ಬೆಂಗಳೂರು: ಕೃಷಿ, ಪಶುಸಂಗೋಪನೆ, ಆರೋಗ್ಯ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಜೈವಿಕ ತಂತ್ರಜ್ಞಾನವು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇಂಧನ ಕ್ಷೇತ್ರದಲ್ಲಿ ಈಗಿರುವ ಆಮದಿನ ಹೊರೆಯನ್ನು ತಗ್ಗಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತಿದ್ದು, ಇನ್ನು ನಾಲ್ಕು ವರ್ಷಗಳಲ್ಲಿ ರಾಜ್ಯವು ಈ ಕ್ಷೇತ್ರದಲ್ಲಿ 50 ಶತಕೋಟಿ ಡಾಲರ್ ವಹಿವಾಟು ನಡೆಸುವ ಮಟ್ಟಕ್ಕೆ ಮುಟ್ಟಲಿದೆ ಎಂದು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಏಬಲ್’ (ಅಸೋಸಿಯೇಶನ್ ಆಫ್ ಬಯೋಎಕಾನಮಿ ಲೆಡ್ ಎಂಟರ್-ಪ್ರೈಸಸ್) ಸಂಘಟನೆಯು ನಗರದಲ್ಲಿ ಏರ್ಪಡಿಸಿದ್ದ `ಜೈವಿಕ-ಆರ್ಥಿಕತೆ 2025 ಮತ್ತು ಅದರಾಚೆಗೆ’ ಕಾರ್ಯಕ್ರಮದಲ್ಲಿ ಮಂಗಳವಾರ ಅವರು ಮಾತನಾಡಿದರು.
ಜೈವಿಕ ಆರ್ಥಿಕತೆಯ ಕ್ಷೇತ್ರದಲ್ಲಿ ರಾಜ್ಯದ ವಹಿವಾಟು ಸದ್ಯಕ್ಕೆ 24.4 ಶತಕೋಟಿ ಡಾಲರುಗಳಷ್ಟಿದ್ದು, ಇದು ದೇಶದ ವಹಿವಾಟಿನ ಶೇ.33ರಷ್ಟಾಗಿದೆ. ಮುಂದಿನ ದಿನಗಳಲ್ಲಿ ಜೈವಿಕ ಮರುಬಳಕೆ, ಜೈವಿಕ ಇಂಧನ, ಜೈವಿಕ ವಿದ್ಯುತ್ ಮತ್ತು ಪರಿಸರಸ್ನೇಹಿ ರಾಸಾಯನಿಕಗಳು ಬಹುದೊಡ್ಡ ಉದ್ಯಮ ವಲಯಗಳಾಗಲಿವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಜೈವಿಕ ಆರ್ಥಿಕತೆಯ ಪಾಲನ್ನು ಹೆಚ್ಚಿಸಲು ಜೈವಿಕ ಕೃಷಿ ಮತ್ತು ಪಶುಸಂಗೋಪನೆ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಆಕರ್ಷಿಸಲು ಸರಕಾರವು ಚಿಂತಿಸುತ್ತಿದೆ. ಇದರ ಜತೆಗೆ ಸಮುದ್ರಾಧಾರಿತ ಜೈವಿಕ ತಂತ್ರಜ್ಞಾನ, ಬಯೋ-ಐಟಿ ಮತ್ತು ಇನ್ಫಾರ್ಮ್ಯಾಟಿಕ್ಸ್ ವಲಯಗಳತ್ತಲೂ ಗಮನ ಹರಿಸಲಾಗುವುದು ಎಂದು ಅವರು ಹೇಳಿದರು.
ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಂತೂ ಲಸಿಕೆ ಅಭಿವೃದ್ಧಿ ಕ್ಷಿಪ್ರ ಗತಿಯಲ್ಲಿ ಸಾಧ್ಯವಾಗಲು ಜೈವಿಕ ತಂತ್ರಜ್ಞಾನವೇ ಕಾರಣವಾಗಿದೆ. ಇದರಿಂದಾಗಿ ದೇಶದಲ್ಲಿ 100 ಕೋಟಿಗೂ ಹೆಚ್ಚು ಜನರಿಗೆ ಸಮರೋಪಾದಿಯಲ್ಲಿ ಲಸಿಕೆ ಹಾಕಿ, ಜೀವ ಉಳಿಸಲು ಸಾಧ್ಯವಾಯಿತು ಇದರಲ್ಲಿ ರಾಜ್ಯದಲ್ಲಿ ನೆಲೆಯೂರಿರುವ ಜೈವಿಕ ತಂತ್ರಜ್ಞಾನ ಉದ್ದಿಮೆಗಳು ಬಹುಮುಖ್ಯ ಪಾತ್ರ ವಹಿಸಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ : ಎಚ್ಚರ : ಬ್ಯಾಂಕ್ ಖಾತೆಗೆ ಕನ್ನ.. ಸೈಬರ್ ವಂಚನೆ ಆಯ್ತು.. ಈಗ ಮೊಬೈಲ್ ಟವರ್ ಸರದಿ
ವಾಹನ ಕ್ಷೇತ್ರದಲ್ಲಿ ಇನ್ನುಮುಂದೆ ಫ್ಲೆಕ್ಸಿ ಎಂಜಿನ್ನುಗಳು ಬರಲಿವೆ. ಈಗಾಗಲೇ ರಾಜ್ಯದ ಸಾರಿಗೆ ನಿಗಮದ ಬಸ್ಸುಗಳಿಗೆ ಶೇ.9ರಷ್ಟು ಎಥೆನಾಲ್ ಇಂಧನವನ್ನು ಬಳಸುತ್ತಿದ್ದು, ಮುಂಬರುವ ದಿನಗಳಲ್ಲಿ ಇದನ್ನು ಶೇ.100ಕ್ಕೆ ಕೊಂಡೊಯ್ಯಲಾಗುವುದು. ಇದಕ್ಕೆ ತಕ್ಕಂತೆ ಸಂಶೋಧನೆಗೆ ಒತ್ತು ಕೊಡಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ `ಏಬಲ್’ ಸಂಘಟನೆಯ ಕಾರ್ಯನಿರ್ವಾಹಕ ಅಧ್ಯಕ್ಷ ಇ.ಎಸ್.ಕೃಷ್ಣನ್, ರಾಜ್ಯ ಸರಕಾರದ ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಐಟಿ ಬಿಟಿ ನಿರ್ದೇಶಕಿ ಮೀನಾ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.