ಜಮ್ಮು-ಕಾಶ್ಮೀರದ ಇನ್ನೋರ್ವ ವಾನಿಯ ಹೆಸರು ಈಗ ದೇಶದಾದ್ಯಂತ ಚರ್ಚೆಯಲ್ಲಿದೆ. ಅವರು ಈ ಬಾರಿಯ ಶಾಂತಿ ಕಾಲದ ಅಶೋಕ ಚಕ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಲ್ಯಾನ್ಸ್ ನಾೖಕ್ ನಜೀರ್ ಅಹ್ಮದ್ ವಾನಿ. ಅಶೋಕ ಚಕ್ರ ಯೋಧರಿಗೆ ನೀಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದರೂ ಅದರ ಕುರಿತು ಸಾರ್ವಜನಿಕವಾಗಿ ಚರ್ಚೆಯಾಗುವುದು ಬಹಳ ಕಡಿಮೆ. ಏನಿದ್ದರೂ ಸೇನೆಯ ಮಟ್ಟದಲ್ಲಷ್ಟೆ ಅಶೋಕ ಚಕ್ರದಂಥ ಪ್ರಶಸ್ತಿಗಳ ಬಗ್ಗೆ ಕುತೂಹಲವಿರುತ್ತದೆ. ಹೀಗಾಗಿ ಅಶೋಕ ಚಕ್ರದ ಕುರಿತಾದ ಚರ್ಚೆಯನ್ನು ಸಾರ್ವಜನಿಕ ನೆಲೆಗೆ ತಂದ ಹಿರಿಮೆಯೂ ಈ ದಿವಂಗತ ವಾನಿಗೆ ಸಲ್ಲಬೇಕು.ವಾನಿಗೆ ಅಶೋಕ ಚಕ್ರ ಪ್ರಶಸ್ತಿ ಸಿಕ್ಕಿರುವುದರಲ್ಲಿ ಹಲವು ಮಹತ್ವದ ಅಂಶಗಳು ಅಡಗಿವೆ ಎನ್ನುವುದಕ್ಕೆ ಈ ಪ್ರಶಸ್ತಿ ಈ ಸಲ ಚರ್ಚೆಯ ಕೇಂದ್ರವಾಗಿದೆ.
ಭಯೋತ್ಪಾದನೆಯ ಆಡುಂಬೋಲವಾಗಿರುವ ಕುಲ್ಗಾಂವ್ ಜಿಲ್ಲೆಯ ಅಶಿಮುಜಿ ಎಂಬ ಪ್ರದೇಶದವರು ನಜೀರ್ ಅಹ್ಮದ್ ವಾನಿ. ಒಂದು ಕಾಲದಲ್ಲಿ ಈ ವಾನಿಯೂ ಭಯೋತ್ಪಾದಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಇಖ್ವಾನಿಸ್ ಎಂಬ ನುಸುಳುಕೋರರ ಪಡೆಯಲ್ಲಿದ್ದ ವಾನಿ ಆ ಬಳಿಕ ಮನಪರಿವರ್ತನೆಯಾಗಿ 2004ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದವರು. ಸೇನೆಯಲ್ಲಿ ಅವರು ತೋರಿಸಿದ ಶೌರ್ಯ ಮಾತ್ರ ಅಸಾಧಾರಣವಾದದ್ದು. ಉಗ್ರರ ಜತೆಗಿನ 17 ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗಿದ್ದ ವಾನಿ ಕೊನೆಯ ಹೋರಾಟದಲ್ಲಿ ತೋರಿಸಿದ ಕೆಚ್ಚೆದೆ ಅಭೂತಪೂರ್ವವಾದದ್ದು.
ಕಳೆದ ವರ್ಷ ನ.25ರಂದು ಶೋಪಿಯಾನ್ ಜಿಲ್ಲೆಯ ಬಟಗುಂಡ್ ಎಂಬಲ್ಲಿ 6 ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ನಜೀರ್ ಅಹ್ಮದ್ ವಾನಿ ನೇತೃತ್ವದ ಪಡೆ ತೋರಿಸಿದ ಶೌರ್ಯದಿಂದಾಗಿ ಭಾರತೀಯ ಪಡೆಗೆ ಗೆಲುವಾಗಿತ್ತು. ಗುಂಡೇಟಿನಿಂದ ಶರೀರ ಜರ್ಜರಿತವಾಗಿದ್ದರೂ ಉಗ್ರರಿದ್ದ ಕಟ್ಟಡಕ್ಕೆ ನುಗ್ಗಿ ಒಬ್ಬನನ್ನು ಸಾಯಿಸಿಯೇ ವಾನಿ ಧರೆಗುಳಿದಿದ್ದರು. ಇಂಥ ಸಾಹಸಿಗೆ ಅರ್ಹವಾಗಿಯೇ ಅಶೋಕ ಚಕ್ರ ಸಂದಿದೆ.
