Advertisement

ಲಂಕೆಯಲ್ಲಿ ನಡೆದೀತೇ ಏಷ್ಯಾ ಕಪ್‌ ಕ್ರಿಕೆಟ್‌?ಬಾಂಗ್ಲಾ ಮೀಸಲು ತಾಣ

11:59 PM Jul 12, 2022 | Team Udayavani |

ಕೊಲಂಬೊ: ಆಗಸ್ಟ್‌ ನಲ್ಲಿ ನಡೆಯುವ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಆತಿಥ್ಯಕ್ಕೆ ತಾನು ಸಿದ್ಧ ಎನ್ನುತ್ತಿದೆ ಶ್ರೀಲಂಕಾ. ಆದರೆ ಅಲ್ಲಿನ ಹದಗೆಟ್ಟ ಆರ್ಥಿಕ ಸ್ಥಿತಿ, ಇತ್ತೀಚಿನ ಸಾರ್ವಜನಿಕ ದಂಗೆಯನ್ನೆಲ್ಲ ಗಮನಿಸಿದಾಗ ಸಹಜವಾಗಿಯೇ ಈ ಕ್ರಿಕೆಟ್‌ ಕೂಟ ದ್ವೀಪರಾಷ್ಟ್ರದಲ್ಲಿ ನಡೆದೀತೇ ಎಂಬ ಪ್ರಶ್ನೆ ಮೂಡಿದೆ. ಹೀಗಾಗಿ “ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌’ (ಎಸಿಸಿ) ಬಾಂಗ್ಲಾದೇಶವನ್ನು ಮೀಸಲು ತಾಣವಾಗಿ ಇರಿಸಿರುವ ಬಗ್ಗೆ ವರದಿಯಾಗಿದೆ.

Advertisement

ಶ್ರೀಲಂಕಾ ಆತಿಥ್ಯದ ವಿಷಯದಲ್ಲಿ ಎಸಿಸಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ; ಹೀಗಾಗಿ ಪರಿಸ್ಥಿತಿಯನ್ನು ಮತ್ತೆ ಅವಲೋಕಿಸಿ ಈ ತಿಂಗಳ ಅಂತ್ಯದಲ್ಲಿ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಆತಿಥ್ಯಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ ಎನ್ನಲಾಗಿದೆ.

ಕ್ರಿಕೆಟ್‌ಗೆ ಧಕ್ಕೆ ಇಲ್ಲ…
ಆದರೆ ದೇಶವೇ ದಿವಾಳಿಯೆದ್ದು ಹೋದರೂ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಪ್ರವಾಸಿ ಆಸ್ಟ್ರೇಲಿಯ ಎದುರಿನ ಕ್ರಿಕೆಟ್‌ ಸರಣಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದನ್ನು ಮರೆಯುವಂತಿಲ್ಲ. ಇದು 3 ಟಿ20, 5 ಏಕದಿನ ಹಾಗೂ 2 ಟೆಸ್ಟ್‌ ಪಂದ್ಯಗಳನ್ನೊಳಗೊಂಡ ಪೂರ್ಣ ಪ್ರಮಾಣದ ಸರಣಿಯಾಗಿತ್ತು. ಆದರೆ ಅಂತಿಮ ಟೆಸ್ಟ್‌ ಪಂದ್ಯದ ವೇಳೆ ಪ್ರತಿಭಟನ ಕಾರರು ಗಾಲೆ ಸ್ಟೇಡಿಯಂಗೂ ಲಗ್ಗೆ ಇರಿಸಿದ್ದನ್ನು ಕಡೆಗಣಿಸುವಂತಿಲ್ಲ. ಈ ಘಟನೆಯನ್ನು ಎಸಿಸಿ ತುಸು ಗಂಭೀರವಾಗಿಯೇ ಪರಿಗಣಿಸಿದೆ.

ಇಲ್ಲಿ ಗಮನಿಸಬೇಕಾದ ಇನ್ನೂ ಒಂದು ಅಂಶವಿದೆ. ಇಂಥ ಕಠಿನ ಸ್ಥಿತಿಯಲ್ಲೂ ಇಲ್ಲಿಗೆ ಬಂದು ಕ್ರಿಕೆಟ್‌ ಸರಣಿ ಆಡಿದ ಆಸ್ಟ್ರೇಲಿಯಕ್ಕೆ ಲಂಕಾ ಜನತೆ ಕೃತಜ್ಞತೆ ಸಲ್ಲಿಸಿದ್ದಾರೆ. ಹೀಗಾಗಿ ಲಂಕೆಯಲ್ಲಿ ಯಾವುದೇ ಸ್ಥಿತಿ ಇದ್ದರೂ ಕ್ರಿಕೆಟ್‌ ಪಂದ್ಯಾವಳಿಗೇನೂ ಆತಂಕ ಇಲ್ಲ ಎಂಬ ಸೂಚನೆಯೊಂದು ರವಾನಿಸಲ್ಪಟ್ಟಿದೆ. ಆದರೆ ಇದನ್ನು ಸಂಘಟಿಸುವುದು ಎಸಿಸಿಯಾದ್ದರಿಂದ ಅದು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.

6 ತಂಡಗಳ ಪಂದ್ಯಾವಳಿ
ಇದು 6 ತಂಡಗಳ ನಡುವಿನ ಟಿ20 ಮಾದರಿ ಪಂದ್ಯಾವಳಿ. ಶ್ರೀಲಂಕಾ, ಭಾರತ, ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದೊಂದಿಗೆ ಅರ್ಹತಾ ತಂಡವೊಂದು ಪಾಲ್ಗೊಳ್ಳಲಿದೆ. ಯುಎಇ, ಕುವೈಟ್‌, ಸಿಂಗಾಪುರ ಮತ್ತು ಹಾಂಕಾಂಗ್‌ ಅರ್ಹತಾ ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next