ಪಲ್ಲೆಕೆಲೆ : ಇಲ್ಲಿ ಸೋಮವಾರ ನಡೆದ ಏಷ್ಯಾಕಪ್ ಪಂದ್ಯದಲ್ಲಿ ನಿರ್ಭೀತ ನೇಪಾಲ ತಂಡ ಸ್ಪರ್ಧಾತ್ಮಕ 230 ರನ್ ಗಳಿಸಿ ಉತ್ತಮ ಗುರಿಯನ್ನು ಭಾರತ ತಂಡದ ಮುಂದಿಟ್ಟಿದೆ.
ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನೇಪಾಲದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳ ಬೆವರಿಳಿಸಿದರು. ಇದೇ ವೇಳೆ ಫೀಲ್ಡಿಂಗ್ ವೈಫಲ್ಯವೂ ಎದ್ದು ಕಂಡಿತು. ಹುಬ್ಬೇರಿಸುವಂತೆ ಆಡಿ 9.5 ಓವರ್ ನಲ್ಲಿ 65 ರನ್ ಗಳಿಸಿದ್ದ ನೇಪಾಲ ಕುಶಾಲ್ ಭುರ್ಟೆಲ್ ಅವರ ಮೊದಲ ವಿಕೆಟ್ ಕಳೆದುಕೊಂಡಿತು. 38 ರನ್ ಗಳಿಸಿ ಭುರ್ಟೆಲ್ ಔಟಾದರು.ಆಸಿಫ್ ಶೇಖ್ 58 ರನ್ ಗಳಿಸಿ ಔಟಾದರು. ಬಲ ತೋರಿದ ನೇಪಾಲ 48.2 ಓವರ್ ಗಳಿಗೆ 230 ರನ್ ಗಳ ಗೌರವಯುತ ಮೊತ್ತ ಕಲೆಹಾಕಿತು.
ಆರಂಭಿಕ ಪಂದ್ಯದಲ್ಲಿ ಪಾಕಿಸ್ಥಾನದ ಎದುರು 104 ರನ್‌ಗಳಿಗೆ ಆಲೌಟ್ ಆಗಿದ್ದ ನೇಪಾಲ, ಇಂದು ಮೊದಲ 10 ಓವರ್‌ಗಳಲ್ಲಿ 1 ವಿಕೆಟ್‌ಗೆ 65 ರನ್ ಗಳಿಸುವ ಮೂಲಕ ಸಾಮರ್ಥ್ಯ ತೋರಿತು. 7 ನೇ ವಿಕೆಟ್ ಗೂ ಉತ್ತಮ ಜತೆಯಾದ ಆಡಿದರು. ಸೋಂಪಾಲ್ ಕಾಮಿ (55 ಎಸೆತಗಳಲ್ಲಿ 48) ಅವರು ಆಕರ್ಷಕ ಬ್ಯಾಟಿಂಗ್ ಮಾಡಿದರು. ಗುಲ್ಸನ್ ಝಾ 23, ದೀಪೇಂದ್ರ ಸಿಂಗ್ ಐರಿ 29, ರನ್ ಗಳಿಸಿ ಔಟಾದರು.
ಭಾರತದ ಪರ ಜಡೇಜಾ ಮತ್ತು ಸಿರಾಜ್ ತಲಾ ಮೂರು ವಿಕೆಟ್ ಪಡೆದರು. ಶಮಿ, ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.
ನೇಪಾಲ ವಿರುದ್ಧ ಭಾರತದ ಮಹತ್ವದ ಏಷ್ಯಾಕಪ್ ಹಣಾಹಣಿಯ ಆರಂಭದಲ್ಲಿ ಕೆಲವು ಸುಲಭ ಕ್ಯಾಚ್‌ಗಳನ್ನು ಭಾರತದ ಆಟಗಾರರು ಕೈಬಿಟ್ಟು ಟ್ರೋಲ್ ಗಳಿಗೆ ಆಹಾರವಾದರು. ಭಾರತದ ಅತ್ಯುತ್ತಮ ಮತ್ತು ಅತ್ಯಂತ ಚಾಣಾಕ್ಷ ಫೀಲ್ಡರ್‌ಗಳು ಎಂದು ಪರಿಗಣಿಸಲ್ ಪಟ್ಟಿರುವ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಮತ್ತು ವಿಕೆಟ್‌ಕೀಪರ್ ಇಶಾನ್ ಕಿಶನ್ ಮೂರು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು. ವಿಶ್ವಕಪ್ ಗೂ ಮುನ್ನ ಈ ರೀತಿ ಆಡಿದರೆ ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ನೇಪಾಲ ದುರ್ಬಲ ತಂಡವೆಂದು ಅಷ್ಟೊಂದು ಉತ್ಸಾಹ ತೋರಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಎರಡೂ ತಂಡಗಳು ಗೆದ್ದರೆ ಸೂಪರ್ 4 ಗೆ ಅರ್ಹತೆ ಪಡೆಯಲು ಸಾಧ್ಯವಿದೆ. ಆರಂಭಿಕ ಪಂದ್ಯದಲ್ಲಿ ನೇಪಾಲವು ಪಾಕಿಸ್ಥಾನದ ವಿರುದ್ಧ ಸೋತಿತು. ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿಯೊಂದಿಗಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.