ಕೊಲಂಬೊ: ಇಲ್ಲಿನ ಪ್ರೇಮದಾಸ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಬೌಲರ್ ಮೊಹಮ್ಮದ್ ಸಿರಾಜ್ ಮೆರೆದಾಡಿದ್ದಾರೆ. ಪಂದ್ಯ ಆರಂಭವಾಗುತ್ತಿದ್ದಂತೆ ಬೆಂಕಿ ಚೆಂಡುಗಳ ಮಳೆಗರೆದ ಸಿರಾಜ್ ಲಂಕಾ ಪಡೆಯ ಬುಡ ಅಲುಗಾಡಿಸಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಶ್ರೀಲಂಕಾ ಬ್ಯಾಟರ್ ಗಳು ಪರದಾಡುತ್ತಿದ್ದಾರೆ. ಬುಮ್ರಾ ಮತ್ತು ಸಿರಾಜ್ ದಾಳಿ ಎದುರಿಸಲು ಹೆಣಗಾಡುತ್ತಿರುವ ಲಂಕಾ ಕೇವಲ 12 ರನ್ ಗೆ ಆರು ವಿಕೆಟ್ ಕಳೆದುಕೊಂಡಿದೆ. ಅದರಲ್ಲಿ ಐದು ವಿಕೆಟ್ ಗಳು ಸಿರಾಜ್ ಪಾಲಾಗಿದೆ.
ಪಂದ್ಯದ ಮೊದಲ ವಿಕೆಟ್ ಕುಸಾಲ್ ಪೆರೆರಾ ರೂಪದಲ್ಲಿ ಬುಮ್ರಾ ಪಾಲಾಯಿತು. ತನ್ನ ಮೊದಲ ಓವರ್ ಮೇಡನ್ ಮಾಡಿದ ಸಿರಾಜ್ ಮುಂದಿನ ಓವರ್ ನಲ್ಲಿ ಬರೋಬ್ಬರಿ ನಾಲ್ಕು ವಿಕೆಟ್ ಪಡೆದರು. ಪತ್ತುಮ್ ನಿಸಾಂಕಾ, ಸದೀರಾ ಸಮರವಿಕ್ರಮ, ಚರಿತ ಅಸಲಂಕಾ ಮತ್ತು ಧನಂಜಯ ಡಿಸಿಲ್ವಾ ಅವರನ್ನು ಸಿರಾಜ್ ಐದು ಎಸೆತಗಳ ಅಂತರದಲ್ಲಿ ಔಟ್ ಮಾಡಿದರು. ತನ್ನ ಮುಂದಿನ ಓವರ್ ನಲ್ಲಿ ನಾಯಕ ದಸುನ್ ಶನಕಾ ಅವರಿಗೆ ಅದ್ಭುತ ಎಸೆತದಿಂದ ಬೌಲ್ಡ್ ಮಾಡಿದರು.
ಇದೇ ವೇಳೆ ಸಿರಾಜ್ ಒಂದೇ ಓವರ್ ನಲ್ಲಿ ನಾಲ್ಕು ವಿಕೆಟ್‌ಗಳನ್ನು ಉರುಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಮತ್ತು ಮೊದಲ ಭಾರತೀಯರಾಗಿದ್ದಾರೆ.
ಇದಕ್ಕೂ ಮೊದಲು, 2003 ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾದ ಬೌಲರ್ ಚಮಿಂದಾ ವಾಸ್ ಒಂದು ಓವರ್ ನಲ್ಲಿ ನಾಲ್ಕು ವಿಕೆಟ್ ಗಳನ್ನು ಪಡೆದಿದ್ದರು.