ಕಾಶ್ಮೀರದ ಸಂದರ್ಭದಲ್ಲಿ ಈ ಪ್ರಶಸ್ತಿಗೆ ಇನ್ನೂ ಕೆಲವು ಮಹತ್ವಗಳಿವೆ.ಬುರಾನ್ ವಾನಿಯಂಥ ಅಲ್ಲಿನ ವಿದ್ಯಾವಂತ ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿ ಹಿಂಸೆಯ ದಾರಿ ತುಳಿದಿರುವಾಗ ನಜೀರ್ ವಾನಿ ಉಗ್ರ ಸಂಘಟನೆಯಿಂದ ವಿಮುಖರಾಗಿ ಸೇನೆಗೆ ಸೇರಿದ್ದೇ ಯುವಕರಿಗೆ ಒಂದು ಸಂದೇಶ ನೀಡುವ ನಡೆ. ಮುಖ್ಯವಾಹಿನಿಗೆ ಬಂದರೆ ಸೂಕ್ತ ಸ್ಥಾನಮಾನ ಸಿಗುತ್ತದೆ ಎನ್ನುವ ಸಂದೇಶವನ್ನು ವಾನಿಯನ್ನು ಮರಣೋತ್ತರವಾಗಿ ಗೌರವಿಸುವ ಮೂಲಕ ಸರಕಾರ ನೀಡಿದ್ದು ಹಿಂಸಾತ್ರಸ್ತ ಕಾಶ್ಮೀರದ ಸಂದರ್ಭದಲ್ಲೊಂದು ಸಕಾರಾತ್ಮಕ ನಡೆಯೆಂದೇ ಹೇಳಬಹುದು.
ಮಾಧ್ಯಮಗಳಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ನಕಾರಾತ್ಮಕವಾದ ಸುದ್ದಿಗಳೇ ಹೆಚ್ಚಿರುತ್ತವೆ. ಅಲ್ಲಿನ ಅನೇಕ ಯುವಕರು ಪೋಲೀಸ್ ಪಡೆಯಲ್ಲಿ, ಸೇನೆಯಲ್ಲಿ ಉಳಿದ ಸೈನಿಕರಂತೆಯೇ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೂ ಅವರ ಕುರಿತು ಹೆಚ್ಚಿನವರಿಗೆ ಮಾಹಿತಿ ಇರುವುದಿಲ್ಲ. ಕಾಶ್ಮೀರದ ಯುವಕರೆಂದರೆ ಭಯೋತ್ಪಾದಕರು ಅಥವಾ ಭಯೋತ್ಪಾದನೆಯನ್ನು ಬೆಂಬಲಿಸುವವರು ಎಂಬ ಸಾಮಾನ್ಯ ಭಾವನೆ ದೇಶದ ಉಳಿದೆಡೆಗಳಲ್ಲಿ ಇದೆ.
ಈ ಅಭಿಪ್ರಾಯವನ್ನು ಬದಲಿಸುವಲ್ಲಿ ನಜೀರ್ ವಾನಿಯಂಥ ಯುವಕರನ್ನು ಗುರುತಿಸಿದ ಪ್ರಕ್ರಿಯೆ ನೆರವಾಗಬಹುದು. ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಯಾಗಿರುವ ಪೊಲೀಸ್ ಇಲಾಖೆ ಮತ್ತು ಸೇನೆಯಲ್ಲಿದ್ದ ಕಾಶ್ಮೀರದ ಯುವಕರನ್ನೂ ಇದೇ ಮಾದರಿಯಲ್ಲಿ ಗುರುತಿಸಿ ಗೌರವಿಸುವ ಜತೆಗೆ ಅವರ ಕುಟುಂಬದ ಭವಿಷ್ಯವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಕಾರ್ಯೋನ್ಮುಖವಾದರೆ ಇನ್ನಷ್ಟು ವಾನಿಗಳು ಸೇನೆಗೆ ಸೇರಲು ಮುಂದೆ ಬಂದಾರು.
ನಜೀರ್ ವಾನಿ ದೇಶಕ್ಕಾಗಿ ಮಾಡಿದ ತ್ಯಾಗ ಇಡೀ ಕಾಶ್ಮೀರದ ಜನತೆಯನ್ನು ದೇಶದ್ರೋಹಿಗಳು ಎಂದು ಭಾವಿಸುವವರ ಕಣ್ತೆರೆಸಬೇಕು. ಕಳೆದ ಮೂರು ವರ್ಷಗಳಲ್ಲಿ ಸೇನೆ, ಅರೆ ಸೇನೆ ಪಡೆ ಮತ್ತು ಪೊಲೀಸ್ ಪಡೆಯಲ್ಲಿದ್ದ ಹಲವು ಕಾಶ್ಮೀರಿ ಯುವಕರು ಕರ್ತವ್ಯದ ವೇಳೆಯಲ್ಲಿ ಉಗ್ರರಿಗೆ ಬಲಿಯಾಗಿದ್ದಾರೆ. ಇವರ ತ್ಯಾಗಗಳಿಗೂ ಸೂಕ್ತ ಗೌರವ ಸಿಗುವಂತಾದರೆ ದಿಲ್ಲಿ ಮತ್ತು ಶ್ರೀನಗರದ ನಡುವೆ ಇರುವ ಅಂತರ ಕಡಿಮೆಯಾಗಬಹುದು.ಯೋಧರು ಎಂದಲ್ಲ ದೇಶಕ್ಕಾಗಿ ಮಿಡಿಯುವ ಎಲ್ಲ ಕಾಶ್ಮೀರಿಗಳನ್ನು ಸೂಕ್ತವಾಗಿ ಗೌರವಿಸಿದರೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಹಳೇ ಆರೋಪವನ್ನು ನಿವಾರಿಸಿಕೊಳ್ಳಲು ಸಾಧ್ಯವಾಗಬಹುದು.