ಅಲ್ ಅಮೆರತ್: ಲೆಜೆಂಡ್ಸ್ ಕ್ರಿಕೆಟ್ ಲೀಗ್ ನ ಎರಡನೇ ಪಂದ್ಯದಲ್ಲಿ ಏಶ್ಯನ್ ಲಯನ್ಸ್ ತಂಡವು ವರ್ಲ್ಡ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದೆ. ದೊಡ್ಡ ಮೊತ್ತದ ಪಂದ್ಯದಲ್ಲಿ ಕೆವಿನ್ ಒಬ್ರಿಯನ್, ತಿಲಕರತ್ನೆ ದಿಲ್ಶನ್ ಮತ್ತು ಉಪುಲ್ ತರಂಗ ಮಿಂಚಿದರು.
ಮೊದಲು ಬ್ಯಾಟಿಂಗ್ ಮಾಡಿದ ವರ್ಲ್ಡ್ ಜೈಂಟ್ಸ್ ತಂಡವು ಒಬ್ರಿಯನ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಭರ್ಜರಿ ಬ್ಯಾಟ್ ಬೀಸಿದ ಐರಿಶ್ ಆಟಗಾರ ಒಬ್ರಿಯನ್ ಕೇವಲ 46 ಎಸೆತಗಳಲ್ಲಿ ಏಳು ಸಿಕ್ಸರ್ ಏಳು ಬೌಂಡರಿ ನೆರವಿನಿಂದ 95 ರನ್ ಗಳಿಸಿದರು. ಉಳಿದಂತೆ ಮುಸ್ಟರ್ಡ್ 28 ರನ್ ಗಳಿಸಿದರು. ಲಯನ್ಸ್ ಪರ ಕುಲಶೇಖರ ಮತ್ತು ಹಫೀಜ್ ತಲಾ ಎರಡು ವಿಕೆಟ್ ಪಡೆದರು. ಮುರಳೀಧರನ್ ಒಂದು ವಿಕೆಟ್ ಪಡೆದರೂ ದುಬಾರಿಯಾದರು.
ಗುರಿ ಬೆನ್ನತ್ತಿದ ಏಶ್ಯನ್ ಲಯನ್ಸ್ ತಂಡಕ್ಕೆ ಲಂಕನ್ ಆಟಗಾರರಾದ ದಿಲ್ಶನ್ ಮತ್ತು ತರಂಗ ನೆರವಾದರು. ದಿಲ್ಶನ್ 52 ರನ್ ಗಳಿಸಿದರೆ, ಸತತ ಎರಡನೇ ಅರ್ಧಶತಕ ಸಿಡಿಸಿದ ತರಂಗ 63 ರನ್ ಗಳಿಸಿದರು. ಹಫೀಜ್ 27, ಕೊನೆಯಲ್ಲಿ ನಾಯಕ ಮಿಸ್ಭಾ 11 ಎಸೆತಗಳಲ್ಲಿ 19 ರನ್ ಬಾರಿಸಿದರು. ಏಶ್ಯನ್ ಲಯನ್ಸ್ ತಂಡ 19.2 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 209 ರನ್ ಗಳಿಸಿ ಜಯ ಸಾಧಿಸಿತು.
ಇದನ್ನೂ ಓದಿ:ಅಧಿಕೃತ: ಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ರಾಹುಲ್; ಹಾರ್ದಿಕ್ ಗೆ 15 ಕೋಟಿ ಕೊಟ್ಟ ಅಹಮದಾಬಾದ್
ವರ್ಲ್ಡ್ ಜೈಂಟ್ಸ್ ಪರ ಮಾರ್ನೆ ಮೊರ್ಕೆಲ್ ಎರಡು ವಿಕೆಟ್ ಪಡೆದರೆ, ಒಂದು ವಿಕೆಟ್ ಮಾಂಟಿ ಪನೆಸರ್ ಪಾಲಾಯಿತು. ಕೆವಿನ್ ಒಬ್ರಿಯಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.