Advertisement

ಆ್ಯಷಸ್‌ ಟೆಸ್ಟ್‌, ಐಪಿಎಲ್‌, ಬಿಗ್‌ಬಾಷ್‌ನಲ್ಲೂ ಫಿಕ್ಸಿಂಗ್‌

06:00 AM Dec 15, 2017 | |

ಪರ್ಥ್: ಇದುವರೆಗೆ ಭಾರತ, ಪಾಕಿಸ್ತಾನ, ದ.ಆಫ್ರಿಕಾದಲ್ಲಿ ಭಾರೀ ಸದ್ದು ಮಾಡಿದ್ದ ಫಿಕ್ಸಿಂಗ್‌ ಪ್ರಕರಣ ಈಗ ವಿಶ್ವಮಟ್ಟದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ. ಇಂಗ್ಲೆಂಡ್‌ ವಾರಪತ್ರಿಕೆ ದ ಸನ್‌ ರಹಸ್ಯ ಕಾರ್ಯಾಚರಣೆಯೊಂದನ್ನು ನಡೆಸಿ, ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆ್ಯಷಸ್‌ನ 3ನೇ ಟೆಸ್ಟ್‌, ಟಿ20 ಲೀಗ್‌ಗಳಾದ ಐಪಿಎಲ್‌, ಬಿಗ್‌ಬಾಷ್‌ನಲ್ಲೂ ಫಿಕ್ಸಿಂಗ್‌ ನಡೆದಿದೆ ಎಂದು ವರದಿ ಮಾಡಿದೆ. ಇದು ಗಂಭೀರ ಸಂಗತಿ, ತನಿಖೆ ಆರಂಭಿಸಿದ್ದೇವೆಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಹೇಳಿಕೊಂಡಿದೆ. ಆದರೂ ಆ್ಯಷಸ್‌ 3ನೇ ಟೆಸ್ಟ್‌ನಲ್ಲಿ ಬೆಟ್ಟಿಂಗ್‌ ನಡೆದಿದೆ ಎಂಬ ಆರೋಪವನ್ನು ಅದು ನಿರಾಕರಿಸಿದೆ.

Advertisement

ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಕೂಡ ಆರೋಪವನ್ನು ನಿರಾಕರಿಸಿದೆ. ನಾವು ಕ್ರಿಕೆಟಿಗರಿಗೆ ನಿರಂತರವಾಗಿ ಫಿಕ್ಸಿಂಗ್‌ನಿಂದ ಎದುರಾಗುವ ಸಮಸ್ಯೆಗಳನ್ನು ವಿವರಿಸಿದ್ದೇವೆ. ಅವರಿಗೆ ಶಿಕ್ಷಣ ನೀಡಿದ್ದೇವೆ. ಆದ್ದರಿಂದ ಆಟಗಾರರು ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿರಲು ಸಾಧ್ಯವೇ ಇಲ್ಲವೆಂದು ಹೇಳಿಕೊಂಡಿದೆ. ಇದಕ್ಕೂ ಮಿಗಿಲಾಗಿ ಸ್ವತಃ ಐಸಿಸಿ, ದ ಸನ್‌ ಮಾಡಿರುವ ಆರೋಪಗಳಿಗೆ ಯಾವುದೇ ಸಾಕ್ಷ್ಯವಿಲ್ಲ, ತನ್ನದೇ ಗುಪ್ತಚರ ವಿಭಾಗವೂ ಆರೋಪವನ್ನು ಪುಷ್ಟೀಕರಿಸಿಲ್ಲ ಎಂದಿದೆ. ಆರೋಪದ ಮಹತ್ವ ತಿಳಿಯಲು ಇನ್ನೂ ಹಲದಿನಗಳು ಬೇಕಾಗಬಹುದೆಂದು ಊಹಿಸಲಾಗಿದೆ.

