ಹೆಡಿಂಗ್ಲೆ: ಆತಿಥೇಯ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ನಡು ವಣ ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಗುರುವಾರದಿಂದ ಹೆಡಿಂಗ್ಲೆಯಲ್ಲಿ ಆರಂಭವಾಗಲಿದೆ. ಐದು ಪಂದ್ಯಗಳ ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ಇಂಗ್ಲೆಂಡ್ ತಂಡವು ಸರಣಿಯನ್ನು ಜೀವಂತವಿರಿಸಿ ಕೊಳ್ಳಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಆತಿಥೇಯರ ಪಾಲಿಗೆ ಮಹತ್ವವಾದ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ಮೂರು ಬದಲಾವಣೆ ಮಾಡಿಕೊಂಡಿದೆ. ಕ್ರಿಸ್‌ವೋಕ್ಸ್, ಮಾರ್ಕ್ ವುಡ್ ಮತ್ತು ಮೊಯಿನ್ ಅಲಿ ತಂಡಕ್ಕೆ ಮರಳಿ ದ್ದಾರೆ. ಅವರಿಗಾಗಿ ಆ್ಯಂಡರ್ಸನ್, ಜೋಶ್ ಟಂಗ್, ಗಾಯಗೊಂಡಿರುವ ಓಲೀ ಪೋಪ್ ಅವರನ್ನು ಕೈಬಿಡಲಾಗಿದೆ.
ಆ್ಯಂಡರ್ಸನ್ ಅವರನ್ನು ಕೈಬಿಡು ವುದು ಬಹುತೇಕ ಖಚಿತವಾಗಿತ್ತು. ಲಾರ್ಡ್ಸ್ ಮತ್ತು ಎಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯಗಳಲ್ಲಿ ಅವರ ನಿರ್ವಹಣೆ ಕಳಪೆ ಮಟ್ಟದಲ್ಲಿತ್ತು. ಕೇವಲ ಮೂರು ವಿಕೆಟ್ ಕಿತ್ತಿರುವ ಅವರನ್ನು ಕೈಬಿಟ್ಟು ವೋಕ್ಸ್ ಅವರನ್ನು ತಂಡದಲ್ಲಿ ಸೇರಿಸಿ ಕೊಳ್ಳ ಲಾಗಿದೆ. 2021ರ ಸಪ್ಟೆಂಬರ್ ಬಳಿಕ ಯಾವುದೇ ಟೆಸ್ಟ್ ಆಡಿದಿದ್ದರೂ ವೋಕ್ಸ್ ಬೌಲಿಂಗ್ ಮತ್ತು ಬ್ಯಾಟಿಂಗ್ ನಿರ್ವಹಣೆ ಉತ್ತಮ ಮಟ್ಟದಲ್ಲಿದೆ.
ಲಾರ್ಡ್ಸ್ ಪಂದ್ಯದ ವೇಳೆ ಬೆರಳ ಗಾಯಕ್ಕೆ ಒಳಗಾಗಿದ್ದ ಮೊಯಿನ್ ಇದೀಗ ಚೇತರಿಸಿಕೊಂಡಿದ್ದು ಮೂರನೇ ಟೆಸ್ಟ್‌ನಲ್ಲಿ ಆಡಲಿದ್ದಾರೆ. ಟೆಸ್ಟ್‌ನಲ್ಲಿ 200 ವಿಕೆಟ್ ಪೂರ್ತಿಗೊಳಿಸಲು ಅವರಿಗೆ ಇನ್ನೆರಡು ವಿಕೆಟ್ ಬೇಕಾಗಿದೆ. ಪಾಕಿಸ್ಥಾನ ಪ್ರವಾಸದ ವೇಳೆ ತಂಡದಲ್ಲಿದ್ದ ಮಾರ್ಕ್ ವುಡ್ ಕೂಡ ತಂಡಕ್ಕೆ ಮರಳಿದ್ದು ಉತ್ತಮ ನಿರ್ವಹಣೆಯ
ವಿಶ್ವಾಸದಲ್ಲಿದ್ದಾರೆ.