ಭುವನೇಶ್ವರ: ಭಾರತದ ಆತಿಥ್ಯದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿದ್ದ 22ನೇ ಏಶ್ಯನ್ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಒಡಿಶಾದ ಭುವನೇಶ್ವರದಲ್ಲಿ ರವಿವಾರ ತೆರೆಬಿದ್ದಿದೆ. ಭಾರತ 12 ಚಿನ್ನ, 5 ಬೆಳ್ಳಿ, 12 ಕಂಚು ಸೇರಿದಂತೆ ಒಟ್ಟಾರೆ 29 ಪದಕದೊಂದಿಗೆ ಸಮಗ್ರ ಚಾಂಪಿಯನ್‌ಶಿಪ್ ಗೆದ್ದಿತು. ಅಂತಿಮ ದಿನದ ಓಟದಲ್ಲಿ ಭಾರತ ಪುರುಷ ಹಾಗೂ ಮಹಿಳಾ 4/400 ಮೀ. ರಿಲೇ ಚಿನ್ನ, ಜಾವೆಲಿನ್‌ನಲ್ಲಿ ನೀರಜ್ ಚಿನ್ನ, 10 ಸಾವಿರ ಮೀ.ನಲ್ಲಿ ಲಕ್ಷ್ಮಣನ್ ಚಿನ್ನ, ಇದೇ ವಿಭಾಗದಲ್ಲಿ ಗೋಪಿ ಬೆಳ್ಳಿ ಪದಕ ಜಯಿಸಿದರು.
ಪುರುಷರ 1000 ಮೀ. ಓಟದಲ್ಲಿ ಭಾರತದ ಲಕ್ಷ್ಮಣನ್ ಚಿನ್ನದ ಪದಕ ಗೆದ್ದರೆ, ಗೋಪಿ ತೊಣಕಲ್ ಬೆಳ್ಳಿ ಪದಕ ಗೆದ್ದಿದ್ದಾರೆ. ಲಕ್ಷ್ಮಣನ್ 29 ನಿಮಿಷ 55.87 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದರು. ಗೋಪಿ 29 ನಿಮಿಷ 58.89 ಸೆಕೆಂಡ್‌ನಲ್ಲಿ 2ನೇಯವರಾಗಿ ಗುರಿ ಮುಟ್ಟಿದರು.ಪುರುಷರ 800 ಮೀ.ಓಟದಲ್ಲಿ ಭಾರತದ ಜಿನ್ಸನ್ ಜಾನ್ಸನ್ 1 ನಿಮಿಷ 50.07 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಗೆದ್ದರು.
ನಿರೀಕ್ಷೆಯಂತೆ 4/400 ಮೀ. ರಿಲೇಯಲ್ಲಿ ಭಾರತದ ಪುರುಷರು ಮತ್ತು ಮಹಿಳೆಯರು ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ ತಂಡ 3 ನಿಮಿಷ, 02.92 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದರು. ಮಹಿಳೆಯರು 3 ನಿಮಿಷ, 31.34 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಜಾವೆಲಿನ್ ಥ್ರೋ: ನೀರಜ್‌ಗೆ ಚಿನ್ನ, ದೇವೇಂದ್ರಗೆ ಕಂಚು: ಪುರುಷರ ಜಾವೆಲಿನ್ ಥ್ರೋದಲ್ಲಿ ಭಾರತದ ನೀರಜ್ ಚೋಪ್ರಾ 85.23 ಮೀ. ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಭಾರತದ ಮತ್ತೂಬ್ಬ ಸ್ಪರ್ಧಿ ದೇವೇಂದ್ರ ಸಿಂಗ್ 83.29 ಮೀ. ಎಸೆದು ಕಂಚಿನ ಪದಕ ಗೆದ್ದಿದ್ದಾರೆ.
ಚಿನ್ನ ಗೆದ್ದ ಅರ್ಚನಾ ಅನರ್ಹ!
ಮಹಿಳಾ 800 ಮೀ. ಓಟದಲ್ಲಿ ಭರವಸೆ ಮೂಡಿಸಿದ್ದ ಟಿಂಟು ಲುಕಾ ಫೈನಲ್‌ನಲ್ಲಿ ಗುರಿ ತಲುಪಲಾಗದೆ ನಿರಾಸೆ ಮೂಡಿಸಿದರು. ಆದರೆ ಅರ್ಚನಾ ಯಾದವ್ ಅನಿರೀಕ್ಷಿತವಾಗಿ ಚಿನ್ನದ ಪದಕ ಗೆದ್ದೆ ಎಂದು ಸಂಭ್ರಮಿಸಿದ ಕೆಲವೇ ಕ್ಷಣಗಳಲ್ಲಿ ಸಂಘಟಕರು ಅನರ್ಹ ಎಂದು ಘೋಷಿಸಿದರು. ಎದುರಾಳಿಯನ್ನು ಕೈನಿಂದ ತಳ್ಳಿದ್ದರಿಂದ ಅವರನ್ನು ಅನರ್ಹಗೊಳಿಸಲಾಯಿತು ಎನ್ನಲಾಗಿದೆ.