ಅಬುಧಾಬಿ: ಅಫ್ಘಾನಿಸ್ಥಾನವನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ ದೇಶಬಿಟ್ಟು ಪರಾರಿಯಾಗಿದ್ದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಸಂಭವಿಸಬಹುದಾಗಿದ್ದ ರಕ್ತಪಾತ ತಡೆಯಲು ತಾನು ದೇಶಬಿಟ್ಟಿದ್ದಾಗಿ ಘನಿ ಹೇಳಿಕೆ ನೀಡಿದ್ದಾರೆ.
ಅಶ್ರಫ್ ಘನಿ ಸದ್ಯ ಯುಎಇ ನಲ್ಲಿದ್ದಾರೆ. ತನ್ನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಘನಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಂಭಾವ್ಯ ರಕ್ತಪಾತವನ್ನು ತಡೆಯುವ ಉದ್ದೇಶದಿಂದ ದೇಶ ತೊರೆದೆ. ಪ್ರಾಣಭೀತಿಯಿಂದ ಪರಾರಿಯಾಗಿಲ್ಲ. ತಮ್ಮ ಬೂಟುಗಳನ್ನು ಬದಲಾಯಿಸಲು ಸಹ ಸಮಯವಿರಲಿಲ್ಲ, ಅಧ್ಯಕ್ಷರ ಅರಮನೆಯಲ್ಲಿ ಧರಿಸಿದ್ದ ಚಪ್ಪಲಿಗಳೊಂದಿಗೆ ಕಾಬೂಲ್ ನಿಂದ ಹೊರಟಿರುವುದಾಗಿ ಘನಿ ಹೇಳಿದ್ದಾರೆ.
ಇದನ್ನೂ ಓದಿ:ತಾಲಿಬಾನಿಗರಲ್ಲಿ ಪಶ್ಚಾತ್ತಾಪವನ್ನೇ ನೋಡಿರಲಿಲ್ಲ !
ದೇಶ ಬಿಡುವ ಮುನ್ನ ನಾನು ನನ್ನ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೆ. 25 ವರ್ಷಗಳ ಹಿಂದೆ ನಡೆದಿದ್ದ ರಕ್ತಪಾತ ಮತ್ತೆ ಸಂಭವಿಸಬಾರದು ಎಂದು ನಿರ್ಧರಿಸಿದೆವು. ಹೀಗಾಗಿ ಅನಿವಾರ್ಯವಾಗಿ ನಾನು ದೇಶ ತೊರೆದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಪಲಾಯನ ಮಾಡುವ ಮೊದಲು ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಿದ ಆರೋಪವನ್ನು ಕೂಡಾ ಘನಿ ನಿರಾಕರಿಸಿದ್ದಾರೆ.