Advertisement
ಬ್ರಿಸ್ಬೇನ್‌ನ “ಗಾಬಾ’ ಅಂಗಳದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುವ ಇಂಗ್ಲೆಂಡ್ ಕಪ್ತಾನ ಜೋ ರೂಟ್ ಅವರ ನಿರ್ಧಾರ ಫಲ ಕೊಡಲಿಲ್ಲ. ಅನುಭವಿ ಆರಂಭಕಾರ, ಮಾಜಿ ನಾಯಕ ಅಲಸ್ಟೇರ್ ಕುಕ್ ಆವರನ್ನು ಪಂದ್ಯದ 3ನೇ ಓವರಿನಲ್ಲೇ ವೇಗಿ ಮಿಚೆಲ್ ಸ್ಟಾರ್ಕ್ ಬಲಿ ಪಡೆಯುವುದರೊಂದಿಗೆ ಆಸೀಸ್‌ಗೆ ಮೇಲುಗೈ ಒದಗಿಸಿದರು. ಕುಕ್ ಗಳಿಕೆ ಕೇವಲ 2 ರನ್.
ಆದರೆ ದ್ವಿತೀಯ ವಿಕೆಟಿಗೆ ಜತೆಗೂಡಿದ ಮಾರ್ಕ್ ಸ್ಟೋನ್‌ಮ್ಯಾನ್ ಮತ್ತು ಜೇಮ್ಸ್ ವಿನ್ಸ್ ಬಂಡೆಯಂತೆ ನಿಂತು ಪರಿಸ್ಥಿತಿಯನ್ನು ಸುಧಾರಿಸಲು ಯತ್ನಿಸಿದರು. ಇದರಲ್ಲಿ ಯಶಸ್ವಿಯೂ ಆದರು. 2ನೇ ವಿಕೆಟಿಗೆ 105 ರನ್ ಒಟ್ಟುಗೂಡಿಸಿದರು. ಇವರ ಆಟ ಅತ್ಯಂತ ಎಚ್ಚರಿಕೆ ಹಾಗೂ ಅಷ್ಟೇ ನಿಧಾನ ಗತಿಯಿಂದ ಕೂಡಿತ್ತು. ಈ 105 ರನ್ನಿಗೆ ಬರೋಬ್ಬರಿ 52 ಓವರ್ ತೆಗೆದುಕೊಂಡರು. ಆದರೆ ಇಬ್ಬರೂ ಅರ್ಧ ಶತಕದೊಂದಿಗೆ ಜೀವನಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿದ್ದನ್ನು ಮರೆಯುವಂತಿಲ್ಲ. ಈ ಜೋಡಿ ಬೇರ್ಪಟ್ಟ ಬಳಿಕ ಪ್ಯಾಟ್ ಕಮಿನ್ಸ್ 2 ಪ್ರಬಲ ಆಘಾತವಿಕ್ಕಿದರು. ಒಟ್ಟಾರೆಯಾಗಿ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯವೇ ಮೇಲುಗೈ ಸಾಧಿಸಿದೆ ಎನ್ನಲಡ್ಡಿಯಿಲ್ಲ. 3ನೇ ಟೆಸ್ಟ್ ಆಡುತ್ತಿರುವ ಎಡಗೈ ಆರಂಭಕಾರ ಮಾರ್ಕ್ ಸ್ಟೋನ್‌ಮ್ಯಾನ್ 159 ಎಸೆತ ಎದುರಿಸಿ, ಕೇವಲ 3 ಬೌಂಡರಿ ನೆರವಿನಿಂದ 53 ರನ್ ಹೊಡೆದರು. ಇದು ಸ್ಟೋನ್‌ಮ್ಯಾನ್ ಅವರ 2ನೇ ಅರ್ಧ ಶತಕ. ಒಂದು ರನ್ನಿನಿಂದ ತಮ್ಮ ಜೀವನಶ್ರೇಷ್ಠ ಬ್ಯಾಟಿಂಗನ್ನು ಸುಧಾರಿಸಿಕೊಂಡರು. 8ನೇ ಟೆಸ್ಟ್ ಆಡಲಿಳಿದ ಬಲಗೈ ಆಟಗಾರ ಜೇಮ್ಸ್ ವಿನ್ಸ್ 170 ಎಸೆತಗಳನ್ನೆದುರಿಸಿ 83 ರನ್ ಬಾರಿಸಿದರು. ಇದು ಅವರ ಪ್ರಥಮ ಅರ್ಧ ಶತಕ. 12 ಬೌಂಡರಿಗಳ ಮೂಲಕ ಆಸೀಸ್ ಬೌಲರ್‌ಗಳನ್ನು ದಂಡಿಸಿದರು. ಸೆಂಚುರಿ ನಿರೀಕ್ಷೆ ಮೂಡಿಸಿದ್ದ ವಿನ್ಸ್ ದುರದೃಷ್ಟವಶಾತ್ ರನೌಟ್ ಸಂಕಟಕ್ಕೆ ಸಿಲುಕಿದರು.
Related Articles
Advertisement
5ನೇ ವಿಕೆಟಿಗೆ ಜತೆಗೂಡಿರುವ ಡೇವಿಡ್ ಮಾಲನ್-ಮೊಯಿನ್ ಅಲಿ ದಿನದ ಅಂತಿಮ ಅವಧಿಯ 10 ಓವರ್‌ಗಳ ಆಟವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇವರಿಬ್ಬರ ಜತೆಯಾಟದಲ್ಲಿ 51 ರನ್ ಒಟ್ಟುಗೂಡಿದೆ. ಇಂಗ್ಲೆಂಡ್ ಪಾಲಿಗೆ ಇವರಿಬ್ಬರ ಜತೆಯಾಟ ನಿರ್ಣಾಯಕ. ಬೇರ್‌ಸ್ಟೊ, ವೋಕ್ಸ್ ಆಟ ಬಾಕಿ ಇದೆ.ಆಸ್ಟ್ರೇಲಿಯ ಪರ ಕೆಮರಾನ್ ಬಾನ್‌ಕ್ರಾಫ್ಟ್ ಟೆಸ್ಟ್ ಪ್ರವೇಶ ಮಾಡಿದರು. ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-4 ವಿಕೆಟಿಗೆ 196 (ವಿನ್ಸ್ 83, ಸ್ಟೋನ್‌ಮ್ಯಾನ್ 53, ಮಾಲನ್ ಬ್ಯಾಟಿಂಗ್ 28, ರೂಟ್ 15, ಅಲಿ ಬ್ಯಾಟಿಂಗ್ 13, ಕುಕ್ 2, ಕಮಿನ್ಸ್ 59ಕ್ಕೆ 2, ಸ್ಟಾರ್ಕ್ 45ಕ್ಕೆ 1).