Advertisement

Asia Cup Cricket: ಭಾರತದ ನಾರಿಯರಿಗೆ ಸಾಟಿ ಯಾರು!

11:12 PM Jul 16, 2024 | Team Udayavani |

ಹೊಸದಿಲ್ಲಿ: ವನಿತೆಯರ 9ನೇ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಕ್ಷಣಗಣನೆ ಮೊದಲ್ಗೊಂಡಿದೆ. ನಾಡಿದ್ದು ಶುಕ್ರವಾರದಿಂದ ಮೊದಲ್ಗೊಂಡು ಜು. 28ರ ತನಕ ಶ್ರೀಲಂಕಾದ ಡಂಬುಲದಲ್ಲಿ ಟಿ20 ಮಾದರಿಯಲ್ಲಿ ಕೂಟ ನಡೆಯ ಲಿದೆ. ಈ ಹಿನ್ನೆಲೆಯಲ್ಲಿ ಹಿಂದಿನ 8 ಏಷ್ಯಾ ಕಪ್‌ಗ್ಳ ಕಿರು ಅವಲೋಕನ ಮಾಡಲಾಗಿದೆ. ಈ 8 ಕೂಟಗಳಲ್ಲಿ ಭಾರತ 7 ಸಲ ಚಾಂಪಿಯನ್‌ ಆಗುವ ಮೂಲಕ ಪ್ರಭುತ್ವ ಸ್ಥಾಪಿಸಿರುವುದು ವಿಶೇಷ.

Advertisement

2004: ಏಕದಿನ ಸರಣಿ

ವನಿತಾ ಏಷ್ಯಾ ಕಪ್‌ ಕ್ರಿಕೆಟ್‌ ಮೊದ ಲ್ಗೊಂಡಿದ್ದು 2004ರಲ್ಲಿ. ಆಗ ಇದು ಏಕದಿನ ಮಾದರಿಯಲ್ಲಿತ್ತು. ಪಾಲ್ಗೊಂ ಡಿದ್ದು ಎರಡೇ ತಂಡಗಳು, ಭಾರತ ಮತ್ತು ಆತಿಥೇಯ ಶ್ರೀಲಂಕಾ. ಇತ್ತಂಡಗಳು 5 ಪಂದ್ಯಗಳ ಸರಣಿಯನ್ನಾಡಿದವು. ಭಾರತ ಎಲ್ಲ 5 ಪಂದ್ಯಗಳನ್ನು ಜಯಿಸಿ ಏಷ್ಯಾ ಕಪ್‌ ಚಾಂಪಿಯನ್‌ ಎನಿಸಿತು.

2005-06: ಪಾಕ್‌ ಆತಿಥ್ಯ

ದ್ವಿತೀಯ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಆತಿಥ್ಯ ಪಾಕಿಸ್ಥಾನದ ಕರಾಚಿ ಪಾಲಾಯಿತು. ಪಾಕ್‌ ವನಿತಾ ತಂಡ ಕೂಡ ಪಾಲ್ಗೊಂಡಿತು.  ಫೈನಲ್‌ನಲ್ಲಿ ಶ್ರೀಲಂಕಾವನ್ನು 97 ರನ್ನುಗಳಿಂದ ಮಣಿಸಿದ ಭಾರತ ಮತ್ತೆ ಚಾಂಪಿಯನ್‌ ಆಗಿ ಮೂಡಿಬಂತು.

Advertisement

2006: ಭಾರತ ಹ್ಯಾಟ್ರಿಕ್‌

2006ರಲ್ಲಿ ಭಾರತ ಮೊದಲ ಸಲ ಆತಿಥ್ಯ ವಹಿಸಿತು. ಪಂದ್ಯಾವಳಿಯ ತಾಣ ಜೈಪುರ. ಹಿಂದಿನ ಮಾದರಿಯಲ್ಲೇ ನಡೆದ ಈ ಕೂಟದ ಫೈನಲ್‌ನಲ್ಲಿ ಮತ್ತೆ ಭಾರತ-ಶ್ರೀಲಂಕಾ ಎದುರಾದವು. ಭಾರತ 8 ವಿಕೆಟ್‌ಗಳಿಂದ ಗೆದ್ದು ಹ್ಯಾಟ್ರಿಕ್‌ ಸಾಧಿಸಿತು.

2008: ಭಾರತ ಅಜೇಯ

4ನೇ ವನಿತಾ ಏಷ್ಯಾ ಕಪ್‌ ಪಂದ್ಯಾವಳಿ 2008ರಲ್ಲಿ ಶ್ರೀಲಂಕಾದಲ್ಲಿ ಏರ್ಪಟ್ಟಿತು. ಫೈನಲ್‌ನಲ್ಲಿ ಬಲಿಷ್ಠ ಭಾರತಕ್ಕೆ ಮತ್ತೆ ಶ್ರೀಲಂಕಾ ಎದುರಾಯಿತು. ಭಾರತ 177 ರನ್ನುಗಳ ಬೃಹತ್‌ ಅಂತರದಿಂದ ಗೆದ್ದು ಸತತ 4ನೇ ಸಲ ಟ್ರೋಫಿ ಮೇಲೆ ಹಕ್ಕು ಚಲಾಯಿಸಿತು.

