ದುಬೈ: ಏಶ್ಯಾ ಕಪ್ ನಲ್ಲಿ ಭಾರತದ ಗಾಯಾಳುಗಳ ಪಟ್ಟಿಗೆ ಮತ್ತೆ ಇಬ್ಬರ ಸೇರ್ಪಡೆಯಾಗಿದೆ. ಬುಧವಾರ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಾಳಾಗಿ ಹೊರಹೋದ ನಂತರ ಭಾರತಕ್ಕೆ ಮತ್ತಷ್ಟು ಆಘಾತವಾಗಿದೆ. ಆಲ್ ರೌಂಡರ್ ಅಕ್ಷರ್ ಪಟೇಲ್, ವೇಗದ ಬೌಲರ್ ಶಾರ್ದೂಲ್ ಠಾಕೂರ್ ಕೂಡಾ ಗಾಯಕ್ಕೆ ತುತ್ತಾಗಿ ಕೂಟದಿಂದಲೇ ಹೊರಬಿದ್ದಿದ್ದಾರೆ.
ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆಗೆ ಹಾರ್ದಿಕ್ ಪಾಂಡ್ಯ ಬೆನ್ನು ನೋವಿಗೆ ಸಿಲುಕಿದರು. ನಡೆಯಲೂ ಸಾಧ್ಯವಾಗದ ಅವರನ್ನು ಸ್ಟ್ರೆಚರ್ ಮೂಲಕ ಮೈದಾನದಿಂದ ಸಾಗಿಸಲಾಗಿತ್ತು.
ಈ ಮಧ್ಯೆ ಅಕ್ಷರ್ ಪಟೇಲ್ ಹೆಬ್ಬೆರಳಿನ ಗಾಯ ಮತ್ತು ಶಾರ್ದೂಲ್ ಠಾಕೂರ್ ತೊಡೆ ಸಂದು ಗಾಯದಿಂದಾಗಿ ತಂಡದಿಂದಲೇ ಹೊರಬಿದ್ದಿದ್ದಾರೆ. ಶಾರ್ದೂಲ್ ಹಾಂಕಾಂಗ್ ವಿರುದ್ದ ಆಡಿದ್ದರೂ ನೀರಸ ಪ್ರದರ್ಶನ ನೀಡಿದ್ದರು. ಅಕ್ಷರ್ ಪಟೇಲ್ ಗೆ ಅವಕಾಶ ಸಿಕ್ಕಿರಲಿಲ್ಲ.
ಮರಳಿದ ಜಡೇಜ: ಗಾಯಾಳುಗಳ ಬದಲಿಗೆ ಆಲ್ ರೌಂಡರ್ ರವೀಂದ್ರ ಜಡೇಜ, ಬೌಲರ್ ಗಳಾದ ಸಿದ್ದಾರ್ಥ ಕೌಲ್ ಮತ್ತು ದೀಪಕ್ ಚಹರ್ ತಂಡಕ್ಕೆ ಸೇರ್ಪಡೆಯಾಗಿದ್ದರೆ.
ಕುಲದೀಪ್ ಯಾದವ್ ಮತ್ತಯ ಯಜುವೇಂದ್ರ ಚಾಹಲ್ ಟೀಂ ಇಂಡಿಯಾದಲ್ಲಿ ಮಿಂಚಲು ಆರಂಭಿಸಿದ ನಂತರ ನಿಯಮಿತ ಓವರ್ ಗಳ ಕ್ರಿಕೆಟ್ ನಿಂದ ದೂರವಾಗಿದ್ದ ಜಡೇಜ ಮತ್ತೆ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಜಡೇಜ 2017ರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಕೊನೆಯ ಏಕದಿನ ಪಂದ್ಯವಾಡಿದ್ದರು.