Advertisement

ಪಿಂಕಿ ಎಂಬ ಹುಡುಗಿಯ “ಕುರಾಶ್‌ ಖುಷಿ’

06:00 AM Sep 22, 2018 | Team Udayavani |

ಅಕ್ಷರಶಃ ಅದು ಸಾವಿನ ಮನೆಯಾಗಿತ್ತು. ಮೂರು ತಿಂಗಳ ಅವಧಿಯಲ್ಲಿ ಮೂರು ಸಾವು ಸಂಭವಿಸಿತ್ತು. ಈ ನಡುವೆ ಏಶ್ಯಾಡ್‌ಗೆ ಆಯ್ಕೆಯಾದ, ದಿಲ್ಲಿಯ 19ರ ಹರೆಯದ ಹುಡುಗಿ ಪಿಂಕಿ ಬಲ್ಹಾರ ಮಾನಸಿಕ ಸ್ಥಿತಿ ಹೇಗಿದ್ದೀತು ಎಂಬುದನ್ನು ಯಾರೇ ಆದರೂ ಊಹಿಸಬಹುದಿತ್ತು. ಏಶ್ಯನ್‌ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಅಳವಡಿಸಲಾದ “ಕುರಾಶ್‌’ ಸ್ಪರ್ಧೆಯಲ್ಲಿ ಆಕೆ ಭಾಗವಹಿಸಬೇಕಿತ್ತು. ಒಮ್ಮೆ ಹಿಂದೆ ಸರಿಯುವ ನಿರ್ಧಾಕ್ಕೂ ಬಂದರು. ಆದರೆ “ದ ಶೋ ಮಸ್ಟ್‌ ಬಿ ಗೋ ಆನ್‌’ ಎಂಬಂತೆ ಪಿಂಕಿ ಈ ದುಃಖವನ್ನೆಲ್ಲ ನುಂಗಿ ಸಾಧನೆಯೆಡೆಗೆ ಯಶಸ್ವೀ ಹೆಜ್ಜೆಗಳನ್ನಿರಿಸಿಯೇ ಬಿಟ್ಟರು!

Advertisement

ಮುಂದಿನದು ಇತಿಹಾಸ. ವೈಯಕ್ತಿಕ ಬದುಕಿನಲ್ಲಿ ಬಂದ ಬಿರುಗಾಳಿಗೆ ಕುಗ್ಗದೆ ಕುರಾಶ್‌ ಸ್ಪರ್ಧೆಯಲ್ಲಿ ದೇಶಕ್ಕೆ ಚೊಚ್ಚಲ ಪದಕ ಗೆದ್ದ ಪಿಂಕಿಯ ಕ್ರೀಡಾ ಸ್ಪೂರ್ತಿಗೆ ಸಲಾಂ ಹೇಳಲೇಬೇಕು. ಅಂದಹಾಗೆ “ಕುರಾಶ್‌’ ಎಂಬ ಒಂದು ಕ್ರೀಡೆಯಿದೆ ಎಂದು ಜನರಿಗೆ ಗೊತ್ತಾದದ್ದೇ ದಿಲ್ಲಿ ಮೂಲದ ಪಿಂಕಿ ಬಲ್ಹಾರ ಬೆಳ್ಳಿ ಪದಕ ಗೆದ್ದ ಬಳಿಕ! 

ಕ್ರೀಡಾಪಟುಗಳು ಯಾವತ್ತೂ ದೈಹಿಕ, ಮಾನ ಸಿಕ ಮತ್ತು ಭಾವನತ್ಮಾಕವಾಗಿ ಹೆಚ್ಚು ಸದೃಢರಾಗಿರುಬೇಕು. ಇಲ್ಲಿ ಸ್ವಲ್ಪವೇ ವ್ಯತ್ಯಯವಾದರೆ ಗುರಿ ಸಾಧಿಸಲು ಸಾಧ್ಯವಿಲ್ಲ. ಪಿಂಕಿ ಬದುಕಿನಲ್ಲಿ ಎದುರಾದ ಆಘಾತ ಒಂದಲ್ಲ, ಎರಡಲ್ಲ… ಮೂರು! ಮೂರು ತಿಂಗಳ ಅಂತರದಲ್ಲಿ ಕುಟುಂಬದ ಮೂರು ಸದಸ್ಯರನ್ನು ಕಳೆದುಕೊಂಡರು. ಮೊದಲು ಸೋದರ ಸಂಬಂಧಿ, ಬಳಿಕ ಬದುಕಿನ ಪಾಠ ಕಲಿಸಿ ಕೊಟ್ಟ ತಂದೆ, ಅನಂತರ ಪ್ರೀತಿ ತೋರಿದ ಅಜ್ಜ. ಮೂರು ಆತ್ಮೀಯ ಜೀವಗಳನ್ನು ಕಳೆದುಕೊಂಡ ನೋವು, ಆಘಾತದಲ್ಲೂ ಪಿಂಕಿ ಬಲ್ಹಾರ ಏಶ್ಯಾಡ್‌ ಸಾಧನೆ ಮೂಲಕ ಭಲೇ ಎನಿಸಿಕೊಂಡಿದ್ದಾರೆ.

