ಡಂಬುಲಾ: ಏಳು ಬಾರಿಯ ಏಷ್ಯಾಕಪ್ ಚಾಂಪಿಯನ್ಸ್ ಭಾರತ ವನಿತಾ ತಂಡವು ಮತ್ತೊಂದು ಏಷ್ಯಾಕಪ್ ಫೈನಲ್ ಗೆ ಸಜ್ಜಾಗಿದೆ. ಭಾರತಕ್ಕೆ ಆತಿಥೇಯ ಶ್ರೀಲಂಕಾ ಎದುರಾಗಿದೆ. ಸತತ ಪಂದ್ಯಗಳನ್ನು ಗೆದ್ದು ಫೈನಲ್ ಗೇರಿರುವ ಹರ್ಮನ್ ಪ್ರೀತ್ ಬಳಗವು ತನ್ನ 9ನೇ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಗೆದ್ದು 8ನೇ ಬಾರಿಗೆ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ.
ಡಂಬುಲಾದ ರಣಗಿರಿ ಡಂಬುಲಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಈ ಪಂದ್ಯಕ್ಕೆ ಭಾರತ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಆದರೆ ಲಂಕಾ ತಂಡದಲ್ಲಿ ಒಂದು ಬದಲಾವಣೆಯಾಗಿದ್ದು, ಅಚಿನಿ ಕುಲಸೂರ್ಯ ಬದಲಿಗೆ ಸಚಿನಿ ನಿಸಂಸಲಾ ಆಡಲಿದ್ದಾರೆ.
ಏಷ್ಯಾಕಪ್ ಫೈನಲ್ ನಲ್ಲಿ ಭಾರತ ಮತ್ತು ಶ್ರೀಲಂಕಾ ಇದುವರೆಗೆ ಐದು ಬಾರಿ ಮುಖಾಮುಖಿಯಾಗಿವೆ. ಎಲ್ಲಾ ಬಾರಿಯೂ ಭಾರತ ತಂಡವು ಗೆಲುವು ಸಾಧಿಸಿದೆ.
ಭಾರತ ಒಂದು ತಂಡವಾಗಿ ಯಶಸ್ಸು ಕಾಣುತ್ತ ಬಂದರೆ, ಶ್ರೀಲಂಕಾ ಮಾತ್ರ ಏಕವ್ಯಕ್ತಿಯನ್ನೇ ಅವಲಂಬಿಸಿದೆ. ಅದು ಬೇರೆ ಯಾರೂ ಅಲ್ಲ, ನಾಯಕಿ ಚಾಮರಿ ಅತ್ತಪಟ್ಟು. ಒಂದು ಶತಕ ಸೇರಿದಂತೆ 243 ರನ್ ಪೇರಿಸಿದ ಚಾಮರಿ ಅಮೋಘ ಫಾರ್ಮ್ನಲ್ಲಿದ್ದಾರೆ. ಇವರನ್ನು ಹೊರತುಪಡಿಸಿ ಉಳಿದವರ್ಯಾರೂ ನೂರರ ಗಡಿ ತಲುಪಿಲ್ಲ. 91 ರನ್ ಮಾಡಿದ ರಶ್ಮಿ ಗುಣರತ್ನೆ ಅವರದೇ ಹೆಚ್ಚಿನ ಗಳಿಕೆ. ಸೆಮಿಫೈನಲ್‌ನಲ್ಲಿ ಪಾಕ್ ವಿರುದ್ಧ ಚಾಮರಿ ಬ್ಯಾಟಿಂಗ್ ವಿಸ್ತರಿಸದೆ ಹೋಗಿದ್ದರೆ ಲಂಕಾ ಫೈನಲ್‌ನಲ್ಲಿ ಇರುತ್ತಿರಲಿಲ್ಲ!
ಶ್ರೀಲಂಕಾ : ವಿಶ್ಮಿ ಗುಣರತ್ನೆ, ಚಾಮರಿ ಅತ್ತಪಟ್ಟು (ನಾ), ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವನಿ (ವಿ.ಕೀ), ಹಾಸಿನಿ ಪೆರೇರಾ, ಸುಗಂದಿಕಾ ಕುಮಾರಿ, ಇನೋಶಿ ಪ್ರಿಯದರ್ಶನಿ, ಉದೇಶಿಕಾ ಪ್ರಬೋಧನಿ, ಸಚಿನಿ ನಿಸಂಸಲಾ
ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಉಮಾ ಚೆಟ್ರಿ, ಹರ್ಮನ್‌ಪ್ರೀತ್ ಕೌರ್ (ನಾ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿ.ಕೀ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ತನುಜಾ ಕನ್ವರ್, ರೇಣುಕಾ ಠಾಕೂರ್ ಸಿಂಗ್