ಕೊಲಂಬೊ: ಗುರುವಾರ ರಾತ್ರಿಯ ರಣರೋಚಕ ಸೂಪರ್-4 ಪಂದ್ಯದಲ್ಲಿ ಪಾಕಿಸ್ಥಾನ ವನ್ನು 2 ವಿಕೆಟ್‌ಗಳಿಂದ ಮಣಿಸಿದ ಶ್ರೀಲಂಕಾ ಪಡೆ ಏಷ್ಯಾ ಕಪ್ ಫೈನಲ್‌ಗೆ ಮುನ್ನುಗ್ಗಿದೆ. ಇದರೊಂದಿಗೆ ಶ್ರೀಲಂಕಾದ ಏಷ್ಯಾ ಕಪ್ ಫೈನಲ್ ದಾಖಲೆ 12ಕ್ಕೆ ಏರಿತು. 10ನೇ ಫೈನಲ್ ಆಡಲಿರುವ ಭಾರತ ದ್ವಿತೀಯ ಸ್ಥಾನದಲ್ಲಿದೆ. ಪಾಕ್ 6ನೇ ಫೈನಲ್‌ನಿಂದ ವಂಚಿತವಾಯಿತು.
ರವಿವಾರದ ಫೈನಲ್‌ನಲ್ಲಿ ಭಾರತ-ಪಾಕಿಸ್ಥಾನ ಮತ್ತೂಮ್ಮೆ ಎದುರಾಗಬಹುದು, ಒಂದೇ ಟೂರ್ನಿಯಲ್ಲಿ 3 ಸಲ ಮುಖಾಮುಖೀ ಆಗುವ ಅಪೂರ್ವ ಅವಕಾಶ ಲಭಿಸೀತು ಎಂಬೆಲ್ಲ ನಿರೀಕ್ಷೆ ಕೊನೆಯ ಕ್ಷಣದ ವರೆಗೂ ಗರಿಗೆದರಿತ್ತು. ಆದರೆ ಜಮಾನ್ ಖಾನ್ ಅವರ ಕೊನೆಯ ಎರಡು ಎಸೆತಗಳಲ್ಲಿ ಚರಿತ ಅಸಲಂಕ ಚರಿತ್ರೆಯೊಂದಕ್ಕೆ ಮುನ್ನುಡಿ ಬರೆದಂತೆ ಆಡಿದರು. 5ನೇ ಎಸೆತವನ್ನು ಬೌಂಡರಿಗೆ ಬಡಿದಟ್ಟಿ, ಅಂತಿಮ ಎಸೆತದಲ್ಲಿ ಅಗತ್ಯವಿದ್ದ 2 ರನ್ ತೆಗೆದುಕೊಂಡು ಲಂಕೆಯ ಗೆಲುವನ್ನು ಸಾರಿದರು.
ಅಂತಿಮ ಓವರ್‌ನಲ್ಲಿ ಲಂಕಾ ಜಯಕ್ಕೆ 8 ರನ್ ಅಗತ್ಯವಿತ್ತು. ಮೊದಲ ಎಸೆತದಲ್ಲಿ ಪ್ರಮೋದ್ ಮದುಶಾನ್ ಅವರಿಂದ ಒಂದು ಲೆಗ್‌ಬೈ ಸಿಕ್ಕಿತು. ಅನಂತರದ್ದು ಡಾಟ್ ಬಾಲ್. 3ನೇ ಎಸೆತದಲ್ಲಿ ಅಸಲಂಕ ಸಿಂಗಲ್ ತೆಗೆದರು. 4ನೇ ಎಸೆತದಲ್ಲಿ ಮದುಶಾನ್ ರನೌಟ್. ಇದರಿಂದ ಲಂಕೆಗೆ ಲಾಭವೇ ಆಯಿತು. ಅಸಲಂಕ ಅವರಿಗೆ ಸ್ಟ್ರೈಕ್ ಸಿಕ್ಕಿತು. 5ನೇ ಎಸೆತವನ್ನು ಬೌಂಡರಿಗೆ ಅಟ್ಟಿದರು. ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಇದನ್ನು ಓಡಿಯೇ ಗಳಿಸಿದರು. ಪಾಕಿಸ್ಥಾನ ಕೂಟದಿಂದ ಹೊರಬಿತ್ತು.
ಮಳೆಯಿಂದಾಗಿ ಈ ಪಂದ್ಯವನ್ನು 42 ಓವರ್‌ಗಳಿಗೆ ಇಳಿಸಲಾಗಿತ್ತು. ಪಾಕಿಸ್ಥಾನದ ಗಳಿಕೆ 7ಕ್ಕೆ 252 ರನ್. ಡಕ್‌ವರ್ತ್-ಲೂಯಿಸ್ ನಿಯಮದಂತೆ ಶ್ರೀಲಂಕಾಕ್ಕೂ 252 ರನ್ ಗುರಿಯೇ ಲಭಿಸಿತ್ತು. ಅದು 8 ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿತು. ಪಂದ್ಯ ಮುಗಿಯುವಾಗ ರಾತ್ರಿ ಒಂದು ಗಂಟೆ!
ಕುಸಲ್ ಮೆಂಡಿಸ್ 91, ಸದೀರ ಸಮರವಿಕ್ರಮ 48, ಚರಿತ ಅಸಲಂಕ ಅಜೇಯ 49 ರನ್ ಮಾಡಿ ಲಂಕೆಯನ್ನು ದಡ ಸೇರಿಸಿದರು. ಪಾಕಿಸ್ಥಾನ ಪರ ಇಫ್ತಿಖಾರ್ ಅಹ್ಮದ್ 50ಕ್ಕೆ 3, ಶಾಹೀನ್ ಶಾ ಅಫ್ರಿದಿ 52ಕ್ಕೆ 2 ವಿಕೆಟ್ ಉರುಳಿಸಿದರು.
ಪಂದ್ಯದ ಬಳಿಕ ಮಾತಾಡಿದ ನಾಯಕ ಬಾಬರ್ ಆಜಂ, ಶ್ರೀಲಂಕಾ ನಮಗಿಂತ ಚೆನ್ನಾಗಿ ಆಡಿತು ಎಂದರು. “ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ನಾವು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದೆವು. ಇದರಿಂದಾಗಿ ಸೋಲು ಕಾಣಬೇಕಾಯಿತು. ಜಮಾನ್ ಖಾನ್ ಮೇಲೆ ನಂಬಿಕೆ ಇದ್ದುದರಿಂದ ಅಂತಿಮ ಓವರ್ ದಾಳಿಗಿಳಿಸಿದೆವು. ಅಫ್ರಿದಿಗೆ “ಸೆಕೆಂಡ್ ಲಾಸ್ಟ್ ಓವರ್’ ಮೀಸಲಿಟ್ಟೆವು. ಆದರೆ ಅದೃಷ್ಟ ಕೈಕೊಟ್ಟಿತು’ ಎಂಬುದಾಗಿ ಬಾಬರ್ ಆಜಂ ಹೇಳಿದರು.