು. ಒಮ್ಮೊಮ್ಮೆ “ಉದ್ದೇಶವಿಲ್ಲದ ಬದುಕೆಂಬ’ ಅನುಕ್ತ ನೋವು. ಐ.ಖ.ಯಂಥ ಉತ್ತಮ ಪಗಾರ ತರುವ ಮಕ್ಕಳಿಗೆ ಊರಿನ ಕಾಳು-ಬೇಳೆ-ಹಣ್ಣುಗಳಲ್ಲಿ ಅಂಥ ಆಸಕ್ತಿ ಏನೂ ಉಳಿದಿಲ್ಲ. ಗೂಡಿನಲ್ಲಿ ಮುದಿಹಕ್ಕಿಗಳನ್ನು ಬಿಟ್ಟು ಗರಿಬಿಚ್ಚಿ ಗಗನದಲ್ಲಿ ಹಾರಿರುವ ಹಕ್ಕಿಗಳಿಗೇಕೆ ಗೂಡಿನ ಪಾಡು! ವಿರಳ ಸಂದರ್ಭಗಳಲ್ಲಿ ಮಕ್ಕಳು ಊರಿಗೆ ಬಂದಾಗ, ಹಿಂದಿನ ಎಲ್ಲ ಕ್ರಮಗಳನ್ನು ಮರೆತು ತಡವಾಗಿ ಏಳುವ ಸೊಸೆ-ಮಗನ ಹಾಸಿಗೆಯತ್ತ ಅತ್ತೆಯೇ ಸ್ವತಃ ಚಹಾ ಮಾಡಿ ಒಯ್ದು ನೀಡುವಳು. ಹಿಂದೆ ಪೂಜೆಯ ಅನಂತರ ತೀರ್ಥ, ಪ್ರಸಾದಕ್ಕಾಗಿ ಕಾಯುತ್ತಿದ್ದ ಮಗನಿಗೆ ಅಪ್ಪನೇ ಅವುಗಳನ್ನೊಯ್ದು ಕೊಡುವನು. ಎಳವೆಯಲ್ಲಿ ಅಪ್ಪ ಮಾಡಿಸುತ್ತಿದ್ದ ಪುರಾಣ ಶ್ರವಣ ಇಂದು ಮೊಮ್ಮಕ್ಕಳ ಪಾಲಿಗೂ ಉಳಿದಿಲ್ಲ . ಟಿ.ವಿ., ಮೊಬೈಲ್‌, ಐಪಾಡ್‌, ಲ್ಯಾಪ್‌ಟಾಪ್‌ಗ್ಳೇ ಅವರಿಗೂ ಪರ್ಯಾಯವಾಗಿ ದೊರಕಿವೆ. ಹಿರಿಯರ ಉಪದೇಶ-ಮಾತುಗಳು “ಮ್ಯೂಟ್‌'(mute ಆಗಿವೆ. ಹಿಂದಿನ “ಮಡಿವಂತಿಕೆ’ ಉಳಿದಂತೇ ಕಂಡುಬರುತ್ತಿಲ್ಲ. ಮುಜುಗರದಿಂದ ರಹಸ್ಯವಾಗಿ ಚರ್ಚಿಸುತ್ತಿದ್ದ ಲೈಂಗಿಕ ವಿಚಾರಗಳು ಈಗ ಹಾಗೇ ಉಳಿದಿಲ್ಲ. ಲವ್‌, ಲಿವ್‌ ಇನ್‌ ರಿಲೇಶನ್‌ಶಿಪ್‌, ಡೇಟಿಂಗ್‌ಗಳ ಬಗ್ಗೆ ಮುಕ್ತ ಮಾತುಕತೆ ನಡೆಯುತ್ತವೆ. ಅಂತರ್ಜಾತೀಯ ವಿವಾಹಗಳಿಗೆ ನಿಧಾನವಾಗಿ ಒಪ್ಪಿಗೆಯೂ ಸಿಗುತ್ತಿದೆ. “ಡೈವೋರ್ಸ್‌’ಗಳೂ ಸಾಮಾನ್ಯವಾಗುತ್ತಿವೆ. ಮಕ್ಕಳ ಆರ್ಥಿಕ ಸ್ವಾತಂತ್ರ್ಯ ಅವರ ಜೀವನಶೈಲಿ, ನಿರ್ಭೀತಿಯ ಮಾತುಗಳು, ಹಾವಭಾವಗಳಲ್ಲಿ ಪ್ರಕಟಗೊಳ್ಳುತ್ತವೆ.

