ಬೆಳಗಾವಿ: ಗೋಕಾಕ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗುತ್ತಿದ್ದಂತೆ ಅಭ್ಯರ್ಥಿಗಳು ಮತ ಬೇಟೆಯಲ್ಲಿ ತೊಡಗಿಕೊಂಡಿದ್ದು, ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಅವರು ಜೋಳಿಗೆ ಹಾಕಿಕೊಂಡು ಮಠದಿಂದ ಮತ ಭಿಕ್ಷೆ ಆರಂಭಿಸಿದ್ದಾರೆ.
ಗೋಕಾಕ ಶೂನ್ಯ ಸಂಪಾದನಾ ಮಠಕ್ಕೆ ಭೇಟಿ ನೀಡಿದ ಅಶೋಕ್ ಪೂಜಾರಿ ಅವರು ಶ್ರೀ ಮುರುಘರಾಜೇಂದ್ರ ಸ್ವಾಮಿಗಳಿಂದ ಜೋಳಿಗೆ ಹಾಕಿಸಿಕೊಂಡು ಮತ ಭಿಕ್ಷೆ ಆರಂಭಿಸಿದರು. ಶ್ರೀಗಳ ಆಶೀರ್ವಾದ ಪಡೆದು ಪ್ರಚಾರಕ್ಕೆ ಧುಮುಕಿದರು.
ಜಾರಕಿಹೊಳಿ ಸಹೋದರರ ವಿರುದ್ಧ ತೊಡೆ ತಟ್ಟಿರುವ ಪೂಜಾರಿ, ಮತದಾರರನ್ನು ಓಲೈಸಿಕೊಳ್ಳಲು ಹೊಸ ತಂತ್ರ ಹೆಣೆದಿದ್ದಾರೆ. ಲಿಂಗಾಯತ ಸಮುದಾಯದ ಮತಗಳನ್ನು ಬಾಚಿಕೊಳ್ಳಲು ಪೂಜಾರಿ ಪ್ಲ್ಯಾನ್ ಮಾಡಿದ್ದಾರೆ.
ಬಳಿಕ ಮಾತನಾಡಿದ ಅಶೋಕ ಪೂಜಾರಿ, ಗೋಕಾಕ ಚುನಾವಣೆಯಲ್ಲಿ ಮೂರು ಬಾರಿ ಸೋತು ಆರ್ಥಿಕವಾಗಿ ಬಹಳ ತೊಂದರೆ ಅನುಭವಿಸಿದ್ದೇನೆ. ಈಗ ಜೋಳಿಗೆ ಹಾಕಿಕೊಂಡು ಜನರ ಬಳಿ ಮತ ಕೇಳಲು ಹೊರಟಿರುವುದಾಗಿ ಹೇಳಿದರು.
ಅಶೋಕ ಪೂಜಾರಿ ಅವರಿಗೆ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪುರ, ಭೀಮಪ್ಪ ಗಡಾದ ಸೇರಿದಂತೆ ಇತರರು ಇದ್ದರು.