ಭುವನೇಶ್ವರ: ಭಾರತದ ಖ್ಯಾತ ಆ್ಯತ್ಲೀಟ್ ಸುಧಾ ಸಿಂಗ್ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. 3ನೇ ದಿನ ಭಾರತ ಒಟ್ಟಾರೆ 1 ಚಿನ್ನ, 1 ಬೆಳ್ಳಿ ಹಾಗೂ 4 ಕಂಚಿನ ಪದಕ ಗೆದ್ದುಕೊಂಡಿದೆ. ಒಟ್ಟಾರೆ 16 ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
ಉತ್ತರ ಪ್ರದೇಶದ ಓಟಗಾರ್ತಿ ಸುಧಾ ಸಿಂಗ್ 9 ನಿಮಿಷ 59.47 ಸೆಕೆಂಡ್ಸ್‌ಗಳಲ್ಲಿ ಗುರಿ ಮುಟ್ಟುವುದರೊಂದಿಗೆ ಚಿನ್ನದ ನಗು ಬೀರಿದರು. 2009, 2011 ಹಾಗೂ 2013ರಲ್ಲಿ ಇದೇ ಕೂಟದಲ್ಲಿ ಸುಧಾ ಸಿಂಗ್ ಕೇವಲ ಬೆಳ್ಳಿ ಪದಕ ಪಡೆಯಲಷ್ಟೇ ಶಕ್ತರಾಗಿದ್ದರು. ಇದೇ ಮೊದಲ ಬಾರಿಗೆ ಏಶ್ಯನ್ ಕೂಟದಲ್ಲಿ ಸುಧಾ ಸಿಂಗ್ ಚಿನ್ನ ಗೆದ್ದಿದ್ದಾರೆ.
ರಿಯೋ ಒಲಿಂಪಿಕ್ಸ್ ಕೂಟದ ವೇಳೆ ಸುಧಾ ಸಿಂಗ್ ಜ್ವರದಿಂದ ಬಳಲುತ್ತಿದ್ದರು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದುಕೊಂಡು ತವರಿಗೆ ವಾಪಸ್ ಆಗಿದ್ದರು. ಝೀಕಾ ವೈರಸ್ ತಾಗಿತ್ತು ಎನ್ನುವ ವರದಿಯೂ ಹಬ್ಬಿತ್ತು. ಆದರೆ ಅಂತಹ ಯಾವುದೇ ಸಮಸ್ಯೆಗಳಿಲ್ಲ ಎನ್ನುವುದನ್ನು ಆಮೇಲಷ್ಟೇ ವೈದ್ಯರು ಸ್ಪಷ್ಟಪಡಿಸಿದ್ದರು. ಇದಾದ 5-6 ತಿಂಗಳು ಅಭ್ಯಾಸ ಶಿಬಿರವನ್ನೂ ಕಳೆದುಕೊಂಡಿದ್ದರು. ಆದರೆ ಅದೆಲ್ಲವನ್ನು ಮರೆಸುವಂತಹ ಪ್ರದರ್ಶನ ಈಗ ನೀಡಿರುವುದು ವಿಶೇಷ. ಇದೇ ಕೂಟದಲ್ಲಿ ಲಲಿತಾ ಬಾಬರ್ ಸ್ಪರ್ಧಿಸಬೇಕಿತ್ತು. ಆದರೆ ಮದುವೆಯ ಹಿನ್ನಲೆಯಲ್ಲಿ ಏಷ್ಯನ್ ಕೂಟದಿಂದ ಬಾಬರ್ ಭಾಗವಹಿಸಿರಲಿಲ್ಲ. ಬಾಬರ್ ಭಾಗವಹಿಸಿದ್ದರೆ ಚಿನ್ನ ಗೆಲ್ಲುವ ಸಾಧ್ಯತೆ ಇತ್ತು.
ಪುರುಷರ ವಿಭಾಗದ 3 ಸಾವಿರ ಮೀ. ಸ್ಟೀಪಲ್‌ಚೇಸ್‌ನಲ್ಲಿ ನವೀನ್ ಕುಮಾರ್ ಕಂಚಿನ ಪದಕ ಗೆದ್ದರು. 400 ಮೀ. ಮಹಿಳಾ ಹರ್ಡಲ್ಸ್‌ನಲ್ಲಿ ಕಂಚು, 4/100 ಮೀ. ರಿಲೇನಲ್ಲಿ ಕಂಚು, 400 ಮೀ. ಹರ್ಡಲ್ಸ್‌ನಲ್ಲಿ ಅನು ಆರ್. ಬೆಳ್ಳಿ, ಮಹಿಳಾ ತ್ರಿಪಲ್ ಜಂಪ್‌ನಲ್ಲಿ ಕಂಚು ಹಾಗೂ ಪುರುಷರ 400 ಮೀ. ಹರ್ಡಲ್ಸ್‌ನಲ್ಲಿ ಕಂಚಿನ ಪದಕವನ್ನು ಭಾರತ ಗೆದ್ದುಕೊಂಡಿತು.
ಇಂದು ರಿಲೇನಲ್ಲಿ 2 ಪದಕ ನಿರೀಕ್ಷೆ
ಭಾರತ ಪುರುಷರ ಹಾಗೂ ಮಹಿಳೆಯರ 4/400 ಮೀ. ರಿಲೇ ತಂಡ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಜತೆಗೆ ಟಿಂಟು ಲುಕಾ ಕೂಡ 800 ಮೀ. ಫೈನಲ್‌ಗೇರಿದ್ದು ಪದಕ ಗೆಲುವಿನ ಭರವಸೆ ಮೂಡಿಸಿದ್ದಾರೆ.
ಇಂದು ಕೂಟಕ್ಕೆ ತೆರೆ
ಕಳೆದ 4 ದಿನಗಳಿಂದ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಕೂಟಕ್ಕೆ ಭಾನುವಾರ ಭುವನೇಶ್ವರದಲ್ಲಿ ಅದ್ಧೂರಿ ತೆರೆ ಬೀಳಲಿದೆ. ಜುಲೈ 6ರಂದು ಅಥ್ಲೆಟಿಕ್ಸ್ ಕೂಟ ಆರಂಭವಾಗಿತ್ತು. ಇದೀಗ ಮೂರು ದಿನಗಳಲ್ಲಿ ಪೂರೈಸಿದ್ದು ಭಾನುವಾರ ಅಂತಿಮ ದಿನವಾಗಿದೆ.