ನವದೆಹಲಿ: ಐಎಎಸ್ ಮಾಜಿ ಅಧಿಕಾರಿ, ಉದ್ಯಮಿ, ಆಡಳಿತಾಧಿಕಾರಿಯಾಗಿ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದ ಅಶ್ಚಿನಿ ವೈಷ್ಣವ್ ಅವರು ಗುರುವಾರ (ಜುಲೈ 08) ರೈಲ್ವೆ ಹಾಗೂ ನೂತನ ಮಾಹಿತಿ ತಂತ್ರಜ್ಞಾನ (ಐಟಿ) ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇದನ್ನೂ ಓದಿ:‘ನಾನು ಚಪ್ಪಲಿಯಲ್ಲಿ ಹೊಡೆದೆ ಎಂದು ರಾಯರ ಮೇಲೆ ಆಣೆ ಮಾಡಿ ಹೇಳಲಿ’
ಭಾರತೀಯ ಇತಿಹಾಸದಲ್ಲಿ ಮೊದಲ ಬಾರಿಗೆ ರೈಲ್ವೆ ವಲಯದಲ್ಲಿ ಖಾಸಗಿ ರೈಲುಗಳ ಕಾರ್ಯಾಚರಣೆ ಯಶಸ್ವಿಗೊಳಿಸುವ ಬಹು ದೊಡ್ಡ ಸವಾಲು ನೂತನ ರೈಲ್ವೆ ಸಚಿವರಿಗಿದೆ. ಈ ಹಿಂದಿನ ಸಚಿವ ಪಿಯೂಷ್ ಗೋಯಲ್ ಅವರು ಪ್ರಾರಂಭಿಸಿದ್ದ ಕೇಡರ್ ಪುನರಚನೆಯಲ್ಲಿಯೂ ವೈಷ್ಣವ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಒಡಿಶಾ ರಾಜ್ಯಸಭಾ ಸದಸ್ಯರಾಗಿರುವ ಅಶ್ವಿನಿ ವೈಷ್ಣವ್ ಅವರು ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರ ಜತೆ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ ಮತ್ತು ದೂರದೃಷ್ಟಿಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಅಶ್ವಿನಿ ವೈಷ್ಣವ್ ಅವರು ಖರಗ್ ಪುರ್ ಐಐಟಿಯಿಂದ ಎಂಟೆಕ್ ಪದವಿ ಪಡೆದಿದ್ದು, ಪೆನ್ಸಿಲ್ವೆನಿಯಾ ವಿವಿಯಿಂದ ಎಂಬಿಎ ಪದವಿ ಗಳಿಸಿದ್ದಾರೆ. 1994ರ ಬ್ಯಾಚ್ ನ ಐಎಎಸ್ ಅಧಿಕಾರಿ ಸುಮಾರು 15 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು.