ಪಿರಿಯಾಪಟ್ಟಣ: ತಾಲೂಕಿನಲ್ಲಿ ಇದೀಗ ಸುರಿಯುತ್ತಿರುವ ಆಶ್ಲೇಷಾ ಮಳೆ ಕೆಲವರಿಗೆ ವರದಾನವಾಗಿದ್ದರೆ, ಮತ್ತೆ ಕೆಲವರಿ ಶಾಪವಾಗಿ ಪರಿಣಮಿಸಿದೆ. ಕಳೆದ ನಾಲ್ಕು ದಿನಗಳಿಂದ ದಿನಗಳಿಂದ ಭಾರೀ ಪ್ರಮಾಣ ಮಳೆ ಸುರಿದಿದ್ದರಿಂದ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇದೀ ರೀತಿ ಮಳೆ ಮುಂದುವರಿದರೆ ಗುರುವಾರ ಕೂಡ ರಜೆ ಘೋಷಿಸುವ ಸಾಧ್ಯತೆ ಇದೆ.
ರೈತರು ಸಂತಸ: ಜುಲೈ ತಿಂಗಳ ಆರಂಭದಿಂದಲೂ ಮಳೆ ಬೀಳದ ಪರಿಣಾಮ ಮೆಕ್ಕೆಜೋಳ, ತಂಬಾಕು, ಶುಂಠಿ, ಹಸಿಮೆಣಸು, ತರಕಾರಿ ಮತ್ತಿತರ ಬೆಳೆಗಳು ಒಣಗಿಹೋಗಿ ರೈತರನ್ನು ಕಂಗೆಡಿಸಿತ್ತು. ಇದೀಗ ಒಂದು ವಾರದಿಂದ ಸತತ ಸುರಿಯುತ್ತಿರುವುದರಿಂದ ರೈತರು ನೆಮ್ಮದಿ ನಿಟ್ಟಿಸಿರು ಬಿಟ್ಟಿದ್ದಾರೆ. ತಾಲೂಕಿನ ಕಸಬಾ, ರಾವಂದೂರು, ಬೆಟ್ಟದಪುರ, ಹಾರನಹಳ್ಳಿ ಹೋಬಳಿಗಳಲ್ಲಿ ಉತ್ತಮ ಮಳೆಯಾಗಿದೆ.
ವ್ಯಾಪಾರಿಗಳಿಗೆ ಕಿರಿಕಿರಿ: ತಾಲೂಕಿನ ಬಹುತೇಕ ಮಂದಿ ಸಣ್ಣವ್ಯಾಪಾರಿಗಳು ಹಾಗೂ ಕೂಲಿ ಕೆಲಸವನ್ನೇ ನಂಬಿ ಬದುಕುತ್ತಿದ್ದಾರೆ. ಸಣ್ಣ ವ್ಯಾಪಾರಿಗಳು ಜೀವನೋಪಾಯಕ್ಕಾಗಿ ನೆರೆಯ ಕೊಡಗು ಜಿಲ್ಲೆಯ ಸಿದ್ದಾಪುರ, ತಿತಿಮತ್ತಿ, ಅಮ್ಮತ್ತಿ, ಬಾಳಲೆ ಕುಶಾಲನಗರ, ಶುಂಠಿಕೊಪ್ಪ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಹಾಗೂ ಮಂಗಳೂರಿನವರೆಗೂ ತೆರಳುತ್ತಾರೆ. ಆದರೆ, ಕಳೆದ 20 ದಿನಗಳಿಂದ ಈ ಭಾಗಗಳಲ್ಲಿ ಮಳೆ ಸುರಿಯುತ್ತಿರುವುದರಿಂದ ಪರಿತಪಿಸುವಂತಾಗಿದೆ ಎಂದು ವರ್ತಕರು ಅವಲತ್ತುಕೊಂಡಿದ್ದಾರೆ.
ಕೂಲಿ ತಪ್ಪಿಸಿದ ಮಳೆ: ಇನ್ನು ಜೀವನ ನಿರ್ವಹಣೆಗೆ ಕೂಲಿಯನ್ನೇ ನಂಬಿ ಬದುಕುವ ಸಹಸ್ರಾರು ಕೂಲಿ ಕಾರ್ಮಿಕರು ಪಿರಿಯಾಪಟ್ಟಣದಿಂದ ಪ್ರತಿದಿನ ದೂರದ ಕೊಡಗು ಜಿಲ್ಲೆಯ ಗೋಣಿಕೊಪ್ಪ, ಬಾಳಲೆ, ಅಮ್ಮತ್ತಿ, ತಿತಿಮತ್ತಿ, ಸಿದ್ದಾಪುರ ಹಾಗೂ ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಗೆ ಕೂಲಿಗಾಗಿ ತೆರಳಬೇಕಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವುದರಿಂದ ಕೂಲಿ ಕೆಲಸವಿಲ್ಲದೇ ಪರದಾಡುವಂತಾಗಿದೆ ಎಂದು ಕೂಲಿಕಾರರು ಅಳಲು ತೋಡಿಕೊಂಡಿದ್ದಾರೆ.
