ಮೈಸೂರು: ಯಡಿಯೂರಪ್ಪ ಅವರು ಎರಡು ದಿನ ಮುಖ್ಯಮಂತ್ರಿಯಾಗಿ ಹೆಲಿಕಾಪ್ಟರ್ ಹಾರಾಟಕ್ಕೆ 13 ಲಕ್ಷ ರೂ. ಬಿಲ್ ಮಾಡಿದ್ದಾರೆ. ಈ ಹಣಕ್ಕೆ ಯಾರು ಹೊಣೆ ಎಂದು ಕೇಳುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಈ ಪ್ರಶ್ನೆಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ
ಕೇಳಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿ, “ಹೊಸ ಸರ್ಕಾರ ರಚನೆಯಾಗುವವರೆಗೆ ರಾಜ್ಯಪಾಲರ ಆದೇಶದಂತೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದ ನಾನು,ಇಳಕಲ್ ಮಹಾಂತ ಶಿವಯೋಗಿ ಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅವರ ಅಂತಿಮ ದರ್ಶನ ಪಡೆದು, ಸರ್ಕಾರಿ ಗೌರವ ನೀಡಲು ಹೆಲಿಕಾಪ್ಟರ್ ನಲ್ಲಿ ಹೋಗಿ, ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೂ ಭೇಟಿ ನೀಡಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಿ, ವಾಪಸ್ ಬೆಂಗಳೂರಿಗೆ ಬಂದಿದ್ದೇನೆ.
ಇದಕ್ಕೆ 13 ಲಕ್ಷ ಬಿಲ್ ಬಂದಿದೆ. ಯಡಿಯೂರಪ್ಪ ಹೆಲಿಕಾಪ್ಟರ್‌ನಲ್ಲಿ ಹೋಗಿ ದುಂದುವೆಚ್ಚ ಮಾಡಿದ್ದಾರೆ ಎನ್ನುವ ಕುಮಾರ ಸ್ವಾಮಿ ಹೆಲಿಕಾಪ್ಟರ್ ಬಾಡಿಗೆಯಲ್ಲಿ ನಾನು ಕಮೀಷನ್ ಪಡೆದಿರುವಂತೆ ಮಾತನಾಡುತ್ತಿದ್ದಾರೆ. ಅಪ್ಪ-ಮಕ್ಕಳು ಸತ್ಯ ಹರಿಶ್ಚಂದ್ರರಂತೆ ಆಡುವುದನ್ನು ಬಿಟ್ಟು ಬನ್ನಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹೆಲಿಕಾಪ್ಟರ್ ಬಾಡಿಗೆಯನ್ನು ಸ್ವಂತ ಹಣದಿಂದ ಪಾವತಿಸಲು ಸಿದ್ಧನಿದ್ದೇನೆ. ಆದರೆ, ಈ ಬಗ್ಗೆ ಅನಗತ್ಯ ಗೊಂದಲ ಮೂಡಿಸುವುದು ಬೇಡ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಜೊತೆಗೆ, ಈ ಬಗ್ಗೆ ಬಹಿರಂಗ ಪತ್ರವನ್ನೂ ಬರೆಯುತ್ತೇನೆ’ ಎಂದರು.