ಮಾನಸಿಕವಾಗಿ ಗಟ್ಟಿಗೊಂಡ ಪಿಂಕಿ
ಪಿಂಕಿ ಬಲ್ಹಾರ ಕಠಿನ ತರಬೇತಿಯಲ್ಲಿ ತೊಡಗಿರುವಾಗಲೇ ಸಹೋದರ ಸಂಬಂಧಿ ಮೃತರಾದರೆ, ಏಶ್ಯನ್‌ ಗೇಮ್ಸ್‌ ತಂಡದಲ್ಲಿ ಸ್ಥಾನ ಪಡೆದ ಸುದ್ದಿ ತಿಳಿದ ಕೆಲವೇ ದಿನಗಳ ಬಳಿಕ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದರು. ತಂದೆಯ ಸಾವಿನ ಬಳಿಕ ಕುಟುಂಬ ಸಹಜ ಸ್ಥಿತಿಗೆ ಮರಳುತ್ತಿದ್ದ ವೇಳೆ ಅಜ್ಜ ಕೂಡ ಇಹಲೋಕ ತ್ಯಜಿಸುತ್ತಾರೆ. ಈ ಸಂದರ್ಭದಲ್ಲಿ ಪಿಂಕಿಯನ್ನು ಮಾನಸಿಕವಾಗಿ ಗಟ್ಟಿಗೊಳಿಸಿದ್ದು ಮಾವ ಸುಮಂದರ್‌ ತೋಕಸ್‌. ತಂದೆಯ ನಿಧನ ಬಳಿಕ ಏಶ್ಯಾಡ್‌ನಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕುಳಿತಿದ್ದ ಪಿಂಕಿಗೆ ಧೈರ್ಯ ತುಂಬಿ, ನೀನು ತಂದೆಯ ಕನಸನ್ನು ನನಸಾಗಿಸಲೇಬೇಕೆಂದು ಹುರಿದುಂಬಿಸಿ ತರಬೇತಿ ಮುಂದುವರಿಯಲು ಪ್ರೇರೇಪಿಸಿದರು. ಇದರ ಫ‌ಲಿತಾಂಶ ಜಕಾರ್ತಾದಲ್ಲಿ ಹೊರಹೊಮ್ಮಿದೆ.

ಪಿಂಕಿ ಬಲ್ಹಾರ ಗಾರ್ಗಿ ಕಾಲೇಜಿನ ವಿದ್ಯಾರ್ಥಿನಿ. ಮೊದಲು ಕಾಲಿಟ್ಟಿದ್ದು ಜೂಡೋಗೆ. ಜೂಡೋ ಹಾಗೂ ಕುರಾಶ್‌ಗೆ ಸಾಮ್ಯತೆ ಇದ್ದ ಕಾರಣ ಕುರಾಶ್‌ ಕ್ರೀಡೆಯನ್ನೇ ಆಯ್ಕೆ ಮಾಡಿಕೊಂಡರು. ತಂದೆ ಸಾವನ್ನಪ್ಪಿದ ಬಳಿಕ ಸಮಾಜದ ಮಾತುಗಳನ್ನು ಕೇಳಬೇಕಾಗುತ್ತದೆ ಎಂದು ತಿಳಿದು ರಾತ್ರಿ ವೇಳೆ ಜಿಮ್‌ಗೆ ತೆರಳಿ ತರಬೇತಿಯಲ್ಲಿ ನಿರತರಾದರು. 58 ಕೆಜಿ ಹೊಂದಿದ್ದ ಬಲ್ಹಾರ 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ತೂಕ ಇಳಿಸಿಕೊಳ್ಳಬೇಕಾಗಿ ಬಂತು. ತಂದೆ ಕಾರ್ಯಗಳನ್ನೆಲ್ಲ ಮುಗಿಸಿ ಬಂದ ಪಿಂಕಿಗೆ ರಾಷ್ಟ್ರೀಯ ಸ್ಪರ್ಧೆಯ ತರಬೇತಿಗೆ ದೊರಕಿದ್ದು ಕೇವಲ 5 ದಿನ!

Advertisement

ತಂದೆಯಿಲ್ಲದೆ ಏಶ್ಯಾಡ್‌ನಲ್ಲಿ ಭಾಗಿ
ಮಗಳು ಏಶ್ಯನ್‌ ಗೇಮ್ಸ್‌ಗೆ ಆಯ್ಕೆಯಾಗಿದ್ದಾಳೆ ಎಂದು ತಿಳಿದ ತಂದೆ ಆಕೆಯೊಂದಿಗೆ ಜಕಾರ್ತಾಕ್ಕೆ ತೆರಳಲು ನಿರ್ಧರಿಸಿದ್ದರು. ಆದರೆ ವಿಧಿ ಬಯಸಿದ್ದೇ ಬೇರೆ. ಮಗಳ ಜಯವನ್ನು ಸಂಭ್ರಮಿಸಬೇಕಾಗಿದ್ದ ತಂದೆ ಇಹಲೋಕ ತೆರಳಿ ಮಗಳನ್ನು ಒಬ್ಬಂಟಿಯಾಗಿ ಪಯಣ ಬೆಳೆಸುವಂತೆ ಮಾಡಿದರು. ತಂದೆ ಪಿಂಕಿಯ ಆಟದ ವೈಖರಿಯನ್ನು ಎಂದೂ ಕಂಡವರಲ್ಲ. ತರಬೇತಿ ಸಂದರ್ಭದಲ್ಲಿ ಹೆತ್ತವರ ಉಪಸ್ಥಿತಿ ವಿಚಲಿತಗೊಳಿಸುತ್ತದೆ ಎಂಬ ಕಾರಣಕ್ಕೆ ಅವರನ್ನು ಪಿಂಕಿ ದೂರ ವಿಡುತ್ತಿದ್ದರು.

ಸಾಧನೆ
ಎರಡು ಬಾರಿ ರಾಷ್ಟ್ರೀಯ ಬೆಳ್ಳಿ ಪದಕ ಗೆದ್ದಿರುವ ಪಿಂಕಿ ಆರಂಭದಲ್ಲಿ ಜೂಡೋದಲ್ಲಿ ಗುರುತಿಸಿಕೊಂಡಿದ್ದರು. 2016ರಲ್ಲಿ ವಿಯೆಟ್ನಾಂನಲ್ಲಿ ನಡೆದ ಏಶ್ಯನ್‌ ಬೀಚ್‌ ಗೇಮ್ಸ್‌ನಲ್ಲಿ ಕಂಚಿನ ಪದಕ, ಪ್ರಸಕ್ತ ಋತುವಿನ ಕಿರಿಯರ ಏಶ್ಯನ್‌ ಚಾಂಪಿಯನ್‌ಶಿಪ್‌ 52 ಕೆಜಿ ಸ್ಪರ್ಧೆಯಲ್ಲಿ ಚಿನ್ನದ ಪದಕ, ಪುಣೆಯಲ್ಲಿ ನಡೆದ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಏಶ್ಯನ್‌ ಗೇಮ್ಸ್‌ ಕುರಾಶ್‌ನಲ್ಲಿ ಬೆಳ್ಳಿ ಪದಕ ಪಡೆದದ್ದು ಉತ್ತಮ ಪ್ರದರ್ಶನವಾಗಿದೆ. 

ನನ್ನ ಜೀವನದ ಅತ್ಯಂತ ಕೆಟ್ಟ ಸಮಯವದು. ಮೂರು ತಿಂಗಳ ಅಂತರದಲ್ಲಿ ಆಪ್ತರು ಎಂದೆನಿಸಿಕೊಂಡವರು ನನ್ನಿಂದ ದೂರ ಹೋಗಿದ್ದರು. 
ಏಶ್ಯಾಡ್‌ಗೂ ಮೊದಲು ತಂದೆ ನನ್ನ ಬಳಿ ಕುಡಿಯಲು ನೀರು ತರಲು ಹೇಳಿದ್ದರು. ಆದರೆ ನಾನು ಅವರ ಮಾತನ್ನು ಕೇಳಲಿಲ್ಲ. ಆಗ, ತಂದೆಯ ಮಾತನ್ನು ಕೇಳುತ್ತಿಲ್ಲ. ಈ ರೀತಿ ನಡೆದುಕೊಂಡರೆ ನೀನು ಏಶ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವುದಿಲ್ಲ. ಬೆಳ್ಳಿ ಪದಕ ಗೆಲ್ಲುತ್ತೀಯ ಎಂದು ಹೇಳಿದ್ದರು. ಏಶ್ಯಾಡ್‌ನಲ್ಲಿ ಪದಕ ಗೆದ್ದ ಬಳಿಕ ಆ ಮಾತುಗಳನ್ನು ನೆನಪಿಸಿಕೊಂಡೆ .

-ಪಿಂಕಿ ಬಲ್ಹಾರ

ರಮ್ಯಾ ಕೆದಿಲಾಯ/ಪ್ರೇಮಾನಂದ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next