ಇನ್ನು ವಿದ್ಯಾರ್ಥಿಗಳ ಸ್ಥಿತಿ ಹೇಳತೀರದಾಗಿದೆ. ತಾಲೂಕಿನ ಹಲವು ಭಾಗಗಳಿಂದ ಪಿರಿಯಾಪಟ್ಟಣ ಹಾಗೂ ಇತರೆ ಭಾಗಗಳಗೆ ತೆರೆಳುವ ವಿದ್ಯಾರ್ಥಿಗಳು ಜಿಟಿಜಿಟಿ ಮಳೆಗೆ ತತ್ತರಿಸಿ ಹೋಗಿದ್ದಾರೆ. ಮಳೆಯ ಪರಿಣಾಮ ಸಿಗದಿತ ಸಮಯಕ್ಕೆ ಬಸ್‌ಗಳು ಬರುತ್ತಿಲ್ಲ. ಮತ್ತೂಂದೆಡೆ ತಾಲೂಕಿನ ಬಹುತೇಕ ಗ್ರಾಮಗಳಿಗೆ ಬಸ್ ಸೌಲಭ್ಯಗಳೇ ಇಲ್ಲದಿರುವುದರಿಂದ ನರಕಯಾತನೆ ಅನುಭವಿಸುವಂತಾಗಿದೆ. ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಸಂಚರಿಸುವಂತಾಗಿದೆ.
ಒಟ್ಟಿನಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಆಶ್ಲೇಷಾ ಮಳೆ ರೈತರಿಗೆ ವರದಾನವೂ ಆಗಿದೆ. ವರ್ತಕರು, ಕೂಲಿಕಾರರು ಹಾಗೂ ವಿದ್ಯಾರ್ಥಿಗಳಿಗೆ ಶಾಪವಾಗಿ ಪರಿಣಮಿಸಿದೆ.
ಕಳೆದ ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳಲು ತೊಂದರೆಯಾದ ಕಾರಣ ಬುಧವಾರ ರಜೆ ಘೋಷಿಸಲಾಗಿತ್ತು. ಮಳೆ ಇನ್ನು ಮುಂದುವರಿದರೆ ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಕ್ರಮ ವಹಿಸಲಾಗುವುದು.
-ಶ್ವೇತಾ, ತಹಶೀಲ್ದಾರ್
ನಾವು ಪ್ರತಿದಿನ ಜೀವನ ನಿರ್ವಹಣೆಗೆ ದೂರದ ಕೊಡಗು ಜಿಲ್ಲೆಯ ಸಿದ್ದಾಪುರ, ಬಾಳಲೆ, ವಿರಾಜಪೇಟೆ, ಶ್ರೀಮಂಗಲ, ತಿತಿಮತ್ತಿ ಮತ್ತಿತರ ಭಾಗಗಳಿಗೆ ವ್ಯಾಪಾರಕ್ಕೆಂದು ಹೋಗುತ್ತೇವೆ. ಆದರೆ, ಕಳೆದ 20 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಬಿರುಕುಬಿಟ್ಟ ಪರಿಣಾಮ ಕೊಡಗು ಜಿಲ್ಲಾಡಳಿತ ಸಂಚಾರ ನಿರ್ಬಂಧ ಹೇರಲಾಗಿದೆ. ಇದರಿಂದ ಜೀವನ ನಿರ್ವಹಣೆಗೆ ಕಷ್ಟವಾಗಿದೆ.
-ಸರ್ತಾಜ್ ಅಹಮದ್, ವಿಳ್ಯದೆಲೆ, ಅಡಕೆ ವ್ಯಾಪಾರಿ
ಕಳೆದ ಒಂದು ತಿಂಗಳಿನಿಂದ ಮಳೆ ಇಲ್ಲದೆ ಬಿತ್ತಿದ ಬೆಳೆಗಳು ಒಣಗಿ ಹೋಗಿದ್ದವು. ನಷ್ಟದ ಭೀತಿ ಎದುರಾಗಿತ್ತು. ಆದರೆ, ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಮಳೆ ಬಿದ್ದ ಪರಿಣಾಮ ಬೆಳೆಗಳು ಚೇತರಿಸಿಕೊಂಡಿವೆ. ಕೊಂಚ ನೆಮ್ಮದಿ ದೊರೆತಿದೆ.
-ಪಿ.ಡಿ.ಪ್ರಸನ್ನ, ರೈತ ಪರಿಯಾಪಟ್ಟಣ
* ಪಿ.ಎನ್.ದೇವೇಗೌಡ