Advertisement
ಆಸ್ಟ್ರೇಲಿಯದ 327ಕ್ಕೆ ಉತ್ತರವಾಗಿ 2 ವಿಕೆಟಿಗೆ 192 ರನ್ ಮಾಡಿದ್ದ ಇಂಗ್ಲೆಂಡ್, ಗುರುವಾರದ ಆಟ ಮುಂದುವರಿಸಿ 9 ವಿಕೆಟಿಗೆ 491 ರನ್ ಪೇರಿಸಿದೆ. ಇದರಲ್ಲಿ ಕುಕ್ ಪಾಲು ಅಜೇಯ 244 ರನ್. ಇಂಗ್ಲೆಂಡ್ ಹೊಂದಿರುವ ಮುನ್ನಡೆ 164 ರನ್. ಪಂದ್ಯವಿನ್ನೂ 2 ದಿನ ಬಾಕಿ ಇದೆ. ಈಗಾಗಲೇ ಸರಣಿ ಸೋತಿರುವ ಆಂಗ್ಲರ ಪಡೆ ಕಾಂಗರೂಗಳಿಗೆ ಬಾಕ್ಸಿಂಗ್ ಡೇ ಪಂಚ್ ಕೊಟ್ಟಿàತೇ ಎಂಬುದೊಂದು ಕುತೂಹಲ.
ತೃತೀಯ ದಿನವಿಡೀ ಮೆಲ್ಬರ್ನ್ ಅಂಗಳದಲ್ಲಿ ಮೆರೆದಾಡಿದ ಕುಕ್ ಆಸ್ಟ್ರೇಲಿಯದ ಬೌಲರ್‌ಗಳನ್ನು ಕಾಡುತ್ತಲೇ ಹೋದರು. ಮ್ಯಾರಥಾನ್ ಬ್ಯಾಟಿಂಗಿನೊಂದಿಗೆ ಒಂದೊಂದೇ ದಾಖಲೆಯನ್ನು ವಶಪಡಿಸಿಕೊಳ್ಳುವುದೇ ಕುಕ್ ಕಾಯಕವಾಯಿತು. ಅವರಿಗೆ ಜಾನಿ ಬೇರ್‌ಸ್ಟೊ (22), ಮೊಯಿನ್ ಅಲಿ (20) ಮತ್ತು ಕ್ರಿಸ್ ವೋಕ್ಸ್ (26) ಸಾಮಾನ್ಯ ಬೆಂಬಲವಿತ್ತರು. ಆದರೆ 9ನೇ ವಿಕೆಟಿಗೆ ಆಗಮಿಸಿದ ಸ್ಟುವರ್ಟ್ ಬ್ರಾಡ್ ಇವರೆಲ್ಲರನ್ನೂ ಮೀರಿಸಿದರು; ಮಾಜಿ ಕಪ್ತಾನನೊಂದಿಗೆ ಶತಕದ ಜತೆಯಾಟ ನಿಭಾಯಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಕುಕ್-ಬ್ರಾಡ್ 18 ಚಿಲ್ಲರೆ ಓವರ್‌ಗಳಲ್ಲಿ ಭರ್ತಿ 100 ರನ್ ಪೇರಿಸಿದರು. ಇದು ಆ್ಯಶಸ್‌ನಲ್ಲಿ ಇಂಗ್ಲೆಂಡಿನ 9ನೇ ವಿಕೆಟಿಗೆ 91 ವರ್ಷಗಳ ಬಳಿಕ ದಾಖಲಾದ ಮೊದಲ ಶತಕದ ಜತೆಯಾಟ. ಇಲ್ಲಿ ಇನ್ನೊಂದು ಸ್ವಾರಸ್ಯವಿದೆ, ಕುಕ್ ಮತ್ತು ಬ್ರಾಡ್ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಜತೆಯಾಗಿ ಆಡುತ್ತಿರುವುದು ಇದು ಕೇವಲ 2ನೇ ಸಲ!
Related Articles
Advertisement
ಕುಕ್ 104ರಿಂದ ದಿನದಾಟ ಮುಂದುವರಿಸಿದ್ದರು. ಇವರೊಂದಿಗೆ 49 ರನ್ ಗಳಿಸಿ ಆಡುತ್ತಿದ್ದ ನಾಯಕ ಜೋ ರೂಟ್ 61 ರನ್ ಮಾಡಿ ಔಟಾದರು (133 ಎಸೆತ, 7 ಬೌಂಡರಿ). ಆಸ್ಟ್ರೇಲಿಯ ಪರ ಹ್ಯಾಝಲ್‌ವುಡ್, ಲಿಯೋನ್ ಮತ್ತು ಕಮಿನ್ಸ್ ತಲಾ 3 ವಿಕೆಟ್ ಉರುಳಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-327. ಇಂಗ್ಲೆಂಡ್-9 ವಿಕೆಟಿಗೆ 491 (ಕುಕ್ ಬ್ಯಾಟಿಂಗ್ 244, ರೂಟ್ 61, ಬ್ರಾಡ್ 56, ಹ್ಯಾಝಲ್‌ವುಡ್ 95ಕ್ಕೆ 3, ಲಿಯೋನ್ 109ಕ್ಕೆ 3, ಕಮಿನ್ಸ್ 117ಕ್ಕೆ 3).