ಬೆಂಗಳೂರು: ಫಿನ್ಲೆಂಡ್ ಸರಕಾರವು ಕರ್ನಾಟಕದಲ್ಲಿ ಕೃತಕ ಬುದ್ಧಿಮತ್ತೆ (ಎಐ), ಇಂಧನ ಮತ್ತು ಶಿಕ್ಷಕರ ತರಬೇತಿ ಕಾರ್ಯಕ್ರಮಗಳೊಂದಿಗೆ ಸಹಭಾಗಿತ್ವ ಸ್ಥಾಪನೆಗೆ ಆಸಕ್ತಿ ತೋರಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಭಾರತದಲ್ಲಿರುವ ಫಿನ್ಲೆಂಡ್ ರಾಯಭಾರಿ ಶ್ರೀಮತಿ ರಿತ್ವಾ ಕೌಕು ರಾಂಡ್ ಅವರು ತಮ್ಮೊಂದಿಗೆ ಕರ್ನಾಟಕ ಮತ್ತು ಫಿನ್ಲೆಂಡ್ ನಾವೀನ್ಯತಾ ಕಾರಿಡಾರ್ ಒಡಂಬಡಿಕೆಯ ಸಂಚಾಲನಾ ಸಮಿತಿಯ ಸಭೆ ನಡೆಸಿದ ನಂತರ ಮಾತನಾಡಿದ ಅವರು ಗುರುವಾರ ಈ ಬೆಳವಣಿಗೆಯನ್ನು ಕುರಿತು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಮಾತನಾಡಿದ ಫಿನ್ಲೆಂಡ್ ರಾಯಭಾರಿಯವರು, ಕರ್ನಾಟಕದೊಂದಿಗೆ ಸಹಭಾಗಿತ್ವ ಸ್ಥಾಪನೆಯನ್ನು ತಮ್ಮ ದೇಶವು ಮಹತ್ತ್ವದ್ದಾಗಿ ಪರಿಗಣಿಸಿದ್ದು, ರಾಜ್ಯದ ವಾಣಿಜ್ಯ ವಹಿವಾಟು ಮತ್ತು ಶಿಕ್ಷಣ ರಂಗದೊಂದಿಗೆ ನಿಕಟ ಸಂಬಂಧ ಹೊಂದಲು ಬಯಸುತ್ತಿರುವುದಾಗಿ ಹೇಳಿದರು.
ಫಿನ್ಲೆಂಡ್ ನಿಯೋಗವು ರಾಜ್ಯದ ನವೋದ್ಯಮ ಕಾರ್ಯ ಪರಿಸರದ ಬಗ್ಗೆಯೂ ತೀವ್ರ ಆಸಕ್ತಿ ತೋರಿಸಿದೆ. ಇದಲ್ಲದೆ, ಫಿನ್ಲೆಂಡ್ ದೇಶವು ಕರ್ನಾಟಕದಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಅನುಮತಿ ಕೊಡಲು ಮುಕ್ತ ಮನಸ್ಸು ಹೊಂದಿದ್ದೇವೆ. ಇದರ ಜೊತೆಗೆ ಆ ದೇಶದೊಂದಿಗೆ ಒಡಂಬಡಿಕೆ ಮಾಡಿಕೊಂಡು ರಾಜ್ಯದ ಶಿಕ್ಷಕ ವರ್ಗಕ್ಕೆ ಸಮಗ್ರ ತರಬೇತಿ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ನುಡಿದರು.
ಫಿನ್ಲೆಂಡ್ ನಿಯೋಗದಲ್ಲಿ `ಬಿಜಿನೆಸ್ ಫಿನ್ಲೆಂಡ್’ನ ಭಾರತೀಯ ನಿರ್ದೇಶಕ ಡಾ.ಜುಕ್ಕಾ ಹೋಲಪಾ, ದೂತಾವಾಸದ ಕೌನ್ಸೆಲರ್ ಗಳಾದ ಜುಕ್ಕಾ ಇಲೊಮಕಿ, ಡಾ.ಮಿಕಾ ಟಿರೋನೆನ್, ಫಿನ್ಲೆಂಡ್ ಚೇಂಬರ್ ಆಫ್ ಕಾಮರ್ಸ್ ಇನ್ ಇಂಡಿಯಾದ ಪ್ರತಿನಿಧಿ ಸುರೇಶ್ ಕುಮಾರ್ ಮಾತುಕತೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