Advertisement
ಭಾರತದ ಸೂಪರ್-4 ಪ್ರವೇಶಕ್ಕೆ ಈ ಪಂದ್ಯ ನಿರ್ಣಾಯಕ. ರೋಹಿತ್ ಪಡೆಗೆ ಇಲ್ಲಿ ಗೆಲುವು ಅನಿವಾರ್ಯ. ಪಂದ್ಯ ರದ್ದುಗೊಂಡರೂ ನಮ್ಮ ತಂಡಕ್ಕೆ ಮುಂದಿನ ಸುತ್ತಿನ ಬಾಗಿಲು ತೆರೆಯುತ್ತದೆ. ಆದರೆ ಯಾವ ಕಾರಣಕ್ಕೂ ನೇಪಾಲಕ್ಕೆ ಸೋಲಬಾರದು; ಅಂಥ ಸಾಧ್ಯತೆಯೂ ಇಲ್ಲ, ಬಿಡಿ.
ಪಾಕಿಸ್ಥಾನ ವಿರುದ್ಧ ಭಾರತ 266 ರನ್ ಗಳಿಸಿತಾದರೂ ಅಗ್ರ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆ ಚಿಂತೆಗೀಡು ಮಾಡಿದೆ. ವಿಶ್ವಕಪ್ ಕ್ಷಣಗಣನೆ ಆರಂಭ ಗೊಂಡ ಈ ಹೊತ್ತಿನಲ್ಲಿ ರೋಹಿತ್ ಶರ್ಮ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ ಸಾಲು ಸಾಲಾಗಿ ಕೈಕೊಟ್ಟಿರುವುದು ಶುಭ ಲಕ್ಷಣವಂತೂ ಅಲ್ಲ. ಪಾಕ್ ವಿರುದ್ಧ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಕ್ರೀಸ್ ಆಕ್ರಮಿಸಿಕೊಳ್ಳದೇ ಹೋಗಿದ್ದರೆ ಭಾರತದ ಕತೆ ಗಂಡಾಂತರವಾಗುತ್ತಿತ್ತು. ಪಾಕ್ ಭಾರತಕ್ಕಿಂತಲೂ ಉತ್ತಮವಾದ ಬೌಲಿಂಗ್ ಹಾಗೂ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡ. ಹೀಗಾಗಿ ಪಂದ್ಯ ಪೂರ್ತಿ ನಡೆದದ್ದೇ ಆದಲ್ಲಿ ಫಲಿತಾಂಶ ಏನಾಗುತ್ತಿತ್ತೋ ಹೇಳಲಾಗದು. ಅಕಸ್ಮಾತ್ ಭಾರತ ಸೋತದ್ದೇ ಆದಲ್ಲಿ ನೇಪಾಲ ವಿರುದ್ಧ ಮಾಡು-ಮಡಿ ಸ್ಥಿತಿ ಎದುರಾಗುತ್ತಿತ್ತು.
Related Articles
Advertisement
ರಕ್ಷಣಾತ್ಮಕ ತಂತ್ರವನ್ನು ಕೈಬಿಟ್ಟು ಮುನ್ನುಗ್ಗಿ ಬಾರಿಸಿದರೆ ರನ್ ಪೇರಿಸ ಬಹುದು, ಎದುರಾಳಿ ಬೌಲರ್‌ಗಳಿಗೆ ಬೆವರಿಳಿಸಬಹುದು ಎಂಬುದನ್ನು ಇಶಾನ್ ಕಿಶನ್ ಮತ್ತು ಪಾಂಡ್ಯ ತೋರಿಸಿಕೊಂಡಿದ್ದಾರೆ. ಎಲ್ಲರೂ ಸ್ಫೋಟಕ ಆಟಕ್ಕೆ ಮುಂದಾಗಬೇಕೆಂದೇನೂ ಇಲ್ಲ. ಇಬ್ಬರಲ್ಲೊಬ್ಬರು ಬೀಸಲಾರಂಭಿಸಿದರೂ ಸಾಕು. ಆದರೆ ಅಗ್ರ ಕ್ರಮಾಂಕದ ವೈಫಲ್ಯದಿಂದ ಮಧ್ಯಮ ಸರದಿ ಮೇಲೆ ಒತ್ತಡ ಬಿದ್ದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟ. ಅದೃಷ್ಟವಶಾತ್ ಪಾಕ್ ವಿರುದ್ಧ ಇಂಥ ಸ್ಥಿತಿ ಎದುರಾಗಲಿಲ್ಲ.
ಭಾರತದ ಬೌಲಿಂಗ್ ಸಾಮರ್ಥ್ಯವನ್ನು ಅರಿಯಲಾಗದಿದ್ದುದು ನಿರಾಸೆಯ ಸಂಗತಿ. ಹಾಗೆಯೇ ಪಾಕ್ ಎದುರಿನ ಮಹ ತ್ವದ ಮುಖಾಮುಖೀಗೆ ಮೊಹ ಮ್ಮದ್ ಶಮಿ ಅವರಂಥ ಅನುಭವಿ ಬೌಲರ್‌ನನ್ನು ಕೈಬಿಟ್ಟದ್ದು ಅಚ್ಚರಿ ಹಾಗೂ ಅರ್ಥವಾಗದ ಸಂಗತಿ!
ನೇಪಾಲಕ್ಕೊಂದು ಅನುಭವಲೆಗ್ಸ್ಪಿನ್ನರ್ ಸಂದೀಪ್ ಲಮಿಚಾನೆ, ನಾಯಕ ರೋಹಿತ್ ಪೌದೆಲ್ ನೇಪಾಲದ ದೊಡ್ಡ ಭರವಸೆಗಳಾಗಿದ್ದಾರೆ. ಉಳಿದಂತೆ ಇಲ್ಲಿ ಗಮನಾರ್ಹ ಹೆಸರುಗಳು ಕಾಣಿಸುತ್ತಿಲ್ಲ.ಅನನುಭವಿ ನೇಪಾಲಕ್ಕೆ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದೇ ಒಂದು ಖುಷಿಯ ಸಂಗತಿ. ಏಷ್ಯಾದ ಕ್ರಿಕೆಟ್ ಪವರ್‌ಹೌಸ್ ಎನಿಸಿದ ತಂಡಗಳೆದುರು ಆಡಿದ್ದು ನಿಜಕ್ಕೂ ಸ್ಮರಣೀಯ ಅನುಭವ. ಪುಟ್ಟ ದೇಶದ ಕ್ರಿಕೆಟ್ ಪ್ರಗತಿಯಲ್ಲಿ ಇದೊಂದು ಮೆಟ್ಟಿಲು ಎನ್ನಲಡ್ಡಿಯಿಲ್ಲ.