ಇವೆಲ್ಲವೂ “ಯೌವ್ವನಾರಂಭೇ ಶಾಸ್ತ್ರ ಜಲ ಪ್ರಕ್ಷಾಲನ ನಿರ್ಮಲಾಸಿ ಕಾಲುಪ್ಯಂ ಉಪಯಾತಿ ಬುದ್ಧಿಃ’ (ಯೌವನಾ ರಂಭದಲ್ಲಿ ಶಾಸ್ತ್ರ (ಶಿಕ್ಷಣ)ವೆಂಬ ಜಲದಿಂದ ತೊಳೆಯಲ್ಪಟ್ಟು ನಿರ್ಮಲವಾಗಿದ್ದರೂ ಬುದ್ಧಿಯು ಕಲುಷಿತತೆಯನ್ನು ಹೊಂದುತ್ತದೆ) ಎಂಬ ಬಾಣಭಟ್ಟನ ಮಾತನ್ನು ನೆನಪಿಸಿದರೂ ಹಿರಿಯರು ಮೌನ ಸಮ್ಮತಿಯನ್ನೀಯುತ್ತಾರೆ.

Advertisement

ಬದಲಾವಣೆ ಪ್ರಕೃತಿ ನಿಯಮ: ಇದಾವುದನ್ನು ಸರಿಯಲ್ಲವೆನ್ನ ಬರುವುದಿಲ್ಲ. ಬದಲಾವಣೆಗಳನ್ನು ಒಪ್ಪಿಕೊಳ್ಳುವುದೇ ಜಾಣ್ಮೆ. ಮೌಲ್ಯಗಳು ಮಗ್ಗುಲು ಬದಲಾಯಿಸಿಕೊಳ್ಳುವಾಗ ವ್ಯಕ್ತಿ ತನ್ನ ಸ್ಥಾನದ ಅರಿವು, ಇತರರ ಭಾವನೆಗಳ ಬಗ್ಗೆ ಗೌರವ, ಸ್ವಾರ್ಥ ನಿಯಂತ್ರಣ, ಸಮಾನತೆ ಮತ್ತು ಸರಸತೆಯನ್ನು ಬೆಳೆಸಿಕೊಂಡರೆ ಅದು ರಚನಾತ್ಮಕವೆನಿಸೀತು. ತಪ್ಪಿದರೆ ದಾಸರು ಹೇಳಿದ “ಅನ್ನಮದ ಅರ್ಥಮದ ಅಖೀಲ ವೈಭವದ ಮದ, ಮುನ್ನ ಪ್ರಾಯದ ಮದವು, ರೂಪ ಮದವು, ತನ್ನ ಸತ್ವದ ಮದವು ಧಾತ್ರಿವಶವಾದ ಮದ ಇನ್ನು ತನಗೆದುರಿಲ್ಲವೆಂದೆಂಬ ಮದದಿಂದ’ (ಭಿನ್ನಹಕ್ಕೆ ಬಾಯಿಲ್ಲವಯ್ಯಾ) ಅವನತಿಗೆ ಕಾರಣವಾದರೂ ಆದೀತು, ಹಾಗಾಗದಿರಲೆಂದು ಹಾರೈಸೋಣ.

– ಪದ್ಯಾಣ ಪರಮೇಶ್ವರ ಭಟ್‌, ಬೆರ್ಬಲಜೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next