ದ ಸನ್‌ ಹೇಳಿದ್ದೇನು?
ತಾನು 4 ತಿಂಗಳ ಕಾಲ ಇಬ್ಬರು ಭಾರತೀಯ ಮೂಲದ ಬುಕಿಗಳೊಂದಿಗೆ ಸಂಪರ್ಕ ಸಾಧಿಸಿದ್ದೇವೆ. ಅವರ ಚಲನವಲನಗಳನ್ನು ದುಬೈ ಹಾಗೂ ದೆಹಲಿಯ ಹೋಟೆಲ್‌ಗ‌ಳಲ್ಲಿ ರಹಸ್ಯವಾಗಿ ಚಿತ್ರೀಕರಿಸಿದ್ದೇವೆ. ಅದರಲ್ಲಿ ಬಿಗ್‌ ಎಂದು ಹೇಳಿಕೊಳ್ಳುವ ಒಬ್ಬರು, ಪ್ರಸ್ತುತ ಆಸ್ಟ್ರೇಲಿಯಾದ ಪರ್ಥ್ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್‌ನ ಪೂರ್ವನಿಗದಿತ ಅವಧಿಗಳನ್ನು ಮಾರುವುದಾಗಿ ಹೇಳಿದರು. ಆ ಮಾಹಿತಿಯನ್ನು ಕೊಂಡವರು ಅದನ್ನು ಆಧರಿಸಿ ಭಾರೀ ನಡೆಸಲು ಸುಲಭವಾಗುತ್ತದೆ ಎನ್ನುವುದು ಬುಕಿಗಳ ಹೇಳಿಕೆ.

ದ ಸನ್‌ ವರದಿಗಾರರು ಮಾತನಾಡಿಸಿದ ಇನ್ನೊಬ್ಬ ಬುಕಿ, ಫಿಕ್ಸಿಂಗ್‌ ಹಗರಣದಲ್ಲಿ ಪಾಲ್ಗೊಂಡಿರುವ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ತಮಗೆ ಪರಿಚಯವಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದಲ್ಲಿರುವ ದ ಸೈಲೆಂಟ್‌ ಮ್ಯಾನ್‌ ಅವರ ನಿರಂತರ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದಾರೆ.

ಫಿಕ್ಸಿಂಗ್‌ಗೆ 1.20 ಕೋಟಿ ರೂ. ಬೇಡಿಕೆ
ಬೆಟ್ಟಿಂಗ್‌ನಲ್ಲಿ ಪಾಲ್ಗೊಳ್ಳಲು ಹೋದವರಂತೆ ಬಿಂಬಿಸಿಕೊಂಡ ದ ಸನ್‌ ವರದಿಗಾರರಿಗೆ ನೇರವಾಗಿ ಬುಕಿಗಳು ಭಾರೀ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಒಂದು ಓವರ್‌ನಲ್ಲಿ ಎಷ್ಟು ರನ್‌ ಹೊಡೆಯುತ್ತಾರೆಂದು ತಿಳಿಸಲು ನಮಗೆ ಇಷ್ಟು ಹಣ ಬೇಕು. ಪಂದ್ಯ ನಡೆಯುವುದಕ್ಕಿಂತ ಮುನ್ನ ಯಾವ ಓವರ್‌, ಎಷ್ಟು ರನ್‌ ಎಂಬ ನಿಖರ ಮಾಹಿತಿ ನೀಡುತ್ತೇವೆ. ಮಾಹಿತಿ ಪಡೆದು ನಿಮಗೆ ಬೇಕಾದಂತೆ ಬೆಟ್ಟಿಂಗ್‌ ಮಾಡಿಕೊಳ್ಳಿ ಎನ್ನುವುದು ಆ ಇಬ್ಬರು ಬುಕಿಗಳ ಆಮಿಷ.

Advertisement

ಆ್ಯಷಸ್‌ ಟೆಸ್ಟ್‌ನ ಮಾಹಿತಿಗಳನ್ನು ನಿಮಗೆ ಕೊಡುತ್ತೇವೆ. 2ನೇ, 3ನೇ ದಿನದ ಅವಧಿಗಳ ವಿವರ ನೀಡುತ್ತೇವೆ. ಒಂದು ಅವಧಿಗೆ 60 ಲಕ್ಷ ರೂ., ಎರಡು ಅವಧಿಗೆ 1.20 ಕೋಟಿ ರೂ. ತಗುಲುತ್ತದೆ. ನೀವು ಬಯಸಿದರೆ ಆಸ್ಟ್ರೇಲಿಯಾದಲ್ಲಿರುವ ದ ಸೈಲೆಂಟ್‌ ಮ್ಯಾನ್‌ರನ್ನು ಸಂಪರ್ಕಿಸುತ್ತೇವೆ ಎಂದು ಬುಕಿಗಳು ಹೇಳಿದ್ದಾರೆ.