2012: ಟಿ20 ಮಾದರಿ

ಇಲ್ಲಿಯ ತನಕ ಏಕದಿನ ಮಾದರಿ ಯಲ್ಲಿ ನಡೆಯುತ್ತಿದ್ದ ಏಷ್ಯಾ ಕಪ್‌ ಪಂದ್ಯಾವಳಿ, 2012ರಿಂದ ಟಿ20ಗೆ ಪರಿವರ್ತನೆಗೊಂಡಿತು. ಇದರ ಆತಿಥ್ಯ ವಹಿಸಿದ್ದು ಚೀನದ ಗ್ವಾಂಗ್‌ಝೂ. ಇಲ್ಲಿಯೂ ಭಾರತವೇ ಕಪ್‌ ಎತ್ತಿತು. “ಫಾರ್‌ ಎ ಚೇಂಜ್‌’ ಎಂಬಂತೆ, ಫೈನಲ್‌ನಲ್ಲಿ ಭಾರತಕ್ಕೆ ಎದುರಾದ ತಂಡ ಶ್ರೀಲಂಕಾ ಅಲ್ಲ, ಪಾಕಿಸ್ಥಾನ. ಗೆಲುವಿನ ಅಂತರ 19 ರನ್‌.

2016: ಡಬಲ್‌ ಹ್ಯಾಟ್ರಿಕ್‌

6ನೇ ಏಷ್ಯಾ ಕಪ್‌ ಪಂದ್ಯಾವಳಿಯನ್ನು ಥಾಯ್ಲೆಂಡ್‌ನ‌ಲ್ಲಿ ಆಡಲಾಯಿತು. ಮತ್ತೂಮ್ಮೆ ಭಾರತ-ಪಾಕಿಸ್ಥಾನ ತಂಡ ಗಳು ಫೈನಲ್‌ನಲ್ಲಿ ಎದುರಾದವು. 17 ರನ್ನುಗಳಿಂದ ಗೆದ್ದ ಭಾರತ ಪ್ರಶಸ್ತಿಗಳ ಡಬಲ್‌ ಹ್ಯಾಟ್ರಿಕ್‌ ಸಾಧಿಸಿತು.

2018: ಬಾಂಗ್ಲಾ ವಿಕ್ರಮ

ಮಲೇಷ್ಯಾದಲ್ಲಿ 7ನೇ ಟೂರ್ನಿ ಏರ್ಪಟ್ಟಿತು. 6 ಬಾರಿಯ ಚಾಂಪಿ ಯನ್‌ ಭಾರತಕ್ಕೆ ಇಲ್ಲಿ ಮೊದಲ ಸಲ ಸೋಲಿನ ಬಿಸಿ ತಟ್ಟಿತು. ಭಾರತ ತಂಡ ಫೈನಲಿಗೇನೋ ಬಂದಿತ್ತು. ಆದರೆ ಎದುರಾಳಿ ಬಾಂಗ್ಲಾದೇಶದ ಕೈಯಲ್ಲಿ 3 ವಿಕೆಟ್‌ ಸೋಲನುಭವಿಸಿ ಪ್ರಶಸ್ತಿಯಿಂದ ವಂಚಿತವಾಯಿತು.

2022: ಮತ್ತೆ ಭಾರತ

ಕೋವಿಡ್‌ ಕಾರಣ 2020ರ ಟೂರ್ನಿ ನಡೆಯಲಿಲ್ಲ. 2022ರಲ್ಲಿ ಪಂದ್ಯಾವಳಿ ಮುಂದುವರಿಯಿತು. ಬಾಂಗ್ಲಾದೇಶ ಆತಿಥ್ಯ ವಹಿಸಿತ್ತು. ಆದರೆ ಹಾಲಿ ಚಾಂಪಿಯನ್‌ ಆಗಿದ್ದ ಬಾಂಗ್ಲಾ ಫೈನಲಿಗೇ ಬರಲಿಲ್ಲ. ಮತ್ತೆ ಭಾರತ-ಶ್ರೀಲಂಕಾ ಎದುರಾದವು. 8 ವಿಕೆಟ್‌ಗಳಿಂದ ಗೆದ್ದ ಭಾರತ 7ನೇ ಸಲ ಕಪ್‌ ಎತ್ತಿತು.

Advertisement

Udayavani is now on Telegram. Click here to join our channel and stay updated with the latest news.

Next