Advertisement

ವ್ಹಾಲಿಬಾಲ್‌ ಚಾಂಪಿಯನ್‌ಶಿಫ್‌ನಲ್ಲಿ ಚಿನ್ನ ಗೆದ್ದ ಅಸ್ಪಾಕ್‌

10:31 AM Feb 08, 2018 | Team Udayavani |

ನಾರಾಯಣಪುರ: ಸ್ಥಳೀಯ ವ್ಹಾಲಿಬಾಲ್‌ ಪಟು ಅಸ್ಪಾಕ್‌ ಶೇಖ್‌ ರಾಷ್ಟ್ರಮಟ್ಟದ ಓಪನ್‌ ವ್ಹಾಲಿಬಾಲ್‌ ಚಾಂಪಿಯನ್‌ಶಿಫ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾನೆ.

Advertisement

ಈಚೆಗೆ ಮಹಾರಾಷ್ಟ್ರ ರಾಜ್ಯದ ಶಿರಡಿಯಲ್ಲಿ ಯುನೆಟೆಡ್‌ ಇಂಡಿಯಾ ಗೇಮ್ಸ್‌ ಅಶೋಷಿಯೇಶನ್‌ ವತಿಯಿಂದ 22 ವರ್ಷದ ಒಳಗಿನವರ ಆಲ್‌ ಇಂಡಿಯಾ ಓಪನ್‌ ವ್ಹಾಲಿಬಾಲ್‌ ಚಾಂಪಿಯನ್‌ಶಿಫ್‌ನಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಉತ್ತಮ ವ್ಹಾಲಿಬಾಲ್‌ ಪಟುಗಳಲ್ಲಿ ಸ್ಥಾನ ಪಡೆದಿದ್ದ ಅಸ್ಪಾಕ್‌ ಶೇಖ್‌ ಪ್ರತಿ ಪಂದ್ಯಾಟದಲ್ಲಿ ಸಹ ಆಟಗಾರರೊಟ್ಟಿಗೆ ಉತ್ತಮ ಆಟ ಪ್ರದರ್ಶಿಸಿ ಕರ್ನಾಟಕವನ್ನು ಗೆಲ್ಲಿಸುವ ಮೂಲಕ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.

ಚಾಂಪಿಯನ್‌ಶಿಫ್‌ನ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡವು ಮಹಾರಾಷ್ಟ್ರ ತಂಡವನ್ನು ಸೋಲಿಸಿ ಚಾಂಪಿಯನಾಗಿ ಮಿಂಚುವ ಮೂಲಕ ಪ್ರಥಮ ಸ್ಥಾನ ಪಡೆದು ಚಿನ್ನ ಗೆದ್ದುಕೊಂಡರೆ, ದ್ವಿತೀಯ ಸ್ಥಾನ ಪಡೆದ ಮಹಾರಾಷ್ಟ್ರವು ಬೆಳ್ಳಿ ಪದಕ ಪಡೆದುಕೊಂಡಿದೆ.
 
ಈ ಮೂಲಕ ರಾಷ್ಟ್ರಮಟ್ಟದ ಚಾಂಪಿಯನ್‌ ಶಿಫ್‌ನಲ್ಲಿ ಚಿನ್ನದ ಪದಕ ಗಳಿಸಿರುವ ತಂಡದ ಆಟಗಾರರು ಅಂತರಾಷ್ಟ್ರೀಯ ಮಟ್ಟದ ಓಪನ್‌ ವ್ಹಾಲಿಬಾಲ್‌ ಪಂದ್ಯಾಟಗಳಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ ಎಂದು ವ್ಹಾಲಿಬಾಲ್‌ ಕೋಚ್‌ ದೈಹಿಕ ಶಿಕ್ಷಕ ಅಬ್ದುಲ್‌ ಖಾದಿರ್‌ ಚೌದ್ರಿ ತಿಳಿಸಿದರು. 

ರಾಷ್ಟ್ರಮಟ್ಟದ ವ್ಹಾಲಿಬಾಲ್‌ನಲ್ಲಿ ಮಿಂಚಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸುವ ಅರ್ಹತೆ ಪಡೆದಿರುವ ಅಸ್ಪಾಕ್‌ ಶೇಖ್‌ ಸಾಧನೆಯನ್ನು ಸ್ಥಳೀಯ ಗಣ್ಯರು, ಶಿಕ್ಷಕ ವರ್ಗದವರು ಹಾಗೂ ಕುಟುಂಬ ಸದಸ್ಯರು ಹರ್ಷವ್ಯಕ್ತಪಡಿಸಿದ್ದಾರೆ.

ಅದ್ಧೂರಿ ಸ್ವಾಗತ: ಚಿನ್ನದ ಪದಕ ಹಾಗೂ ಪ್ರಮಾಣ ಪತ್ರದೊಂದಿಗೆ ಮಂಗಳವಾರ ಪಟ್ಟಣದ ಬಸ್‌ ನಿಲ್ದಾಣಕ್ಕೆ ಆಗಮಿಸಿದ ಅಸ್ಪಾಕ್‌ನಿಗೆ ಸ್ಥಳೀಯ ಪ್ರಮುಖರು ಸೇರಿದಂತೆ ವ್ಹಾಲಿಬಾಲ್‌ ಕ್ರೀಡಾ ಪ್ರೇಮಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇದೇ ವೇಳೆ ನೆರೆದಿದ್ದವರು ಅಸ್ಪಾಕ್‌ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಶಾಲು ಹೊದಿಸಿ, ಹೂವು ಮಾಲೆ ಹಾಕಿ ಸನ್ಮಾನಿಸಿ ಅಭಿನಂದಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಬಸೀರ್‌ ಅಹ್ಮದ್‌, ಸೋಫಿ ಮೇಸ್ತ್ರೀ, ಶೇಖ್‌ ಅಹ್ಮದ್‌, ಸಂಗನಬಸ್ಸು ಚಟ್ಟೇರ, ಆದಂ ಶಫಿ, ಜಾವೀದ್‌, ವೆಂಕಟೇಶ ದೇಸಾಯಿ, ಅಬ್ದುಲ್‌ಖಾದಿರ್‌ ಚೌದ್ರಿ, ಮುರಳೀಧರ ಕೊಳ್ಳಿ, ಮಲ್ಲು ಮೇಸ್ತಕ್‌, ರಮೇಶ ಕೋಳುರ, ಚಂದ್ರು ಚವ್ಹಾಣ, ಚನ್ನಪ್ಪ ಸಂಗಟಿ, ಶಿವು, ನಹೀಂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next