ಐಪಿಎಲ್‌, ಬಿಗ್‌ಬಾಷ್‌ನಲ್ಲೂ ಫಿಕ್ಸ್‌ ಮಾಡ್ತೀವಿ
ವಿಶ್ವಮಟ್ಟದಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಟಿ20 ಲೀಗ್‌ಗಳಾದ ಭಾರತದ ಐಪಿಎಲ್‌, ಆಸ್ಟ್ರೇಲಿಯಾದ ಬಿಗ್‌ಬಾಷ್‌ನಲ್ಲೂ ಫಿಕ್ಸಿಂಗ್‌ ನಡೆಸುತ್ತೇವೆಂದು ಬುಕಿಗಳು ಹೇಳಿಕೊಂಡಿದ್ದಾರೆ. ನಾವು ನೀಡಿರುವ ಈ ಮಾಹಿತಿಗಳು ಸಂಪೂರ್ಣ ಸತ್ಯ, ಇದರಲ್ಲಿ ಯಾವ ಅನುಮಾನವೂ ಬೇಡ ಎಂಬ ಭರವಸೆಯನ್ನೂ ನೀಡಿದ್ದಾರೆ.

ಆಟಗಾರರು ಪಂದ್ಯದ ವೇಳೆ ಕೆಲ ಸೂಕ್ಷ್ಮ ಸಂಜ್ಞೆಗಳನ್ನು ಮಾಡುತ್ತಾರೆ. ಉದಾಹರಣೆಗೆ ಬ್ಯಾಟ್ಸ್‌ಮನ್‌ಗಳು ಗ್ಲೋವ್ಸ್‌ ಬದಲಿಸುವುದು, ಬೌಲರ್‌ಗಳು ಟವೆಲ್‌ ಬದಲಿಸುವುದರ ಮೂಲಕ ಸಂಕೇತ ನೀಡುತ್ತಾರೆ. ಅದರ ಮೂಲಕ ನಿರ್ದಿಷ್ಟ ಓವರ್‌ನಲ್ಲಿ ಯಾವ ಘಟನೆ ನಡೆಯುತ್ತದೆ, ಯಾವ ಬ್ಯಾಟ್ಸ್‌ಮನ್‌ ಎಷ್ಟು ರನ್‌ ನೀಡುತ್ತಾನೆಂಬುದು ಬಹಿರಂಗವಾಗುತ್ತದೆನ್ನುವುದು ಬುಕಿಗಳ ಅಭಿಪ್ರಾಯ.

2013ರ ಐಪಿಎಲ್‌ ಫಿಕ್ಸಿಂಗ್‌ಗೆ ಬಿಸಿಸಿಐ ತಲ್ಲಣ
ಇಡೀ ಐಪಿಎಲ್‌ ಅನ್ನು ಅಲುಗಾಡಿಸಿದ ಸ್ಪಾಟ್‌ಫಿಕ್ಸಿಂಗ್‌ ಪ್ರಕರಣ 2013ರಲ್ಲಿ ನಡೆಯಿತು. ರಾಜಸ್ಥಾನ್‌ ರಾಯಲ್ಸ್‌ನ ಮೂವರು ಕ್ರಿಕೆಟಿಗರಾದ ಎಸ್‌.ಶ್ರೀಶಾಂತ್‌, ಅಜಿತ್‌ ಚಂಡೀಲಾ, ಅಂಕಿತ್‌ ಚವಾಣ್‌ ಫಿಕ್ಸಿಂಗ್‌ ನಡೆಸಿದ್ದಾರೆಂಬ ಆರೋಪದಡಿ ಮುಂಬೈ ಪೊಲೀಸರು ದಿಢೀರ್‌ ಬಂಧನಕ್ಕೊಳಪಡಿಸಿದರು. ಮುಂದೆ ದೆಹಲಿ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಈ ಯಾವ ಆರೋಪಗಳಿಗೂ ಸಾಕ್ಷ್ಯವಿಲ್ಲ ಎಂದು ಹೇಳಲಾಯಿತು. ಒಟ್ಟು 36 ಆರೋಪಿಗಳು ಖುಲಾಸೆಗೊಂಡರು. ಆದರೂ ಶ್ರೀಶಾಂತ್‌ ವೃತ್ತಿಜೀವನ ಈ ಪ್ರಕರಣದ ನಂತರ ಮುಗಿದೇ ಹೋಯಿತು. ಬಿಸಿಸಿಐ ಅವರನ್ನು ಆಜೀವ ನಿಷೇಧಕ್ಕೊಳಪಡಿಸಿತು. ಮುಂದೆ ಎನ್‌.ಶ್ರೀನಿವಾಸನ್‌ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡರು. ಅವರ ಅಳಿಯ ಗುರುನಾಥ್‌ ಮೇಯಪ್ಪನ್‌, ರಾಜಸ್ಥಾನ್‌ ರಾಯಲ್ಸ್‌ ಮಾಜಿ ಮಾಲೀಕ ರಾಜ್‌ ಕುಂದ್ರಾ ಆಜೀವ ನಿಷೇಧಗೊಂಡರು. ಚೆನ್ನೈ ಕಿಂಗ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ 2 ವರ್ಷ ಐಪಿಎಲ್‌ನಲ್ಲಿ ನಿಷೇಧ ಎದುರಿಸಿದವು.

