Advertisement

ಹಿಮಾ ದಾಸ್‌, ಮೊಹಮ್ಮದ್‌ ಅನಾಸ್‌ ರಜತ ಮಂದಹಾಸ

03:05 PM Aug 27, 2018 | |

ಜಕಾರ್ತಾ: ಏಶ್ಯಾಡ್‌ ಆ್ಯತ್ಲೆಟಿಕ್ಸ್‌ನಲ್ಲಿ ಭಾರತದ ಬಹು ನಿರೀಕ್ಷೆಯ ಸ್ಪರ್ಧಿಗಳಾದ ಹಿಮಾ ದಾಸ್‌ ಮತ್ತು ಮೊಹಮ್ಮದ್‌ ಅನಾಸ್‌ ರಜತ ಮಂದಹಾಸ ಬೀರಿದ್ದಾರೆ. ರವಿವಾರ ನಡೆದ ವನಿತೆಯರ ಹಾಗೂ ಪುರುಷರ 400 ಮೀ. ರೇಸ್‌ ಫೈನಲ್‌ನಲ್ಲಿ ಇವರಿಬ್ಬರೂ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

Advertisement

“ರೈತ ಪುತ್ರಿ’ಯ ದಾಖಲೆ ಓಟ
ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ತನ್ನ ಅಮೋಘ ಗೆಲುವಿನ ಓಟವನ್ನು ಮುಂದುವರಿಸಿದ “ರೈತ ಪುತ್ರಿ’ ಹಿಮಾ ದಾಸ್‌ 50.79 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಇದರೊಂದಿಗೆ ನೂತನ ರಾಷ್ಟ್ರೀಯ ದಾಖಲೆಯನ್ನೂ ಸ್ಥಾಪಿಸಿದರು. ಇದೇ ಕೂಟದ ಸೆಮಿಫೈನಲ್‌ನಲ್ಲಿ ಸ್ಥಾಪಿಸಿದ 51.00 ಸೆಕೆಂಡ್‌ಗಳ ಸಾಧನೆಯನ್ನು ತಿದ್ದಿ ಬರೆದರು. ಸೆಮಿಫೈನಲ್‌ ಪ್ರವೇಶದ ವೇಳೆ ಅವರು ಮನ್‌ಜಿತ್‌ ಕೌರ್‌ ಅವರ 2004ರ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು (51.05).

ಭಾರತದ ಮತ್ತೋರ್ವ ಸ್ಪರ್ಧಿ ನಿರ್ಮಲಾ ಶೆರಾನ್‌ ಕೂಡ ಫೈನಲ್‌ಗೆ ಲಗ್ಗೆ ಇರಿಸಿದ್ದರು. ಆದರೆ ಅವರು ಕೇವಲ 0.33 ಸೆಕೆಂಡ್‌ಗಳಲ್ಲಿ ಕಂಚಿನ ಪದಕದಿಂದ ವಂಚಿತರಾಗಬೇಕಾಯಿತು (52.96). ಚಿನ್ನದ ಪದಕ ಬಹ್ರೈನ್‌ನ ಸಲ್ವ ನಾಸೆರ್‌ ಪಾಲಾದರೆ (50.09), ಕಂಚನ್ನು ಕಜಾಕ್‌ಸ್ಥಾನದ ಮಿಖೀನಾ ಎಲಿನಾ ಗೆದ್ದರು (52.63). 

ಇತ್ತೀಚೆಗಷ್ಟೇ ಫಿನ್ಲ್ಯಾಂಡ್ನಲ್ಲಿ ನಡೆದ ಐಎಎಎಫ್ ಅಂಡರ್‌-20 ಆ್ಯತ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ವನಿತಾ ಸಾಧಕಿಯಾಗಿ ಇತಿಹಾಸ ನಿರ್ಮಿಸಿದ್ದ ಹಿಮಾ ದಾಸ್‌ ಏಶ್ಯಾಡ್‌ನ‌ಲ್ಲೂ ಮಿಂಚು ಹರಿಸುವ ಬಗ್ಗೆ ನಂಬಿಕೆ ಎಲ್ಲರಲ್ಲೂ ಇತ್ತು. ಇದನ್ನೀಗ ಅವರು ನಿಜ ಮಾಡಿದ್ದಾರೆ.

ಅನಾಸ್‌ ಪರಾಕ್ರಮ


ಪುರುಷರ ವಿಭಾಗದ 400 ಮೀ. ಓಟದಲ್ಲಿ ಮೊಹಮ್ಮದ್‌ ಅನಾಸ್‌ 45.69 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನಿಯಾದರು. ಕತಾರ್‌ನ ಹಸನ್‌ ಅಬ್ದಾಲೆಲಾಹ್‌ ಚಿನ್ನ  ಗೆದ್ದರು (44.89). ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಭಾರತದ ರಾಜೀವ್‌ ಅರೋಕಿಯಾ 4ನೇ ಸ್ಥಾನಿಯಾಗಿ, 0.14 ಸೆಕೆಂಡ್‌ಗಳ ಅಂತರದಿಂದ ಕಂಚು ಕಳೆದುಕೊಂಡರು.
ಕೇರಳದ 24ರ ಹರೆಯದ ಓಟಗಾರ ಮೊಹಮ್ಮದ್‌ ಅನಾಸ್‌ ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಸುದ್ದಿಯಾಗಿದ್ದರು.

Advertisement

ಫೈನಲ್‌ನಲ್ಲಿ ಏನಾಯಿತೋ ಗೊತ್ತಿಲ್ಲ. ಇನ್ನೂ ಚೆನ್ನಾಗಿ ಓಡಬಹುದಿತ್ತು. ಆದರೆ ಬೆಳ್ಳಿ ಪದಕ ಖುಷಿ ಕೊಟ್ಟಿದೆ. ಏಶ್ಯಾಡ್‌ ಪದಕವೊಂದನ್ನು ಗೆಲ್ಲುವುದು ನನ್ನ ಗುರಿಯಾಗಿತ್ತು. ಇದೀಗ ಈಡೇರಿದೆ.
-ಮೊಹಮ್ಮದ್‌ ಅನಾಸ್‌

Advertisement

Udayavani is now on Telegram. Click here to join our channel and stay updated with the latest news.

Next