2000ನೇ ವರ್ಷ ಅಜರುದ್ದೀನ್‌, ಜಡೇಜ, ಕ್ರೋನ್ಯೆ ಬಲಿ
2000ನೇ ಇಸವಿಯಲ್ಲಿ ಭಾರತದಲ್ಲಿ ಸ್ಫೋಟಕ ಪ್ರಕರಣವೊಂದು ನಡೆಯಿತು. ದೆಹಲಿ ಪೊಲೀಸ್‌ ಅಧಿಕಾರಿ ಈಶ್ವರ್‌ ಸಿಂಗ್‌ ರೇಧು, ಆಫ್ರಿಕಾದ ಹ್ಯಾನ್ಸಿ ಕ್ರೋನ್ಯೆ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆಂಬ ವರದಿ ನೀಡಿದರು. ಆರಂಭದಲ್ಲಿ ಇದನ್ನು ನಿರಾಕರಿಸಿದರೂ ನಂತರ ಕ್ರೋನ್ಯೆ ತಪ್ಪನ್ನು ಒಪ್ಪಿಕೊಂಡರು. ಅವರೂ ಕ್ರಿಕೆಟ್‌ನಿಂದ ನಿಷೇಧಗೊಂಡರು. ಇದೇ ವೇಳೆ ಭಾರತದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌ ಕೂಡ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡ ಸಂಗತಿಯನ್ನು ಬಯಲುಗೊಳಿಸಿದರು. ಅಜಯ್‌ ಜಡೇಜ ಹೆಸರೂ ಬಹಿರಂಗವಾಯಿತು. ಮುಂದೆ ಅಜರುದ್ದೀನ್‌ ಆಜೀವ, ಜಡೇಜ 5 ವರ್ಷ ಕ್ರಿಕೆಟ್‌ನಿಂದ ನಿಷೇಧಗೊಂಡರು.

ಪಾಕ್‌ನಲ್ಲೂ ಫಿಕ್ಸಿಂಗ್‌ ಗಲಾಟೆ
ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಫಿಕ್ಸಿಂಗ್‌ ಪ್ರಭಾವ ಜೋರಾಗಿದೆ. ಇತ್ತೀಚೆಗಷ್ಟೇ ಆ ದೇಶದ ಶಾರ್ಜೀಲ್‌ ಖಾನ್‌, ಖಾಲಿದ್‌ ಲತೀಫ್ ಅಮಾನತುಗೊಂಡಿದ್ದಾರೆ. ಅದಕ್ಕಿಂತ ಮುನ್ನ 2010ರಲ್ಲಿ ಆ ದೇಶದ ಮೂವರು ಅತಿ ಪ್ರಮುಖ ಕ್ರಿಕೆಟಿಗರಾದ ಸಲ್ಮಾನ್‌ ಬಟ್‌, ಮೊಹಮ್ಮದ್‌ ಅಮೀರ್‌, ಮೊಹಮ್ಮದ್‌ ಆಸಿಫ್ ಐದು ವರ್ಷ ಅಮಾನತುಗೊಂಡಿದ್ದರು. ಇತ್ತೀಚೆಗೆ ಮೊಹಮ್ಮದ್‌ ಅಮೀರ್‌ ತಮ್ಮ ತಪ್ಪನ್ನು ಒಪ್